“ನಾವೆಲ್ಲರೂ ಮಹಿಳೆಯರು ನಮ್ಮ ಶಕ್ತಿ ತೋರಿಸುವ ಕಾಲ ಬಂದಿದೆ”-ಪ್ರಿಯಾಂಕಾ ಗಾಂಧಿ

ನೀವು ಕರ್ನಾಟಕ ಭುವನೇಶ್ವರಿ ಹಾಗೂ ತಾಯಿ ಚಾಮುಂಡೇಶ್ವರಿಯ ಮಕ್ಕಳು. ಈ ನಾಡು ಅತ್ಯಂತ ಪ್ರಬಲಶಾಲಿ ಮಹಿಳೆಯರಾದ ಕಿತ್ತೂರು ರಾಣಿ ಚೆನ್ನಮ್ಮನ ಮಕ್ಕಳು. ನಿಮ್ಮಲ್ಲಿ ಅಹಿಂಸೆಯ ಗುಣ ನಿಮ್ಮ ಇತಿಹಾಸದಲ್ಲಿ ಅಡಗಿದೆ. ಬಸವಣ್ಣ ಅವರು ಪ್ರತಿಯೊಬ್ಬ ಮನುಷ್ಯನ ಪ್ರಾಮುಖ್ಯತೆಯನ್ನು ಸಾರಿದ್ದಾರೆ. ಬಸವಣ್ಣನವರಿಗೆ ಎಲ್ಲರೂ ಸಮಾನರು. ಅವರಿಗೆ ಜಾತಿ, ಧರ್ಮ, ಲಿಂಗದ ಭೇದವಿರಲಿಲ್ಲ. ಮಹಿಳೆಯರು ನಾಡಿನ ಸಂಸ್ಕೃತಿ ಕಾಪಾಡಿ, ನಮ್ಮ ಸಮಾಜವನ್ನು ಕಟ್ಟುವಲ್ಲಿ ಮಹಿಳೆಯರು ಸದಾ ಶ್ರಮಿಸಿದ್ದಾರೆ.

Written by - Zee Kannada News Desk | Last Updated : Jan 16, 2023, 04:28 PM IST
  • ನೀವು ಕರ್ನಾಟಕ ಭುವನೇಶ್ವರಿ ಹಾಗೂ ತಾಯಿ ಚಾಮುಂಡೇಶ್ವರಿಯ ಮಕ್ಕಳು.
  • ಈ ನಾಡು ಅತ್ಯಂತ ಪ್ರಬಲಶಾಲಿ ಮಹಿಳೆಯರಾದ ಕಿತ್ತೂರು ರಾಣಿ ಚೆನ್ನಮ್ಮನ ಮಕ್ಕಳು.
  • ನಿಮ್ಮಲ್ಲಿ ಅಹಿಂಸೆಯ ಗುಣ ನಿಮ್ಮ ಇತಿಹಾಸದಲ್ಲಿ ಅಡಗಿದೆ.
“ನಾವೆಲ್ಲರೂ ಮಹಿಳೆಯರು ನಮ್ಮ ಶಕ್ತಿ ತೋರಿಸುವ ಕಾಲ ಬಂದಿದೆ”-ಪ್ರಿಯಾಂಕಾ ಗಾಂಧಿ title=
Photo Courtsey: Twitter

ಬೆಂಗಳೂರು: ನಾವೆಲ್ಲರೂ ಮಹಿಳೆಯರು ನಮ್ಮ ಶಕ್ತಿ ತೋರಿಸುವ ಕಾಲ ಬಂದಿದೆ. ಈ ಚುನಾವಣೆಯನ್ನು ನಿಮ್ಮ ಚುನಾವಣೆ, ನಿಮ್ಮ ಭವಿಷ್ಯಕ್ಕಾಗಿ ಮಾಡಬೇಕಾಗಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಹೇಳಿದ್ದಾರೆ.

