ಬೆಂಗಳೂರು: ರಾಜ್ಯದಲ್ಲಿ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನವಾಗಿ, ಬಿ.ಎಸ್.ಯಡಿಯೂರಪ್ಪ ಅವರು ನೂತನ ಸರ್ಕಾರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ 15-20 ದಿನಗಳೇ ಕಳೆಯುತ್ತಿದೆ. ಆದರೂ ರಚನೆಯಾಗದೆ ವಿಳಂಬವಾಗಿದ್ದ ಸಚಿವ ಸಂಪುಟಕ್ಕೆ ಕೊನೆಗೂ ಕಾಲ ಕೂಡಿಬಂದಿದ್ದು ರಾಜ್ಯ ಸಚಿವ ಸಂಪುಟ ರಚನೆಗೆ ಮುಹೂರ್ತ ಫಿಕ್ಸ್ ಆಗಿದೆ.
ಇದೇ ಆಗಸ್ಟ್ 19ಕ್ಕೆ ಸಚಿವ ಸಂಪುಟ ರಚಂಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಬಿಜೆಪಿ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ ಎನ್ನಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಆಗಸ್ಟ್ 16ರಂದು ಸಿಎಂ ಬಿಎಸ್ವೈ ದೆಹಲಿಗೆ ತೆರಳಿ ಬಿಜೆಪಿ ಹೈಕಮಾಂಡ್ ಭೇಟಿಯಾಗಿ ಸಚಿವರ ಪಟ್ಟಿಯನ್ನು ಫೈನಲ್ ಮಾಡಲಿದ್ದಾರೆ.
ಏತನ್ಮಧ್ಯೆ, ಸಿಎಂ ಯಡಿಯೂರಪ್ಪ ಸಂಪುಟದಲ್ಲಿ ಸ್ಥಾನ ಪಡೆಯುವವರ್ಯಾರು ಎಂಬ ಬಗ್ಗೆ ಕುತೂಹಲ ಒಂದೆಡೆಯಾದರೆ, ಬರೀ 16 ಮಂದಿಗೆ ಮಾತ್ರ ಬಿಎಸ್ವೈ ಸಂಪುಟದಲ್ಲಿ ಸೇರಲು ಹೈಕಮಾಂಡ್ ಮೂಲಗಳು ಸೂಚಿಸಿರುವ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಬಿಎಸ್ವೈ ಸಂಪುಟದಲ್ಲಿ ಸ್ಥಾನ ಪಡೆಯುವವರಾರು ಎಂಬ ಬಗ್ಗೆ ಎಲ್ಲರಲ್ಲೂ ಕುತೂಹಲ ಹೆಚ್ಚಾಗಿದೆ.
ಸಂಭಾವ್ಯ ಸಚಿವರ ಪಟ್ಟಿ ಹೀಗಿದೆ…
1. ಜಗದೀಶ್ ಶೆಟ್ಟರ್
2. ಈಶ್ವರಪ್ಪ
3. ಆರ್.ಅಶೋಕ್
4. ಗೋವಿಂದ ಕಾರಜೋಳ
5. ಬಿ. ಶ್ರೀರಾಮುಲು
6. ಜೆ.ಸಿ. ಮಾಧುಸ್ವಾಮಿ
7. ವಿ. ಸೋಮಣ್ಣ
8. ಬಾಲಚಂದ್ರ ಜಾರಕಿಹೊಳಿ
9. ರೇಣುಕಾಚಾರ್ಯ
10. ಶಶಿಕಲಾ ಜೊಲ್ಲೆ
11. ಡಾ.ಅಶ್ವತ್ಥ್ ನಾರಾಯಣ
12. ಉಮೇಶ್ ಕತ್ತಿ
13. ಶಿವನಗೌಡ ನಾಯಕ್
14. ಕೋಟಾ ಶ್ರೀನಿವಾಸ ಪೂಜಾರಿ
15. ಬಸವರಾಜ್ ಬೊಮ್ಮಾಯಿ
16. ಅಂಗಾರ
2018ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಬಾರದ ಹಿನ್ನೆಲೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದ್ದವು. ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಈ ಮೈತ್ರಿ ಸರ್ಕಾರದ ಸಾರಥ್ಯ ವಹಿಸಲಾಗಿತ್ತು. ಮೈತ್ರಿ ನಾಯಕರಲ್ಲಿ ಆಗಾಗ್ಗೆ ಅಸಮಾಧಾನದ ಹೊಗೆ ಆಡುತ್ತಿತ್ತು. ಅಸಮಾಧಾನದ ಮಧ್ಯೆಯೂ14 ತಿಂಗಳ ಕಾಲ ಆಡಳಿತ ನಡೆಸಿದ್ದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅತೃಪ್ತ ಶಾಸಕರ ರಾಜೀನಾಮೆ ಪ್ರಹಸನದಿಂದ ಪತನಗೊಂಡಿತ್ತು.
ಇದಾದ ಬೆನ್ನಲ್ಲೇ ಎಚ್ಚರಿಕೆಯ ಹೆಜ್ಜೆ ಇಟ್ಟಿದ್ದ ಬಿಜೆಪಿ ಪಾಳಯ ನೂತನ ಸರ್ಕಾರ ರಚಿಸಲು ಮುಂದಾಗಿ, ಬಿ.ಎಸ್. ಯಡಿಯೂರಪ್ಪ ಅವರು ಕಳೆದ ತಿಂಗಳು ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಈ ನಡುವೆ ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ನಿಧನ ಹಾಗೂ ಕರ್ನಾಟಕದಲ್ಲಿನ ಪ್ರವಾಹ ಪರಿಸ್ಥಿತಿಯಿಂದ ಸಚಿವ ಸಂಪುಟ ರಚನೆ ವಿಳಂಬವಾಗಿತ್ತು. ಇದರ ನಡುವೆ ಪ್ರತಿಪಕ್ಷಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದವು. ಬಿಜೆಪಿ ಸರಕಾರ ಟೇಕಾಫ್ ಆಗಿದೆಯೇ ಇಲ್ಲವೇ ಎಂದು ಅಣಕಿಸ ತೊಡಗಿದ್ದವು. ಇದೀಗ ಕೊನೆಗೂ ಸಂಪುಟ ರಚನೆಗೆ ಕಾಲ ಕೂಡಿಬಂದಿದ್ದು, ನಾಲ್ಕೈದು ದಿನಗಳಲ್ಲಿ ಸಚಿವ ಸಂಪುಟ ರಚನೆಯಾಗುವ ನಿರೀಕ್ಷೆಯಿದೆ.