ಬೆಂಗಳೂರು : ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಪ್ರವಾಸದಲ್ಲಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕೆಟ್ಟುಹೋದ ಗ್ರಾಮ ಫೋನನ್ನು ಮತ್ತೆ ಮತ್ತೆ ಹಾಕುತ್ತಿದ್ದಾರೆ ಎಂದು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ವ್ಯಂಗ್ಯವಾಡಿದ್ದಾರೆ.
ಇಂದಿಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶೋಭಾ ಕರಂದ್ಲಾಜೆ, ಈಗಾಗಲೇ ಹಲವು ಬಾರು ಕರ್ನಾಟಕದಲ್ಲಿ ಚುನಾವಣಾ ಪ್ರವಾಸ ಮಾಡಿರುವ ರಾಹುಲ್ ಗಾಂಧಿ ಹೇಳಿದ್ದನ್ನೇ ಹೇಳುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಯಡಿಯೂರಪ್ಪ ವಿರುದ್ಧ ಮಾತನಾಡುತ್ತಿರುವುದಲ್ಲದೆ, ಶಿವಮೊಗ್ಗಕ್ಕೆ ಹೋಗಿ ಯಡಿಯೂರಪ್ಪ ಅವರನ್ನೇ ತೆಗಳುವ ಧೈರ್ಯ ಮಾಡಿದ್ದಾರೆ. ಹಾಗಿದ್ದರೆ ಶಿವಮೊಗ್ಗಕ್ಕೆ ಕಾಂಗ್ರೆಸ್ ಕೊಡುಗೆ ಏನು? ಮೈಸೂರಿನಲ್ಲಿ ಸಿದ್ದರಾಮಯ್ಯ ಅವರ ಕೊಡುಗೆ ಏನು ಎಂಬುದನ್ನು ಪಟ್ಟಿ ಮಾಡಲಿ. ಜಿಲ್ಲಾ ಉಸ್ತುವಾರಿಯಾಗಿದ್ದಾಗ ನಾನು ಮಾಡಿದ ಅಭಿವೃದ್ಧಿ ಕಾರ್ಯಗಳ ಪಟ್ಟಿಯನ್ನೂ ಕೊಡುತ್ತೇನೆ ಎಂದು ಶೋಭಾ ಸವಾಲು ಹಾಕಿದರು.
ರಾಜ್ಯದಲ್ಲಿ 90 ವಿಧಾನಸಭಾ ಕ್ಷೇತ್ರಗಳಿಗೆ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಶ್ರಮಶಕ್ತಿ ಯೋಜನೆ ಹೆಸರಲ್ಲಿ ನೀತಿ ಸಂಹಿತೆ ಜಾರಿಯಾಗುವ ಮೊದಲು 17 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಫಲಾನುಭವಿಗಳ ಪಟ್ಟಿಯೇ ಇಲ್ಲ. ಇದು ಚುನಾವಣಾ ಖರ್ಚಿಗಾಗಿ ಬಳಸಿಕೊಂಡಿರುವ ಹಣ ಎಂದು ಶೋಭಾ ಕರಂದ್ಲಾಜೆ ಆರೋಪಿಸಿದರು.
ಕಾಂಗ್ರೆಸ್ ತಾಲಿಬಾನ್ ಸಂಸ್ಕೃತಿಯನ್ನು ಪಾಲಿಸುತ್ತಿದೆ ಎಂದು ಆರೋಪಿಸಿದ ಸೋಭಾ ಕರಂದ್ಲಾಜೆ ಅವರು, ಚುನಾವಣೆ ಹಿನ್ನೆಲೆಯಲ್ಲಿ ಬಾಗಲಕೋಟೆಯಲ್ಲಿ ಬಿಜೆಪಿ ಧ್ವಜ ಹಾಕಲು ಅವಕಾಶ ನೀಡುತ್ತಿಲ್ಲ. ಕಾರ್ಯಕರ್ತರು ಹಾಗೂ ಅಭ್ಯರ್ಥಿಗಳು ತಮ್ಮ ನಿವಾಸಗಳ ಮೇಲೂ ಧ್ವಜ ಹಾಕಲು ಕಮಲದ ಚಿಹ್ನೆ ಬರೆಯಲು ಅವಕಾಶ ಕೊಡಲು ಅಧಿಕಾರಿಗಳು ಅವಕಾಶ ನೀಡುತ್ತಿಲ್ಲ. ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರ್ಕಾರ ತಮಗೆ ಬೇಕಾದ ಅಧಿಕಾರಿಗಳನ್ನು ತಮಗೆ ಬೇಕಾದ ಸ್ಥಳದಲ್ಲಿ ನಿಯೋಜಿಸಿಕೊಂಡಿದೆ ಎಂದು ಶೋಭಾ ಆಕ್ರೋಶ ವ್ಯಕ್ತಪಡಿಸಿದರು.