ಲಾಕ್​ಡೌನ್ ವೇಳೆ ಗಾಂಧೀಜಿ ಕಲ್ಪನೆಯ ಗ್ರಾಮ ಸ್ವರಾಜ್ಯ ಕಟ್ಟಲು ಮುಂದಾದ ಗ್ರಾಮಸ್ಥರು!

ಗ್ರಾಮದ ಕೃಷಿಗೆ ಬಹುಮುಖ್ಯ ಗೊಬ್ಬರವನ್ನು ಒದಗಿಸುವ ತಿಪ್ಪೆಗಳನ್ನು ಅಚ್ಚುಕಟ್ಟಾಗಿ ಮಾಡಿಕೊಂಡು ಜಾನುವಾರ ಸಗಣಿ ಜೊತೆಗೆ ಅದರ ಮೂರರಷ್ಟು ಹಸಿರೆಲೆ ಮತ್ತು ಕೃಷಿತ್ಯಾಜ್ಯವನ್ನು ಹಾಕಿ ಸುಮಾರು 150ಕ್ಕೂ ಅಧಿಕ ದಿನಗಳ ಕಾಲ ಕೊಳಸಿ ಸಾರಯುತ ಮತ್ತು ಸತ್ವಯುತ ಗೊಬ್ಬರ ತಯಾರು ಮಾಡಿಕೊಂಡು ಬಳಸುವ ಮೂಲಕ ಸಾವಯವ ಆಹಾರ ಸ್ವಾವಲಂಬನೆಗೆ ಮುಂದಾಗಿದ್ದಾರೆ.

Last Updated : Apr 28, 2020, 08:00 AM IST
ಲಾಕ್​ಡೌನ್ ವೇಳೆ ಗಾಂಧೀಜಿ ಕಲ್ಪನೆಯ ಗ್ರಾಮ ಸ್ವರಾಜ್ಯ ಕಟ್ಟಲು ಮುಂದಾದ ಗ್ರಾಮಸ್ಥರು! title=

ಬೆಂಗಳೂರು: ಮಹಾತ್ಮ ಗಾಂಧೀಜಿಯವರ ಕನಸಾಗಿದ್ದ ದೇಸಿ ಸ್ವಾವಲಂಭನೆ ಸ್ವರಾಜ್ಯ ಮುಂತಾದ ಚಿಂತನೆಗಳನ್ನು ನನಸಾಗಿಸುವತ್ತಾ  ಕೋವಿಡ್19 ಲಾಕ್​ಡೌನ್ (Lockdown) ಅವಧಿಯಲ್ಲಿ ಕುಣಿಗಲ್ ನ ಹುಲಿಯೂರುದುರ್ಗ ಹೋಬಳಿ ತಿಪ್ಪನಾಯಕನಹಳ್ಳಿ ಯುವಜನರು ಹಾಗೂ ಗ್ರಾಮಸ್ಥರೆಲ್ಲರೂ ಮುಂದಾಗಿದ್ದಾರೆ.

ಸಹಜ ಬೇಸಾಯ ಶಾಲೆ ವಿಜ್ಞಾನಿಗಳಾದ ಡಾ. ಹೆಚ್. ಮಂಜುನಾಥ್ ರವರು ಈ ಪಕ್ರಿಯೆಗೆ ಜೊತೆಯಾಗಿದ್ದು ಕೋವಿಡ್19 (Covid-19) ನಂತರ ಇದು ಎಲ್ಲಾ ಗ್ರಾಮಗಳಲ್ಲಿ ಅನುಸರಿಸುವ ಮೂಲಕ ಗ್ರಾಮ ಸ್ವರಾಜ್ಯ ಸ್ಥಾಪನೆಗೊಳ್ಳಲಿ ಎಂದು ತಿಳಿಸಿದ್ದಾರೆ.

