ಬೆಂಗಳೂರು: ಪಠ್ಯಪುಸ್ತಕ ಪರಿಷ್ಕರಣೆ ವಿವಾದ ಇನ್ನೂ ತಣ್ಣಗಾಗಿಲ್ಲ. ಪಠ್ಯದಲ್ಲಿ ವಿಶ್ವಗುರು ಬಸವಣ್ಣನವರ ವಿವಾದದ ಬಳಿಕ ಇದೀಗ ಡಾ.ಬಿ.ಆರ್.ಅಂಬೇಡ್ಕರ್ ವಿವಾದ ಸದ್ದು ಮಾಡುತ್ತಿದೆ. ಎಲ್ಲವೂ ತಣ್ಣಗಾಯ್ತು ಎಂದುಕೊಂಡಿದ್ದ ಶಿಕ್ಷಣ ಇಲಾಖೆಗೆ ಈಗ ಮತ್ತೆ ತಲೆ ಬಿಸಿ ಪ್ರಾರಂಭವಾಗಿದೆ. ವಿವಾದ ಮುಗಿಯಿತು ಎಂದು ನಿಟ್ಟುಸಿರು ಬಿಟ್ಟಿದ್ದ ಸಿಎಂ ಬಸವರಾಜ್ ಬೊಮ್ಮಾಯಿಗೆ ಮತ್ತೆ ಟೆನ್ಶನ್ ಶುರುವಾಗಿದೆ.
ಪಠ್ಯ ಪರಿಷ್ಕರಣೆ ವಿವಾದವು ರಾಜ್ಯ ಬಿಜೆಪಿ ಸರ್ಕಾರವನ್ನು ಬಿಟ್ಟೂ ಬಿಡದೇ ಕಾಡುತ್ತಿದೆ. ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಮಹಾಪ್ರಮಾದವನ್ನೇ ಮಾಡಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಇದ್ದ ಸಂವಿಧಾನ ಶಿಲ್ಪಿ ಎಂಬ ಬಿರುದನ್ನೇ ಚಕ್ರತೀರ್ಥ ಸಮಿತಿ ಕೈಬಿಟ್ಟಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಬಹುತ್ವಕ್ಕೆ ಮಾರಕವಾದ ಪಠ್ಯ ಹೇರಲು ಬಿಡುವುದಿಲ್ಲ: ಕನ್ನಡದಲ್ಲಿ ರಾಹುಲ್ ಗಾಂಧಿ ಟ್ವೀಟ್
ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನ ಶಿಲ್ಪಿ ಎಂಬ ಪದವನ್ನು ಕೈಬಿಟ್ಟು ಪರಿಷ್ಕೃತ ಪಠ್ಯವು ವಿವಾದಕ್ಕೆ ಕಾರಣವಾಗಿದೆ. 9ನೇ ತರಗತಿಯ ನಮ್ಮ ಸಂವಿಧಾನ ಪಠ್ಯದಲ್ಲಿ ಈ ಪರಿಷ್ಕರಣೆ ಆಗಿದೆ. ಪರಿಷ್ಕೃತ ಪಠ್ಯದಲ್ಲಿ ಅಂಬೇಡ್ಕರ್ ಸಂವಿಧಾನ ಶಿಲ್ಪಿ ಎಂಬ ಅಂಶವನ್ನೇ ಕೈಬಿಡುವ ಮೂಲಕ ಸಮಿತಿ ದೊಡ್ಡ ಎಡವಟ್ಟು ಮಾಡಿದೆ. ನಮ್ಮ ಸಂವಿಧಾನ ಪಠ್ಯದಲ್ಲಿ ಕರಡು ರಚನಾ ಸಮಿತಿ ಬಗ್ಗೆ ಮಾಹಿತಿ ನೀಡುವ ವೇಳೆ ಅಂಬೇಡ್ಕರ್ ಅವರು ಸಂವಿಧಾನ ರಚನೆಗೆ ನೀಡಿದ್ದ ಕೊಡುಗೆಯನ್ನು ಆಧರಿಸಿ ಅವರನ್ನು ಸಂವಿಧಾನ ಶಿಲ್ಪಿ ಎಂದು ಕರೆಯಲಾಗಿದೆ ಎಂಬ ಸಾಲು ಇತ್ತು. ಬರಗೂರು ರಾಮಚಂದ್ರಪ್ಪ ಸಮಿತಿಯ ಪರಿಷ್ಕರಣೆಯಲ್ಲಿ ಸಂವಿಧಾನ ಶಿಲ್ಪಿ ಪದ ಇತ್ತು. ಆದರೆ, ರೋಹಿತ್ ಚಕ್ರತೀರ್ಥ ಸಮಿತಿಯು ಸಂವಿಧಾನ ಶಿಲ್ಪಿ ಪದವನ್ನೇ ಕೈಬಿಟ್ಟಿದೆ.
