ಬೆಂಗಳೂರು: ದಲಿತ ಹೋರಾಟಗಾರ, ಹಿರಿಯ ಸಾಹಿತಿ ಕೆ.ಬಿ.ಸಿದ್ದಯ್ಯ ಅವರು ಶುಕ್ರವಾರ ಮುಂಜಾನೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮೃತರಿಗೆ 65 ವರ್ಷ ವಯಸ್ಸಾಗಿತ್ತು.
ಶುಕ್ರವಾರ ಮಧ್ಯಾಹ್ನ ತುಮಕೂರಿಗೆ ಪಾರ್ಥಿವ ಶರೀರ ತಂದು, ಟೌನ್ ಹಾಲ್ ಬಳಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು. ಬಳಿಕ ಸಂಜೆ ತೋಟದಲ್ಲಿ ಅಂತ್ಯಕ್ರಿಯೆ ನೆರವೇರಿಸುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ. ಮೃತರು ಪತ್ನಿ, ಇಬ್ಬರು ಪುತ್ರಿಯರು ಮತ್ತು ಒಬ್ಬ ಪುತ್ರನನ್ನು ಅಗಲಿದ್ದಾರೆ.
ಇತ್ತೀಚೆಗಷ್ಟೇ ಹೆಬ್ಬೂರು ಹೋಬಳಿಯ ಸುಗ್ಗನ ಹಳ್ಳಿ-ಕೆಂಕೆರೆ ಬಳಿಯ ತೋಟಕ್ಕೆ ತೆರಳುವ ಸಂದರ್ಭದಲ್ಲಿ ಅವರ ಕಾರು ಅಪಘಾತಕ್ಕೀಡಾದ ಕಾರಣ ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ.
1970ರ ದಶಕದಲ್ಲಿ ಸಾಕಷ್ಟು ದಲಿತ ಚಳವಳಿಯಲ್ಲಿ ಭಾಗಿಯಾಗಿದ್ದ ಮಾಗಡಿ ತಾಲೂಕಿನವರಾದ ಕೆ.ಬಿ.ಸಿದ್ದಯ್ಯ ಅವರು, ಬಕಾಲ, ದಕ್ಲಕಥಾದೇವಿ ಕಾವ್ಯ, ಅನಾತ್ಮ ಎಂಬ ಖಂಡಕಾವ್ಯಗಳ ಮೂಲಕ ಕನ್ನಡ ಕಾವ್ಯಲೋಕವನ್ನು ಶ್ರೀಮಂತಗೊಳಿಸಿದವರು. ಇವರಿಗೆ ರಾಜ್ಯೋತ್ಸವ ಪ್ರಶಸ್ತಿ, ಕಿರಂ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಸಂದಿವೆ.