ಕಾನ್ಪುರ: ಉತ್ತರ ಪ್ರದೇಶದ ಕಾನ್ಪುರದಲ್ಲಿ ಶುಕ್ರವಾರ ಬ್ಯಾಂಕ್ ದರೋಡೆಯಾಗಿರುವ ಆಘಾತಕಾರಿ ಘಟನೆ ನಡೆದಿದೆ. ಗುರುವಾರ ಮತ್ತು ಶುಕ್ರವಾರ ಮಧ್ಯರಾತ್ರಿ 10 ಅಡಿ ಉದ್ದದ ಸುರಂಗ ಕೊರೆಯುವ ಮೂಲಕ ಕಾನ್ಪುರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಸ್ಟ್ರಾಂಗ್ರೂಮ್ಗೆ ನುಗ್ಗಿದ ಕಳ್ಳರು 1 ಕೋಟಿ ರೂ. ಮೌಲ್ಯದ ಚಿನ್ನಾಭರಣ ದೋಚಿ ಎಸ್ಕೇಪ್ ಆಗಿದ್ದಾರೆ.
ದರೋಡೆಕೋರರು ಎಸ್ಬಿಐನ ಭಾನುತಿ ಶಾಖೆಯ ಪಕ್ಕದಲ್ಲಿರುವ ಖಾಲಿ ಜಾಗದಿಂದ ಸುಮಾರು 10 ಅಡಿ ಅಗಲದ ಸುರಂಗವನ್ನು ಅಗೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪರಿಚಿತ ಕಳ್ಳರು ಲಾಕರ್ ತೆರೆಯಲು ಗ್ಯಾಸ್ ಕಟ್ಟರ್ ಬಳಸಿದ್ದಾರೆ. ಅಲಾರಾಂ ವ್ಯವಸ್ಥೆಯನ್ನು ನಿಷ್ಕ್ರಿಯಗೊಳಿಸಿದ ಖದೀಮರು ಸ್ಟ್ರಾಂಗ್ರೂಂನಲ್ಲಿರುವ ಏಕೈಕ ಸಿಸಿಟಿವಿ ಕ್ಯಾಮೆರಾವನ್ನು ಬೇರೆ ಕಡೆಗೆ ತಿರುಗಿಸಿ ಕೃತ್ಯ ಎಸಗಿದ್ದಾರೆಂದು ತಿಳಿದುಬಂದಿದೆ.
ಇದನ್ನೂ ಓದಿ: ಪೆನ್ ಡ್ರೈವ್ ನಲ್ಲಿ ಖಾಸಗಿ ಫೋಟೋ, ವಿಡಿಯೋ ಇಟ್ಟುಕೊಳ್ಳುತ್ತೀರಾ: ಹಾಗಾದ್ರೆ ಜೋಕೆ..!
ಬ್ಯಾಂಕ್ ಅಧಿಕಾರಿಗಳ ನೀಡಿರುವ ಮಾಹಿತಿ ಪ್ರಕಾರ, ಕಳ್ಳರು ಸುಮಾರು 1 ಕೋಟಿ ರೂ. ಮೌಲ್ಯದ 1.8 ಕೆಜಿ ಚಿನ್ನವನ್ನು ಕದ್ದೊಯ್ದಿದ್ದಾರೆ. ಈ ದರೋಡೆಯ ಬಗ್ಗೆ ತನಿಖೆ ನಡೆಸಿದ ಪೊಲೀಸರು ಮತ್ತು ಫೊರೆನ್ಸಿಕ್ ಅಧಿಕಾರಿಗಳು ಬ್ಯಾಂಕ್ನ ಸ್ಟ್ರಾಂಗ್ರೂಂಗೆ ಹೊಂದಿಕೊಂಡಂತೆ ಖಾಲಿ ಜಾಗದಿಂದ ತೋಡಿದ ಮತ್ತು ಕುರುಚಲು ಗಿಡಗಳಿಂದ ಆವೃತವಾಗಿದ್ದ ಸುರಂಗವನ್ನು ಕಂಡು ಹೌಹಾರಿದ್ದಾರೆ. ಈ ಅಪರಾಧದಲ್ಲಿ ಕೆಲವು ಬ್ಯಾಂಕ್ ಒಳಗಿನವರು ಭಾಗಿಯಾಗಿದ್ದಾರೆ ಎಂದು ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್ (ಪಶ್ಚಿಮ) ವಿಜಯ್ ಧುಲ್ ಶಂಕಿಸಿದ್ದಾರೆ.
‘ಇದು ಪರಿಣಿತ ಕ್ರಿಮಿನಲ್ಗಳ ಸಹಾಯದಿಂದ ಮಾಡಿದ ಅಪರಾಧವಾಗಿರಬಹುದು. ಸ್ಟ್ರಾಂಗ್ರೂಂನಿಂದ ಫಿಂಗರ್ಪ್ರಿಂಟ್ಗಳು ಸೇರಿದಂತೆ ಕೆಲವು ಸಾಕ್ಷ್ಯಗಳನ್ನು ನಾವು ಪತ್ತೆಹಚ್ಚಿದ್ದೇವೆ. ಇದರ ಸಹಾಯದಿಂದ ನಾವು ದರೋಡೆ ಪ್ರಕರಣವನ್ನು ಶೀಘ್ರವೇ ಭೇದಿಸುತ್ತೇವೆಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: Love Jihad: ಇನ್ಸ್ಟಾಗ್ರಾಂ ಮೂಲಕ ‘ಲವ್ ಜಿಹಾದ್’? ಮುಸ್ಲಿಂ ಸಂಪ್ರದಾಯದಂತೆ ಮದುವೆಯಾದ ಹಿಂದೂ ಯುವತಿ!
ಶುಕ್ರವಾರ ಬೆಳಗ್ಗೆ ಬ್ಯಾಂಕ್ ಅಧಿಕಾರಿಗಳು ಚಿನ್ನದ ಚೆಸ್ಟ್ ಮತ್ತು ಸ್ಟ್ರಾಂಗ್ ರೂಂ ಬಾಗಿಲು ತೆರೆದಾಗ ದರೋಡೆ ನಡೆದಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸ್ ಕಮಿಷನರ್ ಬಿಪಿ ಜೋಗ್ದಂಡ್ ತಿಳಿಸಿದ್ದಾರೆ. ಕಳ್ಳರು ಸ್ಟ್ರಾಂಗ್ರೂಂಗೆ ಪ್ರವೇಶಿಸಿದ ಸುರಂಗವನ್ನು ಬ್ಯಾಂಕ್ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.