ಅವರು ನಗರದಲ್ಲಿ ನಡೆದ ನಾ ನಾಯಕಿ ಕಾಂಗ್ರೆಸ್ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ನನಗಾಗಿ ಇಷ್ಟು ಅಭಿಮಾನದಿಂದ ಇಲ್ಲಿಗೆ ಬಂದಿರುವ ಎಲ್ಲರಿಗೂ ನಮಸ್ಕಾರ. ನಾನು ಮೊದಲ ಬಾರಿಗೆ ಇಷ್ಟು ದೊಡ್ಡ ಮಟ್ಟದ ಅಭಿಮಾನವನ್ನು ಕಂಡಿದ್ದೇನೆ.

ನಾನು ಇಲ್ಲಿಗೆ ಆಗಮಿಸಿರುವುದು ಬಹಳ ಹೆಮ್ಮೆಯ ವಿಷಯವಾಗಿದೆ. ನೀವು ಬುದ್ಧಿವಂತರು, ಶಕ್ತಿವಂತರು, ಶ್ರಮಜೀವಿಗಳು. ಈ ದೇಶವೇ ಹೆಮ್ಮೆಪಡುವಂತೆ ರಾಜ್ಯವನ್ನು ಕಟ್ಟಿದ್ದೀರಿ. ವಿಶ್ವದ ಎಲ್ಲೆಡೆ ನಿಮ್ಮ ಪರಿಶ್ರಮ ಗುರುತಿಸಲಾಗುತ್ತಿದೆ. ಐಟಿ ಬಿಬಿ ಕ್ಷೇತ್ರ, ಕೈಗಾರಿಕಾ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ್ದೀರಿ.

ನಾನು ನಮ್ಮ ಸಹೋದರಿಯರ ಶ್ರಮದ ಬಗ್ಗೆ ಹೆಮ್ಮೆಪಡುತ್ತೇನೆ. ನಿಮ್ಮ ಶ್ರಮದಿಂದ ಈ ರಾಜ್ಯ ಇಷ್ಟು ದೊಡ್ಡ ಮಟ್ಟಿಗೆ ಬೆಳೆದಿದೆ. ನೀವು ನಿಮ್ಮ ಕುಟುಂಬಕ್ಕೆ ನೀವು ಬೆಂಬಲ ನೀಡದಿದ್ದರೆ ಈ ರಾಜ್ಯ ಬೆಳೆಯಲು ಆಗುತ್ತಿರಲಿಲ್ಲ. ಇದನ್ನು ನಾವು ಹೃದಯಪೂರ್ವಕವಾಗಿ ಹೇಳುತ್ತಿದ್ದೇನೆ.

ನೀವು ಕರ್ನಾಟಕ ಭುವನೇಶ್ವರಿ ಹಾಗೂ ತಾಯಿ ಚಾಮುಂಡೇಶ್ವರಿಯ ಮಕ್ಕಳು. ಈ ನಾಡು ಅತ್ಯಂತ ಪ್ರಬಲಶಾಲಿ ಮಹಿಳೆಯರಾದ ಕಿತ್ತೂರು ರಾಣಿ ಚೆನ್ನಮ್ಮನ ಮಕ್ಕಳು. ನಿಮ್ಮಲ್ಲಿ ಅಹಿಂಸೆಯ ಗುಣ ನಿಮ್ಮ ಇತಿಹಾಸದಲ್ಲಿ ಅಡಗಿದೆ. ಬಸವಣ್ಣ ಅವರು ಪ್ರತಿಯೊಬ್ಬ ಮನುಷ್ಯನ ಪ್ರಾಮುಖ್ಯತೆಯನ್ನು ಸಾರಿದ್ದಾರೆ. ಬಸವಣ್ಣನವರಿಗೆ ಎಲ್ಲರೂ ಸಮಾನರು. ಅವರಿಗೆ ಜಾತಿ, ಧರ್ಮ, ಲಿಂಗದ ಭೇದವಿರಲಿಲ್ಲ. ಮಹಿಳೆಯರು ನಾಡಿನ ಸಂಸ್ಕೃತಿ ಕಾಪಾಡಿ, ನಮ್ಮ ಸಮಾಜವನ್ನು ಕಟ್ಟುವಲ್ಲಿ ಮಹಿಳೆಯರು ಸದಾ ಶ್ರಮಿಸಿದ್ದಾರೆ.

