ಮೈಸೂರು : ಮಾಜಿ ಸಚಿವ ಹರತಾಳು ಹಾಲಪ್ಪ ಅವರು ಕಾಂಗ್ರೆಸ್'ಗೆ ಮರಳುವ ಸಂಬಂಧ ಹೈಕಮಾಂಡ್ ಜೊತೆ ಮಾತುಕತೆ ನಡೆಸಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ತಮ್ಮ ತವರು ಜಿಲ್ಲೆಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ಕಾರ್ಯದಲ್ಲಿ ನಿರತರಾಗಿರುವ ಸಿದ್ದರಾಮಯ್ಯ ಅವರು ಸುದ್ದಿಗಾರರೊಂದಿಗೆ ಮಾತನಾಡಿ ಈ ವಿಚಾರ ತಿಳಿಸಿದ್ದಾರೆ. "ಹರತಾಳು ಹಾಲಪ್ಪಾ ವಿರುದ್ಧ ಕೆಲವು ಪ್ರಕರಣಗಳಿದ್ದವು ಎಂಬುದನ್ನು ಹೊರತು ಪಡಿಸಿದರೆ ಮತ್ಯಾವ ಆರೋಪಗಳಿಲ್ಲ. ಅಷ್ಟಕ್ಕೂ ಈಗ ಅವರ ಮೇಲಿದ್ದ ಕ್ರಿಮಿನಲ್ ಕೇಸ್ ಖುಲಾಸೆ ಆಗಿದೆ. ಹಿಂದುಳಿದ ವರ್ಗದ ನಾಯಕರಾದ ಹಾಲಪ್ಪ ಅವರ ಸಿದ್ಧಾಂತ ನಮ್ಮ ಸಿದ್ಧಾಂತಕ್ಕೆ ಹೊಂದಾಣಿಕೆ ಆಗುತ್ತದೆ. ಪಕ್ಷ ಸೇರ್ಪಡೆಗೆ ಯಾವುದೇ ಅಡ್ಡಿ ಇಲ್ಲ" ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಹರತಾಳು ಹಾಲಪ್ಪ ಬಿಜೆಪಿ ಬೆಂಬಲಿಗರಾಗಿದ್ದು, ಸಾಗರ ಕ್ಷೇತ್ರ ಟಿಕೆಟ್ ಕೈ ತಪ್ಪಿರುವ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಯಡಿಯೂರಪ್ಪ ವಿರುದ್ಧ ಸಿಡಿದೆದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸೇರುವ ಪ್ರಸ್ತಾಪ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನನ್ನ ವಿರುದ್ಧದ ಯಾವುದೇ ಆರೋಪಗಳಲ್ಲಿಯೂ ಹುರುಳಿಲ್ಲ: ಸಿದ್ದರಾಮಯ್ಯ
ವಿಶ್ರಾಂತಿ ಪಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಬಂಡೀಪುರಕ್ಕೆ ಹೋಗಿದ್ದನ್ನು ಟೀಕಿಸಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ, ಅಲ್ಲಿ ಸಿದ್ದರಾಮಯ್ಯ ಹಣದ ಬಂಡಲ್ ಸಿದ್ದಪದಿಸುತ್ತಿದ್ದರು ಎಂದು ಆರೋಪಿಸಿದ್ದರು. ಇದಕ್ಕೆ ಇಂದಿಲ್ಲಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಚುನಾವಣೆ ಸಂದರ್ಭದಲ್ಲಿ ತಾವು ಮಾಡಿದ್ದನ್ನು ನೆನೆಪಿಸಿಕೊಂಡು ಈ ರಿತು ಹೇಳಿಕೆ ಕೊಡುತ್ತಿದ್ದಾರೆ ಎಂದು ಕುಮಾರಸ್ವಾಮಿಗೆ ಟಾಂಗ್ ನೀಡಿದರು.
ಅಷ್ಟೇ ಅಲ್ಲದೆ, ಅರ್ಕಾವತಿ ಭೂ ಹಗರಣ ಮತ್ತು ಹೂಬ್ಲೆಟ್ ವಾಚ್ ಸಂಬಂಧ ನನ್ನ ವಿರುದ್ಧ ಒಬ್ಬನೇ ವ್ಯಕ್ತಿ ಹಲವು ಬಾರಿ ದೂರುಗಳನ್ನು ನೀಡಿದ್ದಾನೆ. ಆದರೆ ಈ ದೂರುಗಳಲ್ಲಿ ಯಾವುದೇ ಹುರುಳಿಲ್ಲ. ಇದೆಲ್ಲಾ ಬಿಜೆಪಿಯವರು ಹಬ್ಬಿಸಿದ ವ್ಯವಸ್ಥಿತವಾದ ಸುಳ್ಳು ವದಂತಿ ಎಂದು ಸಿದ್ದರಾಮಯ್ಯ ಹೇಳಿದರು.