ವರುಣನ ಅಬ್ಬರಕ್ಕೆ ಮಲೆನಾಡು ತತ್ತರ, ಕರಾವಳಿಯಲ್ಲಿ ರೆಡ್‌ಅಲರ್ಟ್‌

ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಆಗಸ್ಟ್ 10ರವರೆಗೂ ಶಾಲಾ-ಕಾಲೇಜುಗಳಿಗೆ ರಜೆ.

Last Updated : Aug 8, 2019, 08:17 AM IST
ವರುಣನ ಅಬ್ಬರಕ್ಕೆ ಮಲೆನಾಡು ತತ್ತರ, ಕರಾವಳಿಯಲ್ಲಿ ರೆಡ್‌ಅಲರ್ಟ್‌ title=
Pic Courtesy: ANI(File Image)

ಹುಬ್ಬಳ್ಳಿ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಉತ್ತರ ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ವರುಣನ ಅಬ್ಬರಕ್ಕೆ ಮಲೆನಾಡು ತತ್ತರ ಗೊಂಡಿದ್ದು, ಚಿಕ್ಕಮಗಳೂರಿನಲ್ಲಿ ಮಳೆ ಅಬ್ಬರ ಜೋರಾಗಿದೆ. ಶೃಂಗೇರಿ ಶಾರದಾ ಪೀಠದ ಕಪ್ಪೆಶಂಕರ ದೇಗುಲ, ಸಂಧ್ಯಾವಂದನೆ ಮಂಟಪ ನೀರಿನಲ್ಲಿ ಮುಳುಗಿದ್ದರೆ, ಶ್ರೀ ಮಠದಿಂದ ನರಸಿಂಹವನಕ್ಕೆ ತೆರಳುವ ಮಾರ್ಗದಲ್ಲಿ ಪ್ರವಾಹದಿಂದ ನೀರು ತುಂಬಿದೆ. ತುಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಗಾಜನೂರು ಅಣೆಕಟ್ಟೆಯ ಎಲ್ಲ ಬಾಗಿಲುಗಳಿಂದ ನೀರು ಹೊರಬಿಡಲಾಗುತ್ತಿದೆ. ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಗುರುವಾರವೂ ರೆಡ್‌ ಅಲರ್ಟ್‌ ಘೋಷಿಸಲಾಗಿದೆ.

ಕೃಷ್ಣಾ, ಭೀಮಾ, ಮಲಪ್ರಭಾ, ಘಟಪ್ರಭಾ, ಮಾರ್ಕಂಡೇಯ, ವರದಾ, ತುಂಗಭದ್ರಾ, ಕಾಳಿ, ಗಂಗಾವಳಿ, ಶರಾವತಿ, ದೂಧಗಂಗಾ, ವೇದಗಂಗಾ ಮತ್ತು ಹೇಮಾವತಿ ನದಿಗಳು ಅಪಾಯದ ಮತ್ತ ಮೀರಿ ಹರಿಯುತ್ತಿದ್ದು, ನದಿ ಪಾತ್ರದಲ್ಲಿರುವ ನೂರಾರು ಮನೆಗಳು ಕುಸಿದಿವೆ. ಅಲ್ಲದೆ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ಹಾನಿಯಾಗಿದೆ.

ಮಹಾ ಮಳೆಗೆ ಬೆಳಗಾವಿ ಜಿಲ್ಲೆ ಶೇ. 70ರಷ್ಟು ಜಲಾವೃತಗೊಂಡಿದೆ. ನಗರದ ಬಹುತೇಕ ಪ್ರದೇಶಗಳು ಜಲಾವೃತವಾಗಿದ್ದು, ನನರು ದೋಣಿಗಳಲ್ಲಿ ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. 

ಯಾದಗಿರಿಯಲ್ಲಿ ಭೀಮಾನದಿ ಓದಲು ರಾತ್ರೋ ರಾತ್ರಿ ತುಂಬಿ ಹರಿಯುತ್ತಿದ್ದು, ನದಿ ದಡದಲ್ಲಿರುವ ದೇಗುಲಗಳು ಸಂಪೂರ್ಣ ಮುಳುಗಡೆಯಾಗಿವೆ.

ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಆಗಸ್ಟ್ 10ರವರೆಗೂ ಶಾಲಾ-ಕಾಲೇಜುಗಳಿಗೆ ರಜೆ:
ಪ್ರವಾಹ ಪೀಡಿತ ಜಿಲ್ಲೆಗಳಾದ ಬೆಳಗಾವಿ, ಬಾಗಲಕೋಟೆ, ಧಾರವಾಡ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರಿನಲ್ಲಿ ಆಗಸ್ಟ್ 10ರವರೆಗೂ  ಶಾಲಾ-ಕಾಲೇಜುಗಳಿಗೆ ರಜೆ ಮುಂದುವರಿಸಲಾಗಿದೆ. ಆದರೆ, ದಕ್ಷಿಣ ಕನ್ನಡ, ಉಡುಪಿಯಲ್ಲಿ ಇಂದು ಮಾತ್ರ ರಜೆ ಘೋಷಿಸಲಾಗಿದೆ.

ಮಲೆನಾಡಿಗೆ ಹೊಂದಿಕೊಂಡಂತಿರುವ ಕರಾವಳಿ, ಕೊಡಗು ಜಿಲ್ಲೆಯಲ್ಲೂ ವರುಣನ ಆರ್ಭಟ ಮುಂದುವರಿದಿದೆ. ಜಿಲ್ಲೆಯ ಹಲವೆಡೆ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ. ಇಂದು ಮತ್ತು ನಾಳೆ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಕಾವೇರಿ ನದಿ ಪಾತ್ರದಲ್ಲೂ ಭಾರಿ ಮಳೆಯಾಗಿರುವ ಹಿನ್ನೆಲೆಯಲ್ಲಿ ಕಬಿನಿ ಜಲಾಶಯಕ್ಕೆ ಒಳ ಹರಿವು ಹೆಚ್ಚಾಗಿದೆ. ಜಲಾಶಯ ಈಗ ಬಹುತೇಕ ತುಂಬಿದೆ. ಹೀಗಾಗಿ ಯಾವುದೇ ಕ್ಷಣದಲ್ಲಿ ನೀರು ಹೊರಬಿಡಲಾಗುವುದು. ತಗ್ಗು ಪ್ರದೇಶದಲ್ಲಿರುವವರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ.
 

Trending News