ನನ್ನನ್ನು ಇಬ್ಬರು ಪ್ರಬಲ ಮಹಿಳೆಯರು ಬೆಳೆಸಿದ್ದಾರೆ. ನಾನು ಆಕೆಯನ್ನು ಎಂಟನೇ ವಯಸ್ಸಿನಲ್ಲಿ ನೋಡಿದೆ. ಆಕೆ ತನ್ನ 33 ವರ್ಷದ ಮಗನನ್ನು ಕಳೆದುಕೊಂಡಾಗ ಕುಗ್ಗದೇ ಮರು ದಿನವೇ ತನ್ನ ಕೆಲಸಕ್ಕೆ ಹಾಜರಾಗಿ ದೇಶ ಸೇವೆಗೆ ಮುಂದಾಗಿದ್ದರು. ಅದು ಆಕೆಯ ವೃತ್ತಿಧರ್ಮವಾಗಿತ್ತು. ತನ್ನ ಪುತ್ರಸೋಕದ ನಡುವೆಯೂ ಆಕೆ ದೇಶಕ್ಕಾಗಿ ತನ್ನ ಕರ್ತವ್ಯ ಮಾಡಲು ಮುಂದಾಗಿದ್ದು, ಆಕೆಯ ಮಾನಸಿಕ ಸ್ಥೈರ್ಯಕ್ಕೆ ಸಾಕ್ಷಿ. ಆಕೆ ತನ್ನ ಕೊನೆ ಉಸಿರಿರುವವರೆಗೂ ದೇಶಕ್ಕಾಗಿ ಸೇವೆ ಮುಂದುವರಿಸಿದರು. 

ನಾನು ಬೆಳೆದಿದ್ದು ತಾಯಿ ಸೋನಿಯಾಗಾಂಧಿ ಅವರನ್ನು ನೋಡಿಕೊಂಡು. ತನ್ನ 21ನೇ ವಯಸ್ಸಿನಲ್ಲಿ  ತಂದೆ ರಾಜೀವ್ ಗಾಂಧಿ ಅವರನ್ನು ಪ್ರೀತಿಸಿ, ತಾನು ಹುಟ್ಟಿದ ಇಟಲಿ ಬಿಟ್ಟು ಭಾರತಕ್ಕೆ ಆಗಮಿಸುತ್ತಾರೆ. ಆಕೆ ಇಲ್ಲಿನ ಸಂಸ್ಕೃತಿ, ಆಚಾರ ವಿಚಾರ, ಭಾಷೆಗಳನ್ನು ಇಂದಿರಾ ಗಾಂಧಿ ಅವರಿಂದ ಕಲಿತರು. ಆಕೆ ತನ್ನ 44ನೇ ವಯಸ್ಸಿನಲ್ಲಿ ಗಂಡನನ್ನು ಕಳೆದುಕೊಂಡರು. ಆಕೆ ರಾಜಕೀಯದ ಬಗ್ಗೆ ಆಸಕ್ತಿ ಇಲ್ಲದಿದ್ದರೂ ದೇಶದ ಸೇವೆ ಮಾಡಲು ರಾಜಕೀಯದಲ್ಲಿ ಇದ್ದಾರೆ.

