ನವದೆಹಲಿ: ಕೃಷ್ಣಾ ನದಿಗೆ ಮಹಾರಾಷ್ಟ್ರದಿಂದ ನೀರು ಹರಿಸುವ ಕುರಿತು ಉಭಯ ರಾಜ್ಯಗಳ ನಡುವೆ ಶಾಶ್ವತ ಒಪ್ಪಂದ ಮಾಡಿಕೊಳ್ಳುವ ಬಗ್ಗೆ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರೊಂದಿಗೆ ಸಮಾಲೋಚನೆ ನಡೆಸಿದರು.
ನವದೆಹಲಿಯಲ್ಲಿ ಗುರುವಾರ ಕೇಂದ್ರ ಸರ್ಕಾರದ ನೂತನ ಸಚಿವ ಸಂಪುಟದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಜೊತೆಯಲ್ಲೇ ಕುಳಿತಿದ್ದ ಮಹಾರಾಷ್ಟ್ರ ಮುಖ್ಯಮಂತ್ರಿ ಫಡ್ನವೀಸ್ ಅವರೊಂದಿಗೆ ಈ ಕುರಿತು ಚರ್ಚಿಸಿದರು.
ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ದೇವೇಂದ್ರ ಫಡ್ನವೀಸ್ ಈ ಕುರಿತು ವಿವರವಾಗಿ ಮಾತುಕತೆ ನಡೆಸಲು ಸಮಯ ನಿಗದಿಪಡಿಸುವ ಭರವಸೆ ನೀಡಿದರು.
ಕೃಷ್ಣಾ ನದಿ ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ಪ್ರವಹಿಸುತ್ತದೆ. ಕರ್ನಾಟಕ ರಾಜ್ಯದಲ್ಲಿ ಇದು ಸುಮಾರು 483 ಕಿ.ಮೀ. ಹರಿಯುತ್ತದೆ. ಕೃಷ್ಣಾ ನದಿ ದಕ್ಷಿಣ ಭಾರತದ ಎರಡನೆಯ ದೊಡ್ಡ ನದಿಯಾಗಿದೆ. ಈ ನದಿ ಮಹಾರಾಷ್ಟ್ರದ ಪಶ್ಚಿಮ ಘಟ್ಟದ ಮಹಾದೇವ ಪರ್ವತ ಶ್ರೇಣಿಯಲ್ಲಿ ಮಹಾಬಲೇಶ್ವರದ ಹತ್ತಿರ ಸಮುದ್ರ ಮಟ್ಟಕ್ಕಿಂತ 1338 ಮೀಟರ ಎತ್ತರದಲ್ಲಿ ಉಗಮವಾಗಿ ಸುಮಾರು 1392 ಕಿ.ಮಿ.ಗಳಷ್ಟು ಹರಿದು ಆಂಧ್ರಪ್ರದೇಶದ ಹಂಸಲಾದೀವಿಯಲ್ಲಿ ಬಂಗಾಳ ಕೊಲ್ಲಿ ಯನ್ನು ಸೇರುತ್ತದೆ.