ಸುಪ್ರೀಂಕೋರ್ಟ್ ನನ್ನ ಮೇಲಿಟ್ಟಿರುವ ವಿಶ್ವಾಸ ಉಳಿಸಿಕೊಳ್ಳುವೆ: ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್

ಅತೃಪ್ತ ಶಾಸಕರ ರಾಜೀನಾಮೆ ವಿಚಾರದಲ್ಲಿ ಮನಸೋ ಇಚ್ಛೆ ವಿಳಂಬ ಮಾಡುವ ಉದ್ದೇಶವಿಲ್ಲ- ಖಾಸಗಿ ವಾಹಿನಿ ಜತೆ ಮಾತನಾಡುತ್ತ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ ಸ್ಪಷ್ಟನೆ

Last Updated : Jul 17, 2019, 11:48 AM IST
ಸುಪ್ರೀಂಕೋರ್ಟ್ ನನ್ನ ಮೇಲಿಟ್ಟಿರುವ ವಿಶ್ವಾಸ ಉಳಿಸಿಕೊಳ್ಳುವೆ: ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ title=
File Image

ಬೆಂಗಳೂರು: ಅತೃಪ್ತ ಶಾಸಕರ ರಾಜೀನಾಮೆ ಅಂಗೀಕಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠ ಬುಧವಾರ ಬೆಳಗ್ಗೆ ಮಹತ್ವದ ಮಧ್ಯಂತರ ತೀರ್ಪನ್ನು ಪ್ರಕಟಿಸಿದ್ದು, ರಾಜೀನಾಮೆ ಬಗ್ಗೆ ಸ್ಪೀಕರ್ ನಿರ್ಧರಿಸಲಿ. ಅನರ್ಹತೆಯ ಬಗ್ಗೆಯೂ ಸ್ಪೀಕರ್ ನಿರ್ಧಾರ ಕೈಗೊಳ್ಳಬಹುದು ಎಂದು ತಿಳಿಸಿದೆ. ಅಲ್ಲದೆ ಕಾಲಮಿತಿಯಲ್ಲಿ ಸ್ಪೀಕರ್ ನಿರ್ಧಾರ ಕೈಗೊಳ್ಳಬೇಕು ಎಂದು ಆದೇಶಿಸಿದೆ.

ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಪ್ರತಿಕ್ರಿಯೆ ನೀಡಿರುವ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್, ಸರ್ವೋಚ್ಚ ನ್ಯಾಯಾಲಯದ ತೀರ್ಪಿನಿಂದಾಗಿ ನನ್ನ ವಿಶ್ವಾಸ ಮತ್ತಷ್ಟು ಹೆಚ್ಚಾಗಿದೆ. ಸಂವಿಧಾನದ ಅಡಿಯಲ್ಲಿ ಗೌರವಯುತವಾಗಿ ಸುಪ್ರೀಂಕೋರ್ಟ್ ಆದೇಶವನ್ನು ಪಾಲಿಸುತ್ತೇನೆ. ವಿಳಂಬ ಮಾಡದೆ ಸೂಕ್ತ ಸಮಯಕ್ಕೆ ನಿರ್ಧಾರ ಕೈಗೊಳ್ಳುತ್ತೇನೆ. ಸುಪ್ರೀಂಕೋರ್ಟ್ ನನ್ನ ಮೇಲಿಟ್ಟಿರುವ ವಿಶ್ವಾಸ ಉಳಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

ಮನಸೋ ಇಚ್ಛೆ ವಿಳಂಬ ಮಾಡುವ ಉದ್ದೇಶವಿಲ್ಲ:
ಅತೃಪ್ತ ಶಾಸಕರ ರಾಜೀನಾಮೆ ವಿಚಾರದಲ್ಲಿ ಮನಸೋ ಇಚ್ಛೆ ವಿಳಂಬ ಮಾಡುವ ಉದ್ದೇಶವಿಲ್ಲ ಎಂದು ಖಾಸಗಿ ವಾಹಿನಿ ಜತೆ ಮಾತನಾಡುತ್ತ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ತೀರ್ಮಾನ ಕೈಗೊಳ್ಳಲು ಕಾಲಮಿತಿ ನಿಗದಿ ಮಾಡದೆ ಇರುವುದು ಸುಪ್ರೀಂಕೋರ್ಟ್ ನನ್ನ ಮೇಲೆ ಹೊರಿಸಿದ ದೊಡ್ಡ ಜವಾಬ್ದಾರಿಯಾಗಿದೆ.  ಸರ್ವೋಚ್ಚ ನ್ಯಾಯಾಲಯದ ವಿಶೇಷ ಗೌರವವನ್ನು ಉಳಿಸಿಕೊಂಡು ಸಂವಿಧಾನದ ಚೌಕಟ್ಟು, ನಿಯಮಾವಳಿ ಒಳಗೆ ನಾನು ಹೆಜ್ಜೆ ಇಡುತ್ತೇನೆ ಎಂದು ಸ್ಪೀಕರ್ ತಿಳಿಸಿದರು.

ಶಾಸಕರನ್ನು ವಿಧಾನಸಭೆಗೆ ಹಾಜರಾಗುವಂತೆ ಮಾಡುವುದು ನನ್ನ ಕೆಲಸವಲ್ಲ:
ವಿಧಾನಸಭೆಯಲ್ಲಿ ಶಾಸಕರು ಹಾಜರಾಗುವಂತೆ ಮಾಡುವುದು ಆಯಾ ಪಕ್ಷಗಳ ಕೆಲಸವೇ ಹೊರತು, ನನ್ನ ಕೆಲಸವಲ್ಲ. ಶಾಸಕರು ಬಂದ ದಿನ ಹಾಜರಿ ಸಿಗುತ್ತಾದೆ, ಬಾರದ ದಿನ ಗೈರು ಹಾಜರಿ ಎಂದು ಪರಿಗಣಿಸಲಾಗುತ್ತದೆ. ನಾನೇನಿದ್ದರೂ ಅಂಪೈರ್ ಅಷ್ಟೇ. ನನ್ನ ಕರ್ತವ್ಯ ನಾನು ಮಾಡುತ್ತೇನೆ ಎಂದು ಸಭಾಪತಿ ಹೇಳಿದ್ದಾರೆ.

Trending News