ನವದೆಹಲಿ: ಮೇಕೆದಾಟು ಬಳಿ ಆಣೆಕಟ್ಟು ನಿರ್ಮಾಣ ಮಾಡಲು ಕರ್ನಾಟಕಕ್ಕೆ ನೀಡಿರುವ ಅನುಮತಿಯನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ತಮಿಳುನಾಡು ಸರ್ಕಾರ ಶುಕ್ರವಾರ ಸುಪ್ರೀಂ ಕೋರ್ಟ್ನಲ್ಲಿ ಮನವಿ ಸಲ್ಲಿಸಿದೆ.
ಕುಡಿವ ನೀರು ಹಾಗೂ ವ್ಯರ್ಥವಾಗಿ ಸಮುದ್ರಕ್ಕೆ ಹರಿದು ಹೋಗುತ್ತಿದ್ದ ನೀರನ್ನು ಹಿಡಿದಿಟ್ಟುಕೊಳ್ಳಲು, ಮೇಕೆದಾಟು ಬಳಿ ಡ್ಯಾಂ ನಿರ್ಮಾಣ ಮಾಡುವ ಬಗ್ಗೆ ಕರ್ನಾಟಕ ಸರ್ಕಾರ ಯೋಜನೆ ರೂಪಿಸಿತ್ತು. ಇದರ ಪ್ರಾಥಮಿಕ ಯೋಜನೆಗೆ ಕೇಂದ್ರ ಜಲ ಆಯೋಗ ಒಪ್ಪಿಗೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ಸೂಚನೆ ಮೇರೆಗೆ ಅಲ್ಲಿನ ಕಾನೂನು ತಂಡ ಕರ್ನಾಟಕದ ಈ ಯೋಜನೆ ವಿರೋಧಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ.
ನವೆಂಬರ್ 22 ರಂದು ರಾಜ್ಯ ಸರ್ಕಾರ, ಕೇಂದ್ರದ ಜಲ ಆಯೋಗಕ್ಕೆ ಅನುಮತಿ ಕೋರಿ ಪೂರ್ವ ಸಾಧ್ಯತಾ ವರದಿ ಕಳುಹಿಸಿತ್ತು. ಈ ವರದಿಗೆ ಕೇಂದ್ರ ಜಲಸಂಪನ್ಮೂಲ ಸಚಿವಾಲಯದ ಕೇಂದ್ರ ಜಲ ಆಯೋಗ ಯೋಜನೆಯ ಸಾಧ್ಯತಾ ವರದಿಗೆ ಸಮ್ಮತಿ ಸೂಚಿಸಿ, ಸಂಪೂರ್ಣ ಯೋಜನಾ ವರದಿಯನ್ನು ಸಲ್ಲಿಸುವಂತೆ ಅನುಮತಿ ನೀಡಿತ್ತು. ಅಲ್ಲದೆ ಯೋಜನೆಯಿಂದ ತಮಿಳುನಾಡಿಗೆ ಬಿಡುವ ಕಾವೇರಿ ನೀರಿನ ಪ್ರಮಾಣದಲ್ಲಿ ಯಾವುದೇ ಬದಲಾವಣೆಯಾಗಬಾರದು ಎಂದು ಷರತ್ತನ್ನೂ ರಾಜ್ಯಕ್ಕೆ ವಿಧಿಸಿತ್ತು. ಆದರೂ ಸಹ ಈ ಯೋಜನೆಗೆ ಪ್ರಾಥಮಿಕ ಅನುಮೋದನೆ ನೀಡಿದ ಕೇಂದ್ರ ಜಲ ಆಯೋಗದ ಕ್ರಮವನ್ನು ಪ್ರಶ್ನಿಸಿ, ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ನಲ್ಲಿ 20 ಪುಟಗಳ ತಕರಾರು ಅರ್ಜಿ ಸಲ್ಲಿಸಿದೆ.