ಕಾಂಗ್ರೆಸ್ ಪಕ್ಷ ಎನ್ನುವುದು ಪ್ರಭಾವಿಗಳ ಕುಟಿಲ ಕೂಟ: ಬಿಜೆಪಿ ಆಕ್ರೋಶ

60 ವರ್ಷಗಳ ಕಾಲ ದೇಶ ಆಳಿದ ನಂತರವೂ ಅಸಮಾನತೆ, ಬಡತನವನ್ನು ಜೀವಂತವಿಟ್ಟ ಕಾರಣಕ್ಕಾಗಿ ಜನಾಕ್ರೋಶ ಸಭೆ ನಡೆಸುತ್ತೀರಾ? ಎಂದು ಬಿಜೆಪಿ ಪ್ರಶ್ನಿಸಿದೆ.

Written by - Zee Kannada News Desk | Last Updated : Nov 8, 2021, 01:50 PM IST
  • ಸಿದ್ದರಾಮಯ್ಯ ಮತ್ತು ಡಿಕೆಶಿ ತಮ್ಮನ್ನು ತಾವೇ ಕಾಂಗ್ರೆಸ್ ರಥ ಎಳೆಯುವ ಡಬಲ್ ಎಂಜಿನ್ ಎಂದು ಬಿಂಬಿಸಿಕೊಂಡಿದ್ದಾರೆ
  • ಮಗಳನ್ನು ರಾಜಕೀಯಕ್ಕೆ ಕರೆತರುವ ಆಲೋಚನೆ ಡಿಕೆಶಿಯವರಿಗಿದ್ದರೆ ಜನಾಕ್ರೋಶ ಎದುರಿಸಲು ಸಿದ್ಧರಾಗಲಿ
  • ಜನಾಕ್ರೋಶದ ಬಿಸಿಯಲ್ಲಿ ಕಾಂಗ್ರೆಸ್‌ ಪಕ್ಷ ಸುಟ್ಟು ಹೋಗುತ್ತಿದೆ ಎಂಬುದು ನೆನಪಿರಲಿ ಎಂದು ಬಿಜೆಪಿ ಟೀಕಿಸಿದೆ
ಕಾಂಗ್ರೆಸ್ ಪಕ್ಷ ಎನ್ನುವುದು ಪ್ರಭಾವಿಗಳ ಕುಟಿಲ ಕೂಟ: ಬಿಜೆಪಿ ಆಕ್ರೋಶ title=
ಕಾಂಗ್ರೆಸ್ ಪಕ್ಷ ದೇಶದ ಜನರ ಆಕ್ರೋಶಕ್ಕೆ ತುತ್ತಾಗಿದೆ

ಬೆಂಗಳೂರು: ಜನವಿರೋಧಿ ಕಾಂಗ್ರೆಸ್ ನವರು ತಮಗೆ ತಾವೇ ಭಾರತರತ್ನ ಘೋಷಿಸಿಕೊಂಡರು ಎಂದು ಕರ್ನಾಟಕ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಸೋಮವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಕಾಂಗ್ರೆಸ್ ನವರು ತಮ್ಮನ್ನು ತಾವೇ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆ ಮಾಡಿಕೊಂಡರು. ತಮ್ಮದೇ ನ್ಯಾಶನಲ್‌ ಹೆರಾಲ್ಡ್ ಆಸ್ತಿ ಕೊಳ್ಳೆ ಹೊಡೆದರು. ಜನ‌‌ ಪದೇ ಪದೇ ಸೋಲಿಸಿದರೂ ರಾಹುಲ್ ಗಾಂಧಿಯೇ ನಮ್ಮ ಪ್ರಧಾನಿ ಎನ್ನುವರು.ಇದಕ್ಕಾಗಿಯೇ ಕಾಂಗ್ರೆಸ್ ವಿರುದ್ಧ ಜನಾಕ್ರೋಶ ಮೊಳಗುತ್ತಿದೆ’ ಎಂದು ಟೀಕಿಸಿದೆ.

