ಸಿದ್ದರಾಮಯ್ಯ ಅವರು ಮೊದಲಿನಿಂದಲೂ ನನ್ನ ಹಿತೈಷಿ: ಹೆಚ್.ಡಿ.ರೇವಣ್ಣ

ಸಿದ್ದರಾಮಯ್ಯ ಅವರು ಮೊದಲಿನಿಂದಲೂ ನನ್ನ ಹಿತೈಷಿಗಳು. ನಾನು ಅವರ ಅಭಿಮಾನಿ ಕೂಡ ಹೌದು ಎಂದು ಸಚಿವ ಹೆಚ್.ಡಿ.ರೇವಣ್ಣ ಹೇಳಿದ್ದಾರೆ.

Updated: May 16, 2019 , 03:36 PM IST
ಸಿದ್ದರಾಮಯ್ಯ ಅವರು ಮೊದಲಿನಿಂದಲೂ ನನ್ನ ಹಿತೈಷಿ: ಹೆಚ್.ಡಿ.ರೇವಣ್ಣ
Pic Courtesy: Facebook

ಹಾಸನ: 'ಹೆಚ್.ಡಿ.ರೇವಣ್ಣ ಸಹ ಮುಖ್ಯಮಂತ್ರಿ ಸ್ಥಾನಕ್ಕೆ ಅರ್ಹರು' ಎಂದು ಹೇಳಿರುವ ಮಾಜಿ ಸಿಎಂ ಹಾಗೂ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರ ಹೇಳಿಕೆಗೆ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಧನ್ಯವಾದ ಹೇಳಿದ್ದಾರೆ.

ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್.ಡಿ.ರೇವಣ್ಣ ಅವರು, ಸಿದ್ದರಾಮಯ್ಯ ಅವರು ಯಾವ ಹಿನ್ನೆಲೆಯಲ್ಲಿ ಹಾಗೆ ಹೇಳಿದ್ದಾರೆ ಎಂಬುದು ನನಗೆ ತಿಳಿದಿಲ್ಲ. ಆದರೆ, ಅವರು ಮೊದಲಿನಿಂದಲೂ ನನ್ನ ಹಿತೈಷಿಗಳು. ನಾನು ಅವರ ಅಭಿಮಾನಿ ಕೂಡ ಹೌದು. ಆದರೆ ಹೆಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿರುವಾಗ ನಾನು ಸಿಎಂ ಆಗುವ ಪ್ರಶ್ನೆಯೇ ಬರುವುದಿಲ್ಲ. ಈ ವಿಚಾರಕ್ಕೆ ನಾನು, ಕುಮಾರಸ್ವಾಮಿ ಪೈಪೋಟಿ ನಡೆಸುವ ಮಾತೇ ಇಲ್ಲ. ಬಹುಶಃ ಸಿದ್ದರಾಮಯ್ಯ ಅವರು ನನ್ನ ಮೇಲಿನ ಗೌರವದಿಂದ ಹಾಗೆ ಹೇಳಿರಬಹುದು ಎಂದಿದ್ದಾರೆ.

ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಎಂದೋ ಮುಖ್ಯಮಂತ್ರಿ ಆಗಬೇಕಿತ್ತು ಎಂಬ ಸಿಎಂ ಕುಮಾರಸ್ವಾಮಿ ಅವರ ಹೇಳಿಕೆಗೆ ಟ್ವೀಟ್ ಮೂಲಕ ತಿರುಗೇಟು ನೀಡಿದ್ದ ಸಿದ್ದರಾಮಯ್ಯ ಅವರು, ಕಾಂಗ್ರೆಸ್​, ಜೆಡಿಎಸ್​ನಲ್ಲಿ ಸಿಎಂ ಸ್ಥಾನದ ಅರ್ಹತೆ ಉಳ್ಳವರು ಬಹಳ ಜನರಿದ್ದು ಅವರಲ್ಲಿ ರೇವಣ್ಣ ಕೂಡಾ ಒಬ್ಬರು ಎಂದು ಹೇಳಿದ್ದರು. ಸದ್ಯ ಸಿಎಂ ಕುಮಾರಸ್ವಾಮಿ ಹೇಳಿಕೆ, ಸಿದ್ದರಾಮಯ್ಯ ಅವರ ಟ್ವೀಟ್ ಗಳು ಭಾರೀ ಚರ್ಚೆಗೆ ಗ್ರಾಸವಾಗಿದೆ.