ಬೆಂಗಳೂರು: ಮೈತ್ರಿ ಸರ್ಕಾರದ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದ ಕಾಂಗ್ರೆಸ್-ಜೆಡಿಎಸ್‌ನ ಶಾಸಕರಿಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಬಿಜೆಪಿ ನಾಯಕ ಆರ್. ಅಶೋಕ್ ಸ್ಪಷ್ಟಪಡಿಸಿದ್ದಾರೆ.
ರಾಜೀನಾಮೆ ನೀಡಿ ಮೈತ್ರಿ ಸರ್ಕಾರದ ಪತನಕ್ಕೆ ಕಾರಣವಾದ ಎಲ್ಲಾ 17 ಶಾಸಕರನ್ನು ಅನರ್ಹಗೊಳಿಸಿ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ ಭಾನುವಾರ ಬೆಳಿಗ್ಗೆ ತೀರ್ಪು ನೀಡಿದ್ದಾರೆ. ರಾಜೀನಾಮೆ ನೀಡಿ ಮುಂಬೈನಲ್ಲಿ ವಾಸ್ತವ್ಯ ಹೂಡಿದ್ದ ಶಾಸಕರಲ್ಲಿ ಕೆಲವರು ನಿನ್ನೆ ತಡರಾತ್ರಿ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಅವರ ಬೆನ್ನಲ್ಲೇ ಬಿಜೆಪಿ ನಾಯಕ ಆರ್.ಅಶೋಕ್ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು.
ಈ ಸಂದರ್ಭದಲ್ಲಿ ಅನರ್ಹ ಶಾಸಕರೊಂದಿಗೆ ಬಿಜೆಪಿ ಸಂಪರ್ಕದ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಆರ್. ಅಶೋಕ್, "ರಾಜೀನಾಮೆ ಕೊಟ್ಟ ಮೈತ್ರಿ ಸರ್ಕಾರದ ರೆಬೆಲ್ ಶಾಸಕರಿಗೂ ನಮಗೂ ಏನೂ ಸಂಬಂಧವಿಲ್ಲ" ಎಂದು ಸ್ಪಷ್ಟಪಡಿಸಿದರು.
ರಾಜೀನಾಮೆ ನೀಡಿದ್ದ ಶಾಸಕರ ಹಿಂದೆ ನಾವು ಇರಲಿಲ್ಲ. ಅವರಿಗೂ ನಮಗೂ ಯಾವುದೇ ರೀತಿಯ ಸಂಬಂಧವಿಲ್ಲ. ನಾನು ಮತ್ತು ಅಶ್ವಥ್ ಇಬ್ಬರೂ ಬೇರೆ ಕೆಲಸದ ಹಿನ್ನೆಲೆಯಲ್ಲಿ ಒಟ್ಟಿಗೆ ತೆರಳಿದ್ದೆವು ಎಂದರು.
ಈ ಸಂದರ್ಭದಲ್ಲಿ ರಾಜೀನಾಮೆ ನೀಡಿದ್ದ 17 ಮಂದಿ ಅತೃಪ್ತ ಶಾಸಕರನ್ನು ಅನರ್ಹಗೊಳಿಸಿದ ಸ್ಪೀಕರ್ ನಡೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಆರ್. ಅಶೋಕ್, ಪ್ರತಿ ಶಾಸಕರಿಗೂ ರಾಜೀನಾಮೆ ನೀಡುವ ಅಧಿಕಾರವಿರುತ್ತದೆ. ಯಾರೂ ಕೂಡ ಇಂತಹ ತೀರ್ಪು ನೀಡಿರಲಿಲ್ಲ. ರಾಜ್ಯದಲ್ಲಿ ಇದೊಂದು ರೀತಿಯ ದ್ವೇಷದ ರಾಜಕಾರಣ. ಸ್ಪೀಕರ್ ಹುದ್ದೆಗೆ ಗೌರವ ಕೊಟ್ಟು ರಮೇಶ್ ಕುಮಾರ್ ಅವರು ತೀರ್ಮಾನ ಮಾಡಬೇಕಿತ್ತು. ಆದರೆ ಅವರೇಕೆ ಇಂತಹ ತೀರ್ಪು ನೀಡಿದರು? ಯಾರ ಒತ್ತಡ ಅವರ ಮೇಲಿತ್ತು? ನನಗೆ ಅರ್ಥವಾಗುತ್ತಿಲ್ಲ ಎಂದು ಹೇಳಿದರು.