ಈ ಇಬ್ಬರು ಮಹಿಳೆಯರ ಜತೆಗೆ ನಾನು ನೂರಾರೂ ಮಹಿಳೆಯರನ್ನು ನನ್ನ ಜೀವನದಲ್ಲಿ ಕಂಡಿದ್ದೇನೆ. ಇವರೆಲ್ಲರಿಂದ ನಾನು ಒಂದು ವಿಚಾರ ಕಲಿತಿದ್ದೇನೆ. ನಿಮ್ಮ ಜೀವನದಲ್ಲಿ ಏನೇ ಆಗಲಿ, ಎಷ್ಟೇ ಕಷ್ಟ ಬರಲಿ, ಅದು ಮನೆಯಲ್ಲಾಗಲಿ, ಕೆಲದ ವಿಚಾರದಲ್ಲಾಗಲಿ, ನೀವು ಅವುಗಳನ್ನು ಮೆಟ್ಟಿ ನಿಲ್ಲುವ ಸಾಮರ್ಥ್ಯ ನಿಮ್ಮಲ್ಲಿದೆ. ಇಲ್ಲಿರುವ ಪ್ರತಿ ಸಹೋದರಿಯರು ದೊಡ್ಡ ಸವಾಲು ಎದುರಿಸಿದ್ದೀರಿ ಎಂದು ನನಗೆ ಗೊತ್ತಿದೆ. ನಿಮ್ಮ ಮನೆಯನ್ನು ಒಟ್ಟಾಗಿಟ್ಟು, ನಿಮ್ಮ ಜೀವನದ ಸಮಸ್ಯೆಗಳನ್ನು ಬಹಳ ಧೈರ್ಯವಾಗಿ ಎದುರಿಸುತ್ತಿದ್ದೀರಿ. ಇಷ್ಟಾದರೂ ನಿಮ್ಮ ಜೀವನದಲ್ಲಿ ಬದಲಾವಣೆ ತರುವ ಸಾಮರ್ಥ್ಯ ನಿಮ್ಮಲ್ಲಿದೆ.

ಇದು ನಿಮ್ಮ ಜೀವನದಲ್ಲಿ ಬದಲಾವಣೆ ತರುವ ಸಮಯ ಇದಲ್ಲವೇ? ನಿಮ್ಮ ಜೀವನದಲ್ಲಿ ನಿಮಗೆ ಶಿಕ್ಷಣ, ಉದ್ಯೋಗ, ಮಕ್ಕಳಿಗೆ ಭವ್ಯ ಭವಿಷ್ಯ ನಿರ್ಮಾಣ ಮಾಡಬೇಕಲ್ಲವೇ? ಇವೆಲ್ಲವನ್ನು ನಿಮಗೆ ಯಾರು ನೀಡುತ್ತಾರೆ? ನಿಮ್ಮ ಸಾಮರ್ಥ್ಯವನ್ನು ನೀವು ಅರಿಯುತ್ತಿಲ್ಲ. ಈ ದೇಶದ ಜನಸಂಖ್ಯೆಯಲ್ಲಿ ಶೇ.50ರಷ್ಟು ಮಹಿಳೆಯರಿದ್ದೀರಿ. ಪ್ರತಿ ಮೆನೆಯಲ್ಲೂ ಗಂಡಸರಷ್ಟೇ ಹೆಣ್ಣುಮಕ್ಕಳಿದ್ದಾರೆ. ಎಲ್ಲ ಹಳ್ಳಿ, ಪಟ್ಟಣಗಳಲ್ಲಿ, ನೀವು ಬಲಿಷ್ಠರು. ಆದರೆ ನಿಮ್ಮ ಧೈರ್ಯ ಹಾಗೂ ಶಕ್ತಿ ಅಱಿಯಬೇಕು.