ಇದರ ಜೊತೆ ಸಂವಿಧಾನ ಕರಡು ಸಮಿತಿ ತನ್ನ ಕಾರ್ಯ ಮುಗಿಸಲು 2 ವರ್ಷ 11 ತಿಂಗಳು 18 ದಿನಗಳನ್ನು ತೆಗೆದುಕೊಂಡಿತ್ತು ಎಂಬ ವಿವರ ಇತ್ತು. ಆದರೆ, ಇದನ್ನೂ ಕೂಡ ರೋಹಿತ್ ಸಮಿತಿ ಬದಲಾಯಿಸಿದ್ದು, 145 ದಿನ ಸಭೆ ಸೇರಿತ್ತು ಎಂಬ ಅಂಶವನ್ನು ಮಾತ್ರ ಉಲ್ಲೇಖಿಸಿದೆ. ಇದು ಅಂಬೇಡ್ಕರ್ ಅವರ ವ್ಯಕ್ತಿತ್ವಕ್ಕೆ ಮಾಡಿರುವ ಅವಮಾನವೆಂದು ಅಂಬೇಡ್ಕರ್ವಾದಿಗಳು ಕಿಡಿಕಾರಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅಂಬೇಡ್ಕರ್ಗೆ ಅವಹೇಳನ ಮಾಡಲಾಗಿದೆ ಎಂದು ರೋಹಿತ್ ಚಕ್ರತೀರ್ಥ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಇದನ್ನೂ ಓದಿ: PSI Recruitment Scam: ಗೃಹಸಚಿವ ಆರಗ ಜ್ಞಾನೇಂದ್ರಗೆ 8 ಎಂಎಲ್ಎಗಳಿಂದ ಪತ್ರ
ಬರಗೂರು ರಾಮಚಂದ್ರಪ್ಪ ಸಮಿತಿಯ ಪಠ್ಯದಲ್ಲೇನಿತ್ತು..?
ಕರಡು ರಚನಾ ಸಮಿತಿ
ಸಂವಿಧಾನ ರಚನಾ ಸಭೆಯು ರಾಷ್ಟ್ರಕ್ಕೆ ಸಂಬಂಧಿಸಿದ ವಿಷಯಗಳನ್ನು ವಿವರವಾಗಿ ಪರಿಶೀಲಿಸಲು 22 ಸಮಿತಿಗಳನ್ನು, 5 ಉಪಸಮಿತಿಗಳನ್ನು ಹೊಂದಿತ್ತು. ಅವುಗಳಲ್ಲಿ ಪ್ರಮುಖವಾದುದು ಕರಡು ಸಮಿತಿ, ಡಾ.ಬಿ.ಆರ್.ಅಂಬೇಡ್ಕರ್ರವರು ಇದರ ಅಧ್ಯಕ್ಷರಾಗಿದ್ದರು. ಸಂವಿಧಾನ ರಚನೆಗೆ ನೀಡಿದ ಕೊಡುಗೆಯನ್ನು ಆಧರಿಸಿ ಅವರನ್ನು ‘ಸಂವಿಧಾನದ ಶಿಲ್ಪಿ’ ಎಂದು ಕರೆಯಲಾಗಿದೆ. ಈ ಕರಡು ಸಮಿತಿಯಲ್ಲಿ ಎನ್.ಗೋಪಾಲ ಸ್ವಾಮಿ ಅಯ್ಯಂಗಾರ್, ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್, ಕೆ.ಎಮ್.ಮುನ್ಷಿ, ಟಿ.ಟಿ.ಕೃಷ್ಣಮಾಚಾರಿ, ಮಹಮ್ಮದ್ ಸಾದುಲ್ಲಾ, ಸಿ.ಮಾಧವರಾವ್ ಅವರು ಸದಸ್ಯರಾಗಿದ್ದರು.
ರೋಹಿತ್ ಚಕ್ರತೀರ್ಥ ಸಮಿತಿಯ ಪರಿಷ್ಕೃತ ಪಠ್ಯದಲ್ಲೇನಿದೆ..?
ಕರಡು ರಚನಾ ಸಮಿತಿ
ಸಂವಿಧಾನ ರಚನಾ ಸಭೆಯು ರಾಷ್ಟ್ರಕ್ಕೆ ಸಂಬಂಧಿಸಿದ ವಿಷಯಗಳನ್ನು ವಿವರವಾಗಿ ಪರಿಶೀಲಿಸಲು ಅನೇಕ ಸಮಿತಿಗಳನ್ನು ರಚಿಸಿತು. ಇವುಗಳಲ್ಲಿ ಮುಖ್ಯವಾದುದು ಕರಡು ಸಮಿತಿ, ಡಾ.ಬಿ.ಆರ್.ಅಂಬೇಡ್ಕರ್ ಅದರ ಅಧ್ಯಕ್ಷರಾಗಿದ್ದರು. ಈ ಸಮಿತಿಯಲ್ಲಿ ಎನ್.ಗೋಪಾಲಸ್ವಾಮಿ ಅಯ್ಯಂಗಾರ್, ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್, ಕೆ.ಎಂ.ಮುನ್ಷಿ, ಟಿ.ಟಿ.ಕೃಷ್ಣಮಾಚಾರಿ ಮುಂತಾದ ಮುತ್ಸದ್ಧಿಗಳು ಸದಸ್ಯರುಗಳಾಗಿದ್ದರು ಎಂದು ಉಲ್ಲೇಖಿಸಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.