ಬೆಂಗಳೂರು: ರಾಜ್ಯ ಸರ್ಕಾರ ವ್ಯಾಪ್ತಿಯ ಪಿಎಸ್‌ಐ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ಅಕ್ರಮ ನೇಮಕಾತಿಯ ಹಗರಣ ಹೊರಬರುತ್ತಿರುವ ಬೆನ್ನಲ್ಲೇ ಕೇಂದ್ರ ಸರ್ಕಾರದ ರೈಲ್ವೆ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂಬ ನಕಲಿ ನೋಟಿಫಿಕೇಶನ್ ಹರಿದಾಡಲು ಪ್ರಾರಂಭವಾಗಿದೆ. ಈ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಕ್ರಮ ಕೈಗೊಂಡ ಇಲಾಖೆ ದೂರು ಪಡೆದುಕೊಂಡು ತನಿಖೆಗೆ ಮುಂದಾಗಿದೆ.
ಇದು ನಿರುದ್ಯೋಗಿಗಳನ್ನು ಮರಳು ಮಾಡಿ ದುಡ್ಡು ಮಾಡುವ ಜಾಲವಿರಬಹುದು ಎಂದು ಅಧಿಕಾರಿಗಳು ಸಂಶಯ ವ್ಯಕ್ತಪಡಿಸಿದ್ದಾರೆ. ಇನ್ನು ಈ ಬಗ್ಗೆ ಎಚ್ಚರಿಕೆ ಸಂದೇಶ ರವಾನಿಸಿರುವ ರೈಲ್ವೆ ಇಲಾಖೆಯು, "ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುತ್ತೇವೆಂದು ನಂಬಿಸಿ ಮೋಸ ಮಾಡುವ ರಾಕೆಟ್‌ಗಳಿರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಇಂತಹವರಿಂದ ಹುಷಾರಾಗಿರಿ" ಎಂದು ಹೇಳಿದೆ. ಜತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಜಾಗೃತಿಯನ್ನುಂಟು ಮಾಡುವ ಕೆಲಸವನ್ನು ಮಾಡುತ್ತಿದೆ.
"ನೈಋತ್ಯ ರೈಲ್ವೆ ವಲಯದ ಜಿಎಂ ವ್ಯಾಪ್ತಿಯ (ಮಹಾಪ್ರಬಂಧಕರು) ಕೋಟಾದಡಿ ಟೆಕ್ನಿಕಲ್ ಹಾಗೂ ನಾನ್ ಟೆಕ್ನಿಕಲ್ 2800 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ" ಎಂಬ ವಿವಿಧ ಸೂಚನೆಗಳುಳ್ಳ ಪತ್ರ ಇದೀಗ ಎಲ್ಲೆಡೆ ಹರಿದಾಡುತ್ತಿವೆ. ಇಲ್ಲಿ ಸಾರ್ವಜನಿಕವಾಗಿ ನೇಮಕಾತಿ ಪ್ರಕ್ರಿಯೆ ನಡೆಸಬಾರದೆಂದು ಸಹ ಉಲ್ಲೇಖಿಸಲಾಗಿದೆ.
ಜಿಎಂ ಕೋಟಾದಡಿ ಹೊರಡಿಸಿರುವ ನೋಟಿಫಿಕೇಶನ್‌ನಲ್ಲಿ ಜಿಎಂ ಸಹಿ ಹಾಗೂ ಸೀಲುಗಳನ್ನು ನಕಲು ಮಾಡಿ ಹಾಕಲಾಗಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.