ನಿಮ್ಮ ದೊಡ್ಡ ಶಕ್ತಿ ರಾಜಕೀಯ. ರಾಜಕೀಯ ಪಕ್ಷಗಳು ಒಂದು ವರ್ಗದ ಓಲೈಕೆಗೆ ಮುಂದಾಗುತ್ತಾರೆ. ಆದರೆ ಮಹಿಳೆಯರ ಬಗ್ಗೆ ವಿಚಾರ ಮಾಡುವುದಿಲ್ಲ. ನೀವು ಎಲ್ಲ ರಾಜಕೀಯ ಪಕ್ಷಗಳು ನಿಮ್ಮ ಹಕ್ಕು ಸಮಾನತೆಗೆ ಆದ್ಯತೆ ನೀಡುವಂತೆ ಮಾಡಬೇಕು. ನಾನು ಬಿಜೆಪಿಯನ್ನು ಟೀಕಿಸುವುದಿಲ್ಲ. ನಾನು ಇಲ್ಲಿರುವ ಮಹಿಳೆಯರಿಗೆ ಒಂದು ಪ್ರಸ್ನೆ ಕೇಳುತ್ತೇನೆ. ಬಿಜೆಪಿ ಬಹಳ ದಿನಗಳಿಂದ ಬಿಜೆಪಿ ಅಧಿಕಾರದಲ್ಲಿದೆ ನಿಮ್ಮ ಜೀವನದಲ್ಲಿ ಸುಧಾರಣೆ ಕಂಡಿದ್ದೀರಾ? ಬೆಲೆಗಳು ಇಳಿಕೆಯಾಗಿವೆಯೇ? ನಿಮ್ಮ ಬದುಕಿನಲ್ಲಿ ಸಕಾರಾತ್ಮಕ ವಿಚಾರಗಳಿವೆಯೇ? ನೀವು ಸಂತೋಷವಾಗಿದ್ದೀರಾ? ಇದು ಬಹಳ ಸರಳವಾದ ಪ್ರಶ್ನೆ.

ಮುಂದಿನ ಕೆಲ ದಿನಗಳಲ್ಲಿ ಚುನಾವಣೆ ಬರುತ್ತಿವೆ. ನೀವು ಕಳೆದ ಕೆಲ ವರ್ಷಗಳ ಆಡಳಿತವನ್ನು ನೋಡಿ, ಯಾರು ಉತ್ತಮರು ಎಂದು ನೀವೆ ತುಲನೆ ಮಾಡಿ, ಯಾರು ನಿಮಗೆ ಅಗತ್ಯವಿರುವ ನೆರವು ನೀಡಿದ್ದಾರೆ ಎಂದು ತೀರ್ಮಾನಿಸಿ. ಕರ್ನಾಟಕದಲ್ಲಿ ಮಹಿಳೆಯರ ಪರಿಸ್ಥಿತಿ ನೀಜಕ್ಕೂ ನಾಚಿಕೆಗೇಡಿನ ವಿಚಾರವಿದೆ.ನಿಮ್ಮ ಸಚಿವರು ಉದ್ಯೋಗ ನೀಡಲು 40% ಲಂಚ ಪಡೆಯುತ್ತಿದ್ದಾರೆ ಎಂದು ಕೇಳಿದೆ. 1.50 ಲಕ್ಷ ಕೋಟಿ ನಿಮ್ಮ ಹಣವನ್ನು ಭ್ರಷ್ಟಾಚಾರದ ಮೂಲಕ ಲೂಟಿ ಮಾಡಿದ್ದಾರೆ.

ಬೆಂಗಳೂರಿನಲ್ಲಿ 8 ಸಾವಿರ ಕೋಟಿ ಬಜೆಟ್ ಇದ್ದರೆ ಅದರಲ್ಲಿ 3200 ಕೋಟಿ ಇವರ ಜೇಬಿಗೆ ಹೋಗುತ್ತದೆ. ಪಿಎಸ್ಐ ಹಗರಣದಂತೆ ಹಲವು ನೇಮಕಾತಿ ಅಕ್ರಮಗಳಿವೆ. ಪಿಎಸ್ಐ ಹುದ್ದೆ ಮಾರಿಕೊಂಡಿದ್ದಾರೆ. ನೀವು ನಿಮ್ಮ ಮಕ್ಕಳು ಉತ್ತಮ ಕೆಲಸ ಪಡೆಯಲಿ ಎಂದು ಶಿಕ್ಷಣೆ ಕೊಟ್ಟು ಬೆಳೆಸುತ್ತೀರಾ? ಈ ರೀತಿ ಹಗರಣವಾದರೆ, ನೀವು ಪ್ರತಿಯೊಂದಕ್ಕೂ ಲಂಚ ಕೊಡಬೇಕಾಗಿದೆ. ಚಾಲಕರ ಪರವಾನಿಗೆ, ಪಡಿತರ ಪಡೆಯಲು ಲಂಚ ನೀಡಬೇಕು.

