ನವದೆಹಲಿ: ಹಿಮಾಚಲ ಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾಗಿದ್ದ ಸುಖ್ವಿಂದರ್ ಸಿಂಗ್ ಸುಖು ಇಂದು ಮಧ್ಯಾಹ್ನ 1.30ಕ್ಕೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಶಿಮ್ಲಾದಲ್ಲಿ ಭಾನುವಾರ(ಡಿ.11) ಆಯೋಜಿಸಿರುವ ಸಮಾರಂಭದಲ್ಲಿ ಸುಖು ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಇದೇ ವೇಳೆ ಉಪಮುಖ್ಯಮಂತ್ರಿಯಾಗಿ ಮುಖೇಶ್ ಅಗ್ನಿಹೋತ್ರಿ ಸಹ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಶನಿವಾರ ಶಿಮ್ಲಾದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಸಭೆ ಬಳಿಕ ಸುಖು ಅವರನ್ನು ಸಿಎಂ ಎಂದು ಘೋಷಿಸಲಾಗಿತ್ತು. ಭಾನುವಾರ ಬೆಳಗ್ಗೆ 11 ಗಂಟೆಗೆ ಪ್ರಮಾಣವಚನ ಸಮಾರಂಭ ನಡೆಯಲಿದೆ ಎಂದು ಛತ್ತೀಸ್ಗಢ ಸಿಎಂ ಭೂಪೇಶ್ ಬಘೇಲ್ ತಿಳಿಸಿದ್ದರು. ಆದರೆ ಕಾರಣಾಂತರಗಳಿಂದ ಪ್ರಮಾಣವಚನ ಕಾರ್ಯಕ್ರಮವನ್ನು ಮಧ್ಯಾಹ್ನ 1.30ಕ್ಕೆ ನಿಗದಿಪಡಿಸಲಾಗಿದೆ.
ಇದನ್ನೂ ಓದಿ: ಗುಜರಾತಿನಲ್ಲಿ ಕಾಂಗ್ರೆಸ್ಸಿಗಿಲ್ಲ ಪ್ರತಿಪಕ್ಷ ನಾಯಕನ ಸ್ಥಾನ..!
ಇತ್ತೀಚೆಗಷ್ಟೇ ನಡೆದ ಹಿಮಾಚಲಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 68 ಕ್ಷೇತ್ರಗಳ ಪೈಕಿ 40ರಲ್ಲಿ ಗೆಲುವು ಸಾಧಿಸಿತ್ತು. ನವೆಂಬರ್ 12ರಂದು ನಡೆದ ಚುನಾವಣೆ ಫಲಿತಾಂಶ ಡಿಸೆಂಬರ್ 8ರಂದು ಪ್ರಕಟವಾಗಿತ್ತು. ಹಮೀರ್ಪುರ್ ಜಿಲ್ಲೆಯ ನದೌನ್ ಕ್ಷೇತ್ರದ ಶಾಸಕ, 58 ವರ್ಷದ ಸುಖು ಅವರನ್ನು ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ ಮಾಡಲಾಗಿತ್ತು. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಸುಖು ಅವಿರೋಧವಾಗಿ ಆಯ್ಕೆಯಾಗಿದ್ದರು.
Shimla | Why won't I attend his oath-taking ceremony? Of course, I will go. It is my prime duty to be there with him as he takes oath as CM today: Himachal Pradesh Congress Chief Pratibha Virbhadra Singh pic.twitter.com/ta663ojCfL
— ANI (@ANI) December 11, 2022
ಹಿಮಾಚಲ ಪ್ರದೇಶದ ಕಾಂಗ್ರೆಸ್ ಘಟಕದ ಮಾಜಿ ಅಧ್ಯಕ್ಷ ಸುಖು ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. ಅವರು 4 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರು ಭಾಗಿಯಾಗಲಿದ್ದಾರೆ.
ಇದನ್ನೂ ಓದಿ: “ನಾನು 4 ಮಕ್ಕಳಿಗೆ ಜನ್ಮ ನೀಡಲು ಕಾಂಗ್ರೆಸ್ ಪಕ್ಷವೇ ಕಾರಣ”
ಸುಖ್ವಿಂದರ್ ಸಿಂಗ್ ಸುಖು ಕಾನೂನು ಪದವೀಧರರಾಗಿದ್ದಾರೆ, ವಿದ್ಯಾರ್ಥಿ ದಿಸೆಯಲ್ಲಿಯೇ ರಾಜಕೀಯಕ್ಕೆ ಧುಮುಕಿ ತಮ್ಮ ವೃತ್ತಿಜೀವನ ಪ್ರಾರಂಭಿಸಿದ್ದರು. ಹಂತಹಂತವಾಗಿ ಅವರು ಉನ್ನತ ಸ್ಥಾನಕ್ಕೆ ಏರಿದರು. ಸಿಎಂ ಎಂದು ಘೋಷಿಸಿದ ಬಳಿಕ ಸುಖು ಅವರು ತಾವು ಶುದ್ಧ ಮತ್ತು ಪ್ರಮಾಣಿಕ ಸರ್ಕಾರವನ್ನು ನೀಡುವುದಾಗಿ ಭರವಸೆ ನೀಡಿದರು. ಕಾಂಗ್ರೆಸ್ ಪಕ್ಷವು ಜನರಿಗೆ ನೀಡಿದ ಭರವಸೆ ಈಡೇರಿಸುವ ಜವಾಬ್ದಾರಿ ನನ್ನ ಮೇಲಿದೆ. ನಾವು ಅಧಿಕಾರದಲ್ಲಿರಲು ಮಾತ್ರವಲ್ಲದೆ ಅಧಿಕಾರ ಪಡೆಯಲು ಬಯಸಿದ್ದೇವೆ. ನಾವು ವ್ಯವಸ್ಥೆಯನ್ನು ಬದಲಾಯಿಸಲು ಬಯಸುತ್ತೇವೆ. ನನಗೆ ಸ್ವಲ್ಪ ಸಮಯ ನೀಡಿದರೆ ರಾಜ್ಯದಲ್ಲಿ ಹೊಸ ವ್ಯವಸ್ಥೆ ಮತ್ತು ಹೊಸ ಚಿಂತನೆ ತರಲು ನಾನು ಶ್ರಮಿಸುತ್ತೇನೆಂದು ಹೇಳಿದ್ದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.