ಬೆಂಗಳೂರು: ರೈತರು ಮುಂಗಾರು ಬೆಳೆಯನ್ನು ಸಂಪೂರ್ಣ ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ, ಆದರೆ ಅವರ ಕಷ್ಟಗಳನ್ನು ಕೇಳುವವರೇ ಇಲ್ಲ.ಇದೊಂದು ಪಂಚೇಂದ್ರಿಯವನ್ನು ಕಳೆದುಕೊಂಡು ಮರಗಟ್ಟಿ ಹೋಗಿರುವ ಸರ್ಕಾರ ಎಂದು ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ನಾಡಿನ ಜನರ ಪರ ಧ್ವನಿ ಎತ್ತಲಾಗದ ಹೇಡಿ ಸರ್ಕಾರ ರಾಜ್ಯದಲ್ಲಿ ಅಸ್ತಿತ್ವದಲ್ಲಿದೆ-ಸಿದ್ದರಾಮಯ್ಯ
- ಕಳೆದ ಮೂರು ತಿಂಗಳುಗಳ ಮಳೆ ಮತ್ತು ಪ್ರವಾಹದಿಂದಾಗಿ ರಾಜ್ಯದ ರೈತರು ಬೆಳೆ-ಮನೆ ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಈ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಸಲು ಮುಖ್ಯಮಂತ್ರಿ ಅವರು ತಕ್ಷಣ ವಿಧಾನಮಂಡಲದ ವಿಶೇಷ ಅಧಿವೇಶನ ಕರೆಯಬೇಕೆಂದು ಒತ್ತಾಯಿಸುತ್ತಿದ್ದೇನೆ.
- ಒಂದೆಡೆ ಕೊರೊನಾ, ಇನ್ನೊಂದೆಡೆ ಪ್ರವಾಹ, ಮತ್ತೊಂದೆಡೆ ಹಾಳಾಗಿ ಹೋಗಿರುವ ಶಾಂತಿ ಮತ್ತು ಸುವ್ಯವಸ್ಥೆ, ಇವೆಲ್ಲದರ ನಡುವೆ ಭ್ರಷ್ಟಾಚಾರದ ಹಗರಣಗಳು. ಈ ಬಗ್ಗೆ ಚರ್ಚೆ ನಡೆಸಲು ವಿಧಾನಮಂಡಲವೇ ಸೂಕ್ತ ವೇದಿಕೆ. ಆದರೆ ವಿರೋಧ ಪಕ್ಷಗಳನ್ನು ಎದುರಿಸುವ ಧೈರ್ಯವೇ ರಾಜ್ಯ ಸರ್ಕಾರಕ್ಕೆ ಇಲ್ಲ.
- ಇಲ್ಲಿಯ ವರೆಗೆ ಸರ್ಕಾರ ಪ್ರವಾಹದ ನಷ್ಟದ ಸಮೀಕ್ಷೆನೇ ಮಾಡಿಲ್ಲ. ಮುಖ್ಯಮಂತ್ರಿಗಳು ವಿಮಾನದಲ್ಲಿ ನೋಡಿ ಹೋದರು, ಕಂದಾಯ ಸಚಿವರು ಕಾಟಾಚಾರಕ್ಕೆ ಭೇಟಿ ನೀಡಿದರು, ಜಿಲ್ಲಾ ಸಚಿವರಾಗಲಿ, ಅಧಿಕಾರಿಗಳು ಜನರ ಬಳಿ ಹೋಗಿಯೇ ಇಲ್ಲ. ಇಡೀ ಸರ್ಕಾರವೇ ನೆರೆಯಲ್ಲಿ ಕೊಚ್ಚಿಕೊಂಡ ಹೋಗಿರುವಂತಹ ದುಸ್ಥಿತಿ ಇದೆ.
- ರೈತರು ಮುಂಗಾರು ಬೆಳೆಯನ್ನು ಸಂಪೂರ್ಣ ಕಳೆದುಕೊಂಡಿದ್ದಾರೆ, ನೆರೆನೀರಿನ ಶೀತ ಇಳಿಯದೆ ಹಿಂಗಾರು ಬಿತ್ತನೆ ಮಾಡೋ ಹಾಗಿಲ್ಲ. ಎರಡೂ ಬೆಳೆಗಳನ್ನು ಕಳೆದುಕೊಂಡಿರುವ ರೈತರ ಕಷ್ಟಗಳನ್ನು ಕೇಳುವವರೇ ಇಲ್ಲ. ಇದೊಂದು ಪಂಚೇಂದ್ರಿಯವನ್ನು ಕಳೆದುಕೊಂಡು ಮರಗಟ್ಟಿ ಹೋಗಿರುವ ಸರ್ಕಾರ.