‘ಕಾಂಗ್ರೆಸ್ ಪಕ್ಷ ಎನ್ನುವುದು ಒಂದು‌ ಪಕ್ಷವಲ್ಲ, ಅದು ಪ್ರಭಾವಿಗಳ ಕುಟಿಲ ಕೂಟ. ದೇಶವನ್ನು ಅನೇಕ ವರ್ಷಗಳ ಕಾಲ ತಮ್ಮ ಕಪಿಮುಷ್ಠಿಯಲ್ಲಿ ಇರಿಸಿಕೊಂಡಿದ್ದು ಇದೇ ನಕಲಿ ಕುಟುಂಬ. ಜನಾಕ್ರೋಶದ ಬಿಸಿಯಲ್ಲಿ ಕಾಂಗ್ರೆಸ್‌ ಪಕ್ಷ ಸುಟ್ಟು ಹೋಗುತ್ತಿದೆ ಎಂಬುದು ನೆನಪಿರಲಿ. ಈ ದೇಶದಲ್ಲಿ ಕುಟುಂಬ ರಾಜಕಾರಣದ ವಿರುದ್ಧ,  ಕೋಮು ಓಲೈಕೆಯ ವಿರುದ್ಧ, ಭ್ರಷ್ಟಾಚಾರದ ವಿರುದ್ಧ, ಸ್ವಜನ ಪಕ್ಷಪಾತದ ವಿರುದ್ಧ, ಬಡವರು ಬಡವರಾಗಿಯೇ ಇರಬೇಕೆಂಬ ನಿಲುವಿನ ವಿರುದ್ಧ ಜನಾಕ್ರೋಶವಿದೆ. ಇವೆಲ್ಲವನ್ನು ದೇಶದಲ್ಲಿ ಕಾಂಗ್ರೆಸ್ ಜೀವಂತವಾಗಿಟ್ಟಿದೆ’ ಎಂದು ಬಿಜೆಪಿ ಕುಟುಕಿದೆ.

ಇದನ್ನೂ ಓದಿ: Karnataka Govt Jobs: ಬೋಧಕ ಮತ್ತು ಬೋಧಕೇತರ ಹುದ್ದೆಗಳಿಗೆ ಅರ್ಜಿ ಆಹ್ವಾನ

‘ದೇಶದ ಜನಾಕ್ರೋಶದ ಎದುರು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸ್ವಕ್ಷೇತ್ರದಲ್ಲಿ ಸೋತರು. ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲಿ ಸೋತರು. ಲೋಕಸಭಾ ಚುನಾವಣೆಯಲ್ಲಿ 28ರಲ್ಲಿ ಕೇವಲ 1ರಲ್ಲಿ ಗೆಲುವು ಸಾಧಿಸಿದರು. ರಾಜ್ಯದಲ್ಲಿ ಬಹುಮತದಲ್ಲಿದ್ದ ಕಾಂಗ್ರೆಸ್ ಸರ್ಕಾರ 70 ಸ್ಥಾನಕ್ಕೆ‌ ಇಳಿಯಿತು. ಜನವಿರೋಧಿ ಕಾಂಗ್ರೆಸ್‌ ವಿರುದ್ಧ ಜನಾಕ್ರೋಶ ನಿರಂತರವಾಗಿದೆ’ ಎಂದು ಬಿಜೆಪಿ ಟ್ವೀಟ್ ಮಾಡಿದೆ.

