ಗಜೇಂದ್ರಗಡ: ಕ್ಷೌರಿಕ ವೃತ್ತಿಯವರನ್ನು ನೋಡುವ ನೋಟ ಇನ್ನಾದರೂ ಬದಲಾಗಬೇಕು ಎಂದು ರೇಖಾಚಿತ್ರ ಕಲಾವಿದ ಹಾಗೂ ಸಾಹಿತಿ ಪುಂಡಲೀಕ ಕಲ್ಲಿಗನೂರ ಹೇಳಿದ್ದಾರೆ. ಗಜೇಂದ್ರಗಡ ತಾಲೂಕಿನ ಜಾಗತಿಕ ಲಿಂಗಾಯತ ಮಹಾಸಭಾದ ವತಿಯಿಂದ ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಸಿಬಿಎಸ್‌ಇ ಶಾಲೆಯಲ್ಲಿ ಆಯೋಜಿಸಿದ್ದ ನಿಜಸುಖಿ ಶರಣ ಹಡಪದ ಅಪ್ಪಣ್ಣನವರ 887ನೇ ಜಯಂತಿ ಕಾರ್ಯಕ್ರಮದಲ್ಲಿಅವರು ಮಾತನಾಡಿದರು.
ಅಸಮಾನತೆ, ಜಾತಿವಾದ ವ್ಯವಸ್ಥೆಯ ಪ್ರಸ್ತುತ ಸಮಾಜದಲ್ಲಿ ದಲಿತ ಜನಾಂಗದವರು ಅಸ್ಪೃಶ್ಯತೆಯ ಕಾರಣಕ್ಕೆ ಪದೇ ಪದೇ ಅವಮಾನಕ್ಕೀಡಾಗುತ್ತಿದ್ದಾರೆ. ಅದರಂತೆಯೇ ಹಡಪದ ವೃತ್ತಿಯ ಜನಾಂಗದವರನ್ನು ನೋಡಬಾರದೆಂಬ ದೃಷ್ಟಿಕೋಣವನ್ನು ಸಮಾಜ ಹೊಂದಿದೆ. ಇದು 21ನೇ ಶತಮಾನದಲ್ಲೂ ಮುಂದುವರೆದಿರುವುದು ದುರಂತ. ಇನ್ನಾದರೂ ಕ್ಷೌರಿಕ ವೃತ್ತಿಯವರನ್ನು ನೋಡುವ ನೋಟ ಬದಲಾಗಬೇಕು. ಅವರೂ ಸಹ ತಮ್ಮಂತೆ ಮನುಷ್ಯರು ಎಂಬುದನ್ನು ಮನಗಾಣಬೇಕೆಂದು ಅವರು ಹೇಳಿದ್ದಾರೆ.
ಅಂದು ಮತ್ತು ಇಂದು ಅಧಿಕಾರಸ್ಥರು ಹಡಪದರಿಂದ ಕ್ಷೌರ ಮಾಡಿಸಿಕೊಂಡೇ ಪಟ್ಟಕ್ಕೇರಿದ್ದಾರೆ. ಕ್ಷೌರಿಕ ವೃತ್ತಿಗೆ ಮಹತ್ವದ ಜೊತೆಗೆ ಗೌರವವೂ ಇದೆ. ಆದರೆ ಸಮಾಜ ಮಾತ್ರ ಈ ವೃತ್ತಿಯ ಬಗ್ಗೆ ಅಸಡ್ಡೆ ಮನೋಭಾವನೆ ಹೊಂದಿದೆ. ಹೀಗಾಗಿ ಈ ವೃತ್ತಿಯಲ್ಲಿರುವವರನ್ನು ಅವಮಾನಿಸದೆ ಗೌರವಿಸಬೇಕು. ಆ ಸಮುದಾಯದ ಜನರಿಗೆ ಸೂಕ್ತ ಸ್ಥಾನಮಾನದ ವ್ಯವಸ್ಥೆ ಕಲ್ಪಿಸಬೇಕು ಎಂದರು.
ಇದನ್ನೂ ಓದಿ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಜೆ.ಪಿ.ನಡ್ಡಾ ಶಹಬ್ಬಾಸ್ ಗಿರಿ..!