ಇದನ್ನೂ ಓದಿ: ಕೇಂದ್ರ ಸಚಿವ ನಿತಿನ್ ಗಡ್ಕರಿಯವರಿಗೆ ಬೆದರಿಕೆ ಕರೆ; ಸಂಪೂರ್ಣ ತನಿಖೆ: ಸಿಎಂ ಬೊಮ್ಮಾಯಿ

ಕೋವಿಡ್ ಸಮಯದಲ್ಲಿ ಸರ್ಕಾರ ಮಹಿಳೆಯರಿಗೆ ಯಾವುದೇ ರೀತಿಯ ನೆರವು ನೀಡಲಿಲ್ಲ. ಗಾರ್ಮೆಂಟ್ಸ್ ಕಾರ್ಮಿಕರಿಗೆ ಸರ್ಕಾರ ನೆರವು ನೀಡಲಿಲ್ಲ. ಬೆಂಗಳೂರಿನ ರಸ್ತೆಗಳು ಗುಂಡಿಮಯವಾಗಿವೆ. ರೈತರು ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ರಾಜ್ಯದ 2.50 ಲಕ್ಷ ಹುದ್ದೆಗಳು ಖಾಲಿ ಇದ್ದು, ಅವುಗಳನ್ನು ತುಂಬಿಲ್ಲ.  ಮಹಿಳೆಯರ ಮೇಲಿನ ಅಪರಾಧ ಹೆಚ್ಚಳವಾಗಿದ್ದು, ಪ್ರತಿನಿತ್ಯ ಮಹಿಳೆಯರ ಮೇಲೆ 46 ಅಪರಾಧ ನಡೆಯುತ್ತಿವೆ.

ನೀವು ಕಾಂಗ್ರೆಸ್ ಅವಧಿಯಲ್ಲಿ ಅಡುಗೆ ಅನಿಲ ಸಿಲಿಂಡರ್ ಎಷ್ಟಕ್ಕೆ ಪಡೆಯುತ್ತಿದ್ದಿರಿ, ಈಗ ಅದು ಎಷ್ಟಾಗಿದೆ ಎಂದು ನಿಮಗೆ ಗೊತ್ತಿದೆ. ಜೀವನಸಾಗಿಸುವುದು ದುಬಾರಿಯಾಗಿದ್ದು, ಕಷ್ಟವಾಗಿದೆ. ಮಕ್ಕಳ ಶುಲ್ಕವಾಗಲಿ, ಮದುವೆ ಸಮಾರಂಭವಾಗಲಿ ಎಲ್ಲವೂ ಆರ್ಥಿಕ ಹೊರೆಯಾಗಿವೆ. ಆದರೂ ಸರ್ಕಾರದ ಹೊಣೆಗಾರಿಕೆಯನ್ನು ಪ್ರಶ್ನೆ ಮಾಡುತ್ತಿಲ್ಲ. ಹೀಗಾಗಿ ಸರ್ಕಾರ ಪಠ್ಯ ಪರಿಷ್ಕರಣೆ ಹೆಸರಲ್ಲಿ ಮಹನೀಯರ ವಿಚಾರವನ್ನು ತೆಗೆಯುವ ಮೂಲಕ ಗಮನ ಬೇರೆಡೆ ಸೆಳೆಯುತ್ತಿದ್ದಾರೆ. ಇಡೀ ಆಡಳಿಯ ಯಂತ್ರ ಕೆಲವು ಬಂಡವಾಳ ಶಾಹಿಗಳ ಹಿತ ಕಾಯಲು ಇದೆ. ಕೆಲವರು ಮಾತ್ರ ಶ್ರೀಮಂತರಾಗುತ್ತಿದ್ದರೆ, ಉಳಿದ ಭಾರತ ದಿನನಿತ್ಯ ಬಡವಾಗುತ್ತಿದೆ.