ಗ್ರಾಮದ ಕೃಷಿಗೆ ಬಹುಮುಖ್ಯ ಗೊಬ್ಬರವನ್ನು ಒದಗಿಸುವ ತಿಪ್ಪೆಗಳನ್ನು ಅಚ್ಚುಕಟ್ಟಾಗಿ ಮಾಡಿಕೊಂಡು ಜಾನುವಾರ ಸಗಣಿ ಜೊತೆಗೆ ಅದರ ಮೂರರಷ್ಟು ಹಸಿರೆಲೆ ಮತ್ತು ಕೃಷಿತ್ಯಾಜ್ಯವನ್ನು ಹಾಕಿ ಸುಮಾರು 150ಕ್ಕೂ ಅಧಿಕ ದಿನಗಳ ಕಾಲ ಕೊಳಸಿ ಸಾರಯುತ ಮತ್ತು ಸತ್ವಯುತ ಗೊಬ್ಬರ ತಯಾರು ಮಾಡಿಕೊಂಡು ಬಳಸುವ ಮೂಲಕ ಸಾವಯವ ಆಹಾರ ಸ್ವಾವಲಂಬನೆಗೆ ಮುಂದಾಗಿದ್ದಾರೆ. ಹಾಗೆಯೆ ಕೃಷಿಯನ್ನು ಅತಿಯಾಗಿ ಕಾಡುವ ಕೂಲಿಕಾರರು ಮತ್ತು ಅಧಿಕ  ಕೂಲಿ ಸಮಸ್ಯೆ ಪರಿಹರಿಸಿಕೊಳ್ಳಲು ಗ್ರಾಮಸ್ಥರೆಲ್ಲ ಸಾಮೂಹಿಕವಾಗಿ ಇಡೀ ಗ್ರಾಮವನ್ನೇ ಒಂದು ತೋಟವೆಂದು ಭಾವಿಸಿ ಪರಸ್ಪರ ಕೆಲಸಗಳನ್ನು ಮಾಡಿಕೊಳ್ಳುವ ಮೂಲಕ ಇತರರಿಗೆ ಆದರ್ಶರಾಗಿದ್ದಾರೆ.

ಗ್ರಾಮದ ಸರಹದ್ದಿನಲ್ಲಿ ಹಸಿರೀಕರಣ ಮಾಡುತ್ತಿದ್ದು ರಸ್ತೆ ಬದಿಗಳಲ್ಲಿ ಗೋಮಾಳದಲ್ಲಿ ಗಿಡಗಳನ್ನು ನೆಡುತ್ತಿದ್ದಾರೆ, ದೇವರಕಾಡು, ಗುಂಡುತೋಪುಗಳನ್ನು ನಿರ್ಮಿಸುತ್ತಿದ್ದಾರೆ, ಅಲ್ಲದೆ ಸುಮಾರು 80-100 ಎಕರೆಗಳಲ್ಲಿ ಜಲಾನಯನ ಚಟುವಟಿಕೆಗೆ ಮುಂದಾಗಿದ್ದು ಮಳೆ ನೀರನ್ನು ತಡೆದು ಹಿಂಗಿಸುವ ಮಾದರಿಗಳನ್ನು ಅನುರಿಸುವ ಮೂಲಕ ಜಲಸಮವರ್ಧನೆಗೆ ಮುಂದಾಗಿದ್ದಾರೆ.

ಯುವಜನರು ಮತ್ತು ಗ್ರಾಮಸ್ಥರೆಲ್ಲ ಒಟ್ಟಿಗೆ ಸೇರಿ ಕೆಲಸ ಮಾಡುತ್ತಿದ್ದು ಮುಂದಿನ ದಿನಗಳಲ್ಲಿ ಇಡೀ ಗ್ರಾಮದ ಜನರೆಲ್ಲರೂ ದೇಸಿ ಬಟ್ಟೆಗಳನ್ನು ಬಳಸಲು ತೀರ್ಮಾನಿಸಿದ್ದಾರೆ, ಗ್ರಾಮದ ಕೆಂಚಮ್ಮಜ್ಜಿ, ರಂಗಸ್ವಾಮಿ, ಮಂಜುನಾಥ, ಗುರುಸ್ವಾಮಿ, ನಾಗರಾಜ್, ದರ್ಶನ್, ಕಿರಣ್, ಪವನ್, ರಾಕೇಶ್ ಗ್ರಾಮದ ಹಿರಿಯರು-ಕಿರಿಯರೆಲ್ಲರೂ ಈ ಕಾರ್ಯದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

Trending News