‘ಕಾಂಗ್ರೆಸ್ಸಿಗರೇ‌, ನೀವು ಭಾರತೀಯರಿಗೆ ಮಾಡಿದ ಐತಿಹಾಸಿಕ ಅನ್ಯಾಯವನ್ನು ಮರೆಯಲು ಸಾಧ್ಯವೇ? ಈ ಕಾರಣಕ್ಕಾಗಿ ಜನರೇ ನಿಮ್ಮ ವಿರುದ್ಧ ಆಕ್ರೋಶಗೊಂಡಿದ್ದಾರೆ. ಜನಾಕ್ರೋಶದ ಬಿಸಿಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಕಳೆದುಕೊಂಡು ಬೀದಿಗೆ ಬಂದಿರುವುದು ನಿಜವಲ್ಲವೇ? ರಾಜ್ಯಾದ್ಯಂತ ಜನಾಕ್ರೋಶ ಸಭೆ ನಡೆಸುವುದಕ್ಕೆ ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ. ಕಾಂಗ್ರೆಸ್ಸಿಗರೇ ಯಾರ ವಿರುದ್ಧ ಈ ಜನಾಕ್ರೋಶ? 60 ವರ್ಷಗಳ ಕಾಲ ದೇಶ ಆಳಿದ ನಂತರವೂ ಅಸಮಾನತೆ, ಬಡತನವನ್ನು ಜೀವಂತವಿಟ್ಟ ಕಾರಣಕ್ಕಾಗಿ ಜನಾಕ್ರೋಶ ಸಭೆ ನಡೆಸುತ್ತೀರಾ?’ ಎಂದು ಬಿಜೆಪಿ ಪ್ರಶ್ನಿಸಿದೆ.

ಇದನ್ನೂ ಓದಿ: ಮೇಕೆದಾಟು ಯೋಜನೆ ಜಾರಿಗೆ ಒತ್ತಾಯಿಸಿ ಶೀಘ್ರದಲ್ಲೇ ಕಾಂಗ್ರೆಸ್ ನಿಂದ ಪಾದಯಾತ್ರೆ -ಸಿದ್ಧರಾಮಯ್ಯ

‘ಸಿದ್ದರಾಮಯ್ಯ ಹಾಗೂ ಡಿಕೆಶಿಯವರೇ ನಿಮ್ಮನ್ನು‌ ನೀವೇ ಕಾಂಗ್ರೆಸ್ ರಥ ಎಳೆಯುವ ಡಬಲ್ ಎಂಜಿನ್ ಎಂದು ಬಿಂಬಿಸಿಕೊಂಡಿದ್ದೀರಿ, ಶುಭವಾಗಲಿ!!! ನಿಮ್ಮ ಡಬಲ್ ಎಂಜಿನ್ ಸಂಘಟನೆ ಸಂದರ್ಭದಲ್ಲಾದರೂ ದಲಿತ ಸಿಎಂ ವಿಚಾರ ನನಸಾಗುವುದೇ? ದಲಿತರಿಗೆ ಮುಖ್ಯಮಂತ್ರಿ‌ ಪಟ್ಟ ಕಟ್ಟಲು ನಾವು ಬದ್ಧ ಎಂದು ಘೋಷಿಸಿ ನೋಡೋಣ’ ಎಂದು ಬಿಜೆಪಿ ಸವಾಲು ಹಾಕಿದೆ. ‘ಮಗನನ್ನು ಮಂತ್ರಿ ಮಾಡಿದ ಕಾರಣಕ್ಕಾಗಿ ಮಲ್ಲಿಕಾರ್ಜುನ್ ಖರ್ಗೆಯವರು ಲೋಕಸಭೆ ಚುನಾವಣೆಯಲ್ಲಿ ಸೋತರು. ಮಗನನ್ನು ಶಾಸಕನಾಗಿಸುವ ಉಮೇದಿನಲ್ಲಿ ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲಿ ಸೋತರು. ಡಿಕೆಶಿ ಅವರೇ ನಿಮಗೆ ಮಗಳನ್ನು ರಾಜಕೀಯಕ್ಕೆ ಕರೆ ತರುವ ಕನಸಿದೆಯೇ ? ಇದ್ದರೆ ಜನಾಕ್ರೋಶ ಎದುರಿಸಲು ಸಿದ್ಧರಾಗಿ’ ಎಂದು ಬಿಜೆಪಿ ಎಚ್ಚರಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News