ಕಾರವಾರ: ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆ ನೀಡುವ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಇಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬಗ್ಗೆ ಮತ್ತೆ ವ್ಯಂಗ್ಯ ಮಾಡಿದ್ದಾರೆ.
ಹೊನ್ನಾವರದ ನಗರ ಬಸ್ತಿಕೇರಿಯಲ್ಲಿ ಮಂಗಳವಾರ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅನಂತ್ ಕುಮಾರ್ ಹೆಗಡೆ, ರಫೇಲ್ ಎಂದರೆ ರಾಹುಲ್ ಗಾಂಧಿ ತಾವು ಸಣ್ಣವರಿದ್ದಾಗ ಆಡುತ್ತಿದ್ದ ಮೂರು ಚಕ್ರದ ಸೈಕಲ್ ಅಂದುಕೊಂಡಿದ್ದಾರೆ. ಏಕೆಂದರೆ ರಫೇಲ್ಗೂ ಮೂರು ಚಕ್ರ ಇದೆ. ಹೀಗಾಗಿ ಅದನ್ನೆ ರಫೇಲ್ ಎಂದು ಮಾತನಾಡುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
ಮುಂದುವರೆದು ಮಾತನಾಡುತ್ತಾ, ಈ ಹಿಂದೆ ಗಾಂಧಿ ಕುಟುಂಬದವರನ್ನು ಮಾತನಾಡಿಸಬೇಕು ಎಂದರೆ ಬಹಳ ಕಷ್ಟವಿತ್ತು. ಎಂಥಹ ಮಹಾನ್ ನಾಯಕನೇ ಆಗಿದ್ದರೂ ಕಾದು ಭೇಟಿ ಮಾಡಬೇಕಿತ್ತು. ಆದರೆ ಕಾಂಗ್ರೆಸ್ ಪರಿಸ್ಥಿತಿ ಈಗ ಹೇಗಾಗಿದೆ ಅಂದರೆ ಸ್ವತಃ ರಾಹುಲ್ ಗಾಂಧಿಯೇ ಹೆಚ್.ಡಿ.ದೇವೇಗೌಡರ ಮನೆಗೆ ಹೋಗಿ ಕುಳಿತುಕೊಂಡು, ಒಪ್ಪಂದ ಮಾಡಿಕೊಳ್ಳುವಂತೆ ಗೋಗರೆಯುವಂತಾಗಿದೆ ಎಂದು ಟೀಕಿಸಿದರು.
ಸೋಮವಾರವಷ್ಟೇ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಸಾಕ್ಷ್ಯ ಕೇಳಿದ್ದ ಕಾಂಗ್ರೆಸ್ ಗೆ ತಿರುಗೇಟು ನೀಡಿದ್ದ ಅನಂತ್ ಕುಮಾರ್ ಹೆಗಡೆ, ರಾಹುಲ್ ಗಾಂಧಿ ತಾವು ಬ್ರಾಹ್ಮಣ ಎಂದಕ್ಕೆ ಡಿಎನ್ಎ ಸಾಕ್ಷಿ ನೀಡಿ ಸಾಬೀತುಪಡಿಸಲಿ ಎಂದು ಕುಟುಕಿದ್ದರು. ಈ ಬೆನ್ನಲ್ಲೇ ಈಗ ಮತ್ತೊಂದು ವಿವಾದಾತ್ಮಕ ಹೇಳಿಕೆ ನಿಡುವ ಮೂಲಕ ಭಾರೀ ಚರ್ಚೆಗೆ ಗ್ರಾಸವಾಗಿದ್ದಾರೆ.