ಸಾರ್ವಜನಿಕ ಉದ್ದಿಮೆಗಳನ್ನು ಖಾಸಗಿಕರಣ ಮಾಡುತ್ತಿದ್ದಾರೆ. ಕೃಷಿಗೆ ಆರ್ಥಿಕ ನೆರವು ನೀಡದೇ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳು ಸರ್ಕಾರದ ಜಿಎಸ್ ಟಿ, ನೋಟು ರದ್ಧತಿಗಳಿಂದ ಕೆಟ್ಟ ನಿರ್ಧಾರಗಳಿಂದ ನರಳುವಂತಾಗಿವೆ. ಕಾಂಗ್ರೆಸ್ ಸರ್ಕಾರ ಭೂ ಸುಧಾರಣಾ ಕಾಯ್ದೆಯಂತಹ ಕಾರ್ಯಕ್ರಮಗಳನ್ನು ನೀಡಿತ್ತು. ರೈತರ 8 ಸಾವಿರ ಕೋಟಿ ಸಾಲ ಮನ್ನಾ, ಬೆಂಗಳೂರಿನಲ್ಲಿ ಐಟಿ ಕ್ಷೇತ್ರಗಳ ಅಭಿವೃದ್ಧಿ ಮಾಡಲಾಗಿದೆ. ಅನ್ನಭಾಗ್ಯದ ಮೂಲಕ 3.80 ಲಕ್ಷ ಜನರಿಗೆ ಅಕ್ಕಿ, ಬೇಳೆಯಂತಹ ದಿನಸಿ ನೀಡಿದೆ. ಇಂದಿರಾ ಕ್ಯಾಂಟೀನ್, ಕ್ಷೀರ ಭಾಗ್ಯ, ಮಾತೃಪೂರ್ಣದಂತಹ ಕಾರ್ಯಕ್ರಮಗಳನ್ನು ನಿಮಗಾಗಿ ಕಾಂಗ್ರೆಸ್ ಸರ್ಕಾರ ನೀಡಿತ್ತು. ಹೀಗೆ ಸ್ವಸಹಾಯಕ ಯೋಜನೆ, ಅಂಗನವಾಡಿ ಕಾರ್ಯಕರ್ತೆಯರ ವೇತನ ಹೆಚ್ಚಳಂದತಹ ಕಾರ್ಯಕ್ರಮ ನೀಡಿದೆ.

ಇದನ್ನೂ ಓದಿ: Miss Universe 2022 : ಯುಸ್‌ನ ಚೆಲುವೆಯ ಮುಡಿಗೆ ಭುವನ ಸುಂದರಿ ಕಿರೀಟ, ಭಾರತದ ದಿವಿತಾ ರೈಗೆ ನಿರಾಸೆ

ಈ ನಾ ನಾಯಕಿ ಕಾರ್ಯಕ್ರಮ ಮೂಲಕ ನೀವು ನಾಯಕರಾಗುವ ಮೂಲಕ ನಿಮ್ಮ ಜೀವನ ಬದಲಿಸಿಕೊಳ್ಳಿ. ಗೃಹಲಕ್ಷ್ಮೀ ಯೋಜನೆ ಮೂಲಕ ಪ್ರತಿ ಕುಟುಂಬದ ಓರ್ವ ಮಹಿಳೆಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿಯಂತೆ ವರ್ಷಕ್ಕೆ 24 ಸಾವಿರ ಆರ್ಥಿಕ ನೆರವು ನೀಡಲಾಗುವುದು. ನನಗೆ ಈ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದಾಗ ನೀವು ಮಹಿಳೆಯರಿಗಾಗಿ ಪ್ರತ್ಯೇಕ ಪ್ರಣಾಳಿಕೆ ಮಾಡಿದರೆ ಮಾತ್ರ ನಾನು ಈ ಕಾರ್ಯಕ್ರಮಕ್ಕೆ ಬರುವುದಾಗಿ ಹೇಳಿದ್ದೆ. ಮಹಿಳೆಯರು ಸಶಕ್ತರಾಗಲು ಕೇವಲ ಒಂದು ಕಾರ್ಯಕ್ರಮ ನೀಡುತ್ತಿಲ್ಲ. ಅನೇಕ ವಿಚಾರವಾಗಿ ಕಾಂಗ್ರೆಸ್ ಸರ್ಕಾರ ನೆರವು ನೀಡಲು ನಿರ್ಧರಿಸಿದ್ದು, ಅದರ ಭಾಗವಾಗಿ ಇತ್ತೀಚೆಗೆ ಗೃಹಜ್ಯೋತಿ ಕಾರ್ಯಕ್ರಮದ ಮೂಲಕ ಪ್ರತಿ ಮನೆಗೆ 200 ಯುನಿಟ್ ವಿದ್ಯತ್ ಉಚಿತವಾಗಿ ನೀಡಲು ನಿರ್ಧರಿಸಲಾಗಿದೆ. ಇದರ ಜತೆಗೆ ಮಹಿಳಾ ಪ್ರಣಾಳಿಕೆ ಮೂಲಕ ಇನ್ನಷ್ಟು ಜನಪರ ಕಾರ್ಯಕ್ರಮವನ್ನು ನಮ್ಮ ನಾಯಕರು ನೀಡಲಿದ್ದಾರೆ.

ನೀವು ಬಲಿಷ್ಠ ಕರ್ನಾಟಕದ ಮೇಲೆ ನಂಬಿಕೆ ಇಟ್ಟೀದ್ದೀರಿ ಅಲ್ಲವೇ? ಇದಕ್ಕಾಗಿ ನೀವು ಬದಲಾವಣೆ ತರುತ್ತೀರಾ ಅಲ್ಲವೇ? ಇದು ನಿಮ್ಮ ಕೈಯಲ್ಲಿದೆ. ನಿಮ್ಮ ಸಮಾಜ, ರಾಜ್ಯದ ಬದಲಾವಣೆ ತರುವ ಶಕ್ತಿ ನಿಮ್ಮಲ್ಲಿದೆ. ಮುಂದಿನ ದಿನಗಳಲ್ಲಿ ಚುನಾವಣೆಗಾಗಿ ನಿಮ್ಮ ನಾಯಕರು ನಿಮ್ಮ ಬಳಿಗೆ ಬಂದಾಗ ನಿಮ್ಮ ಜೀವನದಲ್ಲಿ ಬದಲಾವಣೆಯನ್ನು ಕೇಳುವುದಾಗಿ ನನಗೆ ಮಾತು ಕೊಡಿ.

ಉತ್ತರಪ್ರದೇಶದಲ್ಲಿ ಮಹಿಳಾ ಪ್ರಣಾಳಿಕೆ ಬಿಡುಗಡೆ ಮಾಡಿದಾಗ ಹಲವರು ನಮ್ಮನ್ನು ನೋಡಿ ನಕ್ಕರು. ಆದರೂ ನಮಗೆ ಹೆಚ್ಚಿನ ಮತಗಳು ಬರಲಿಲ್ಲ. ಆದರೆ ಪ್ರತಿ ರಾಜಕೀಯ ಪಕ್ಷಗಳು ಮಹಿಳೆಯರ ಆಗತ್ಯವನ್ನು ಗುರುತಿಸಿ, ಅವುಗಳಿಗೆ ಸ್ಪಂದಿಸುವಂತೆ ಮಾಡಿದೆವು. ಪರಿಣಾಮ ಇಂದು ಬಿಜೆಪಿ ಕೂಡ ತಾನು ಮಹಿಳೆಯರಿಗಾಗಿ ಏನು ಮಾಡುತ್ತೇವೆ ಎಂದು ಜಾಹೀರಾತು ನೀಡಿದೆ. ನಾವೆಲ್ಲರೂ ಮಹಿಳೆಯರು ನಮ್ಮ ಶಕ್ತಿ ತೋರಿಸುವ ಕಾಲ ಬಂದಿದೆ. ಈ ಚುನಾವಣೆಯನ್ನು ನಿಮ್ಮ ಚುನಾವಣೆ, ನಿಮ್ಮ ಭವಿಷ್ಯಕ್ಕಾಗಿ ಮಾಡಬೇಕಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News