- ಕಳೆದ ವಾರ ಬಾದಾಮಿಗೆ ಭೇಟಿ ನೀಡಿದ್ದೆ. ಇಂದು ಬೀದರ್‌ನ ಬಸವಕಲ್ಯಾಣ, ಹುಮ್ನಾಬಾದ್ ಮತ್ತಿತರ ಕಡೆ ಹೋಗಿದ್ದೆ. ನಾಳೆ ಯಾದಗಿರಿಗೆ ಹೋಗಿ ಅಲ್ಲಿಂದ ಕಲ್ಬುರ್ಗಿಗೆ ಹೋಗುತ್ತೇನೆ. ನಾನು ಕಣ್ಣಾರೆ ನೋಡಿದ್ದು ಮತ್ತು ಕೇಳಿದ್ದನ್ನು ಆಧರಿಸಿ ಮುಖ್ಯಮಂತ್ರಿ ಅವರಿಗೆ ವಿವರವಾದ ಪತ್ರ ಬರೆಯುತ್ತೇನೆ.
- ಒಂದು ಅಂದಾಜಿನ ಪ್ರಕಾರ ಸುಮಾರು ಆರುಕಾಲು ಲಕ್ಷ ಎಕರೆಯಲ್ಲಿ ರೈತರು ಬೆಳೆದ ಬೆಳೆ ಕಳೆದುಕೊಂಡಿದ್ದಾರೆ. ಕೇವಲ ಬೆಳೆಹಾನಿಯಿಂದಲೇ ರೂ. 1,500 ಕೋಟಿ ನಷ್ಟವಾಗಿದೆ. 1700 ಮನೆಗಳು ಬಿದ್ದಿವೆಯಂತೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಇಲ್ಲಿಯ ವರೆಗೆ ನಯಾಪೈಸೆ ಪರಿಹಾರವನ್ನೇ ಕೊಟ್ಟಿಲ್ಲ.
- ಕೇಂದ್ರಸರ್ಕಾರದ ಮಾರ್ಗಸೂಚಿ ಪ್ರಕಾರ ಪರಿಹಾರ ನೀಡಿದರೆ ರೈತರ ನಷ್ಟ ಭರಿಸಲಾಗದು. ನಮ್ಮ ಸರ್ಕಾರ ಒಂದು ಹೆಕ್ಟೇರ್ ಗೆ ರೂ.25,000 ಪರಿಹಾರ ಕೊಟ್ಟಿತ್ತು. ಅದೇ ರೀತಿ ಕೊಡಬೇಕು. ಕಳೆದ ವರ್ಷದ ಪ್ರವಾಹದ ಹಾನಿಗೆ ಇಲ್ಲಿಯ ವರೆಗೆ ಪರಿಹಾರ ನೀಡದ ರಾಜ್ಯ ಸರ್ಕಾರದಿಂದ ಏನು ನಿರೀಕ್ಷಿಸಲು ಸಾಧ್ಯ?
- ಕಾಂಗ್ರೆಸ್ ಪಕ್ಷದಲ್ಲಿ ಯಾವ ಭಿನ್ನಮತವೂ ಇಲ್ಲ,ಅವೆಲ್ಲ ನಡೆಯುತ್ತಿರುವುದು ಬಿಜೆಪಿಯಲ್ಲಿ. ಮುಖ್ಯಮಂತ್ರಿಗಳ ವಿರುದ್ಧ ಬಹಿರಂಗ ಹೇಳಿಕೆ ನೀಡುತ್ತಿರುವ ಶಾಸಕರ ವಿರುದ್ದ ಕ್ರಮಕೈಗೊಳ್ಳುವ ತಾಕತ್ ಇಲ್ಲದ ಪಕ್ಷಕ್ಕೆ ನಮ್ಮ ಬಗ್ಗೆ ಮಾತನಾಡುವ ಯಾವ ನೈತಿಕ ಹಕ್ಕಿದೆ?
- ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಯಾರು ಮುಖ್ಯಮಂತ್ರಿಯಾಗುತ್ತಾರೆ ಎನ್ನುವುದನ್ನು ಶಾಸಕಾಂಗ ಪಕ್ಷ ಮತ್ತು ಹೈಕಮಾಂಡ್ ನಿರ್ಧರಿಸುತ್ತದೆ. ಉಳಿದವರು ಏನೇ ಹೇಳಿದರೂ ಇದೇ ಅಂತಿಮ ಸತ್ಯ. ಇದನ್ನು ನಾನೇ ಹೇಳುತ್ತಿರುವುದರಿಂದ ಇದರ ಬಗ್ಗೆ ಬೇರೆ ಚರ್ಚೆ ಬೇಡ.
- ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕಾವಿ ಬಟ್ಟೆ ಬದಲಾಯಿಸುವುದು ಒಳ್ಳೆಯದು. ಅವರಿಂದಾಗಿ ಆ ಬಟ್ಟೆಗೆ ಕಳಂಕ ಬಂದಿದೆ. 27 ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ ಮುಖ್ಯಮಂತ್ರಿಯ ರಾಜ್ಯದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಇರಲು ಹೇಗೆ ಸಾಧ್ಯ?