ಬಸವಾದಿ ಶರಣರ(Basavanna) ಕಲ್ಯಾಣ ರಾಜ್ಯದಲ್ಲಿ ಕ್ಷೌರಿಕ ವೃತ್ತಿ ಸೇರಿ ಎಲ್ಲ ವೃತ್ತಿಗಳನ್ನು ಸಮಾನವಾಗಿ ಕಾಣಲಾಗಿತ್ತು. ವೃತ್ತಿಗಳನ್ನು ಕಾಯಕವೆಂದು ಕರೆದು ಎತ್ತರದ ಸ್ಥಾನಮಾನ ನೀಡಲಾಯಿತು. ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿ ಕಾರ್ಯಗೈದ ಹಡಪದ ಅಪ್ಪಣ್ಣನವರು ಅನುಭವ ಮಂಟಪದಲ್ಲಿ ಮಹತ್ವದ ಕಾರ್ಯ ನಿರ್ವಹಿಸಿದರು. ತಮ್ಮ ವಚನಗಳ ಮೂಲಕ ಸಮಾಜ ಸುಧಾರಣೆಗೆ ಶ್ರಮಿಸಿದ ಶಿವಶರಣ ಹಡಪದ ಅಪ್ಪಣ್ಣ(Hadapada Appanna)ನವರು ಮಹಾನ್ ವ್ಯಕ್ತಿಯಾಗಿದ್ದಾರೆಂದು ಕಲ್ಲಿಗನೂರ ತಿಳಿಸಿದರು.
ಹಡಪದ ಅಪ್ಪಣ್ಣ ಸಮಾಜಸೇವಾ ಸಂಘದ ಅಧ್ಯಕ್ಷ ಚಿದಾನಂದಪ್ಪ ಹಡಪದ ಮಾತನಾಡಿ, ಇಂದಿಗೂ ಬ್ರಾಹ್ಮಣ್ಯ ವ್ಯವಸ್ಥೆ ಜನರನ್ನು ತೀವ್ರ ಶೋಷಣೆ, ಅನ್ಯಾಯಕ್ಕೀಡು ಮಾಡುತ್ತಲೇ ಸಾಗಿದೆ. ಬಸವಣ್ಣ, ಅಪ್ಪಣ್ಣ ಸೇರಿದಂತೆ ಶರಣರೆಲ್ಲ ಕಲ್ಯಾಣದಲ್ಲಿ ಸೇರಿ ಸರ್ವರ ಹಿತಕಾಯುವ ಲಿಂಗಾಯತ ಧರ್ಮ ಸ್ಥಾಪಿಸಿ ಬ್ರಾಹ್ಮಣಶಾಹಿ, ಪುರೋಹಿತಶಾಹಿ ವ್ಯವಸ್ಥೆ ವಿರುದ್ಧ ಹೋರಾಟ ನಡೆಸಿದರು. ಬಸವ, ವಚನ ತತ್ವವನ್ನು ನಾವೆಲ್ಲರೂ ಅರಿತು, ಅನುಸರಿಸುವ ಅವಶ್ಯಕತೆ ಇಂದು ಹೆಚ್ಚಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ವಲಸಿಗ ಸಚಿವರು ವಾಪಸ್ ಬಂದರೂ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ: ಸಿದ್ದರಾಮಯ್ಯ
ಕಾರ್ಯಕ್ರಮದಲ್ಲಿ ಇತ್ತೀಚೆಗೆ ಅಗಲಿದ ಕೊಪ್ಪಳದ ಹಿರಿಯ ಪತ್ರಕರ್ತ, ಹೋರಾಟಗಾರ ವಿಟ್ಟಪ್ಪ ಗೋರಂಟ್ಲಿ ಅವರಿಗೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಕೋರಲಾಯಿತು. ಜಾಗತಿಕ ಲಿಂಗಾಯತ ಮಹಾಸಭಾ ತಾಲೂಕ ಸಂಚಾಲಕ ಗುರುಲಿಂಗಯ್ಯ ಓದಸುಮಠ ಅಧ್ಯಕ್ಷತೆ ವಹಿಸಿದ್ದರು. ಚಿಂತಕ ಬಿ.ಎ.ಕೆಂಚರಡ್ಡಿ, ವಕೀಲರಾದ ಎಂ.ಎಸ್.ಹಡಪದ, ಬಸವರಾಜ ಶೀಲವಂತರ, ಜೆಎಲ್ಎಂ ಜಿಲ್ಲಾ ಮುಖಂಡ ರವೀಂದ್ರ ಹೊನವಾಡ, ಕೆ.ಎಸ್.ಸಾಲಿಮಠ ಸೇರಿ ಅನೇಕರು ಉಪಸ್ಥಿತರಿದ್ದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