ಲಾಲ್ ಬಹದ್ದೂರ್ ಶಾಸ್ತ್ರಿಗಳ ಸಂಸ್ಮರಣೆ; ಭಾರತದ 2ನೇ ಪ್ರಧಾನಿ ಬಗ್ಗೆ ನಿಮಗೆಷ್ಟು ಗೊತ್ತು?

Lal Bahadur Shastri Death Anniversary 2023: ಲಾಲ್ ಬಹದ್ದೂರ್ ಶಾಸ್ತ್ರಿಯವರು 11 ಜನವರಿ 1966ರಂದು ತಾಷ್ಕೆಂಟ್‌ನಲ್ಲಿ ಹೃದಯಾಘಾತದಿಂದ ನಿಧನರಾದರು. ಅವರಿಗೆ 1966ರಲ್ಲಿ ಮರಣೋತ್ತರವಾಗಿ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನ ನೀಡಿ ಗೌರವಿಸಲಾಯಿತು.

Written by - Zee Kannada News Desk | Last Updated : Jan 11, 2023, 04:56 PM IST
  • ಭಾರತದ 2ನೇ ಪಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಗಳ ಪುಣ್ಯತಿಥಿಯನ್ನು ಜ.11ರಂದು ಆಚರಿಸಲಾಗುತ್ತದೆ
  • ಲಾಲ್ ಬಹದ್ದೂರ್ ಶಾಸ್ತ್ರಿಯವರು 1966 ಜ.11ರಂದು ಉಜ್ಬೇಕಿಸ್ತಾನದ ತಾಷ್ಕೆಂಟ್‌ನಲ್ಲಿ ನಿಧನರಾದರು
  • ದೇಶಕ್ಕಾಗಿ 30 ವರ್ಷಗಳಿಗಿಂತ ಹೆಚ್ಚು ಕಾಲ ದುಡಿದ ಶಾಸ್ತ್ರಿಯವರು ಸಮಗ್ರ ವ್ಯಕ್ತಿತ್ವದ ನಾಯಕನೆಂಬ ಖ್ಯಾತಿ ಹೊಂದಿದ್ದಾರೆ
ಲಾಲ್ ಬಹದ್ದೂರ್ ಶಾಸ್ತ್ರಿಗಳ ಸಂಸ್ಮರಣೆ; ಭಾರತದ 2ನೇ ಪ್ರಧಾನಿ ಬಗ್ಗೆ ನಿಮಗೆಷ್ಟು ಗೊತ್ತು? title=
ಲಾಲ್ ಬಹದ್ದೂರ್ ಶಾಸ್ತ್ರಿಗಳ ಸಂಸ್ಮರಣೆ

Lal Bahadur Shastri Death Anniversary 2023: ಭಾರತದ 2ನೇ ಪ್ರಧಾನ ಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿಗಳ  ಪುಣ್ಯತಿಥಿಯನ್ನು ಜನವರಿ 11ರಂದು ಆಚರಿಸಲಾಗುತ್ತದೆ. ಅವರು 1966 ಜನವರಿ 11ರಂದು ಉಜ್ಬೇಕಿಸ್ತಾನದ ತಾಷ್ಕೆಂಟ್‌ನಲ್ಲಿ ನಿಧನರಾದರು. ದೇಶಕ್ಕಾಗಿ 30 ವರ್ಷಗಳಿಗಿಂತ ಹೆಚ್ಚು ಕಾಲ ದುಡಿದ ಶಾಸ್ತ್ರಿಯವರು ಸಮಗ್ರ ವ್ಯಕ್ತಿತ್ವದ, ಅಪಾರ ಸಾಮರ್ಥ್ಯ ಹೊಂದಿದ್ದ ನಾಯಕನೆಂದು ಗುರುತಿಸಿಕೊಂಡವರು. ಅವರ ಅಂತಃಶಕ್ತಿ, ವಿನಮ್ರತೆ ಮತ್ತು ಸಹಿಷ್ಣುತೆ ಅಪಾರ ಗೌರವಕ್ಕೆ ಪಾತ್ರವಾಗಿತ್ತು. ಓರ್ವ ಪ್ರಧಾನಿಯಾಗಿ ಅವರು ಜನರ ಭಾವನೆಗಳನ್ನು ಅರ್ಥಮಾಡಿಕೊಂಡು ದೇಶವನ್ನು ಪ್ರಗತಿಯ ಕಡೆಗೆ ಮುನ್ನಡೆಸುವ ದೂರದೃಷ್ಟಿ ಹೊಂದಿದ್ದರು.

ಜನನ :  ಅಕ್ಟೋಬರ್ 2, 1904

ಜನ್ಮಸ್ಥಳ : ಮುಘಲ್ ಸರಾಯ್, ವಾರಣಾಸಿ, ಉತ್ತರ ಪ್ರದೇಶ

ತಂದೆ : ಶಾರದ ಪ್ರಸಾದ್ ಶ್ರೀವಾಸ್ತವ

ತಾಯಿ : ರಾಮದುಲಾರಿ ದೇವಿ

ಪತ್ನಿ : ಲಲಿತಾ ದೇವಿ

ರಾಜಕೀಯ ಪಕ್ಷ : ಭಾರತೀಯ ರಾಷ್ಟ್ರೀಯ ಕಾಂಗ್ರೆಸ್

ಚಳುವಳಿ: ಭಾರತೀಯ ಸ್ವಾತಂತ್ರ್ಯ ಚಳುವಳಿ

ನಿಧನ : 11 ಜನವರಿ, 1966

ಸ್ಮಾರಕ : ವಿಜಯ್ ಘಾಟ್, ನವದೆಹಲಿ

ಸ್ವತಂತ್ರ ಭಾರತದ 2ನೇ ಪ್ರಧಾನಿ

ಲಾಲ್ ಬಹದ್ದೂರ್ ಶಾಸ್ತ್ರಿಯವರು ಉತ್ತರ ಪ್ರದೇಶದ ವಾರಣಾಸಿಯ ಮುಘಲ್‌ಸರಾಯ್‌ನಲ್ಲಿ ಅಕ್ಟೋಬರ್ 2, 1904ರಂದು ಜನಿಸಿದರು. ಅವರು ಸ್ವತಂತ್ರ ಭಾರತದ 2ನೇ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು.

ಶಾಸ್ತ್ರಿಯವರ ಜೀವನದೆಡೆಗೊಂದು ನೋಟ

ಲಾಲ್ ಬಹದ್ದೂರ್ ಶಾಸ್ತ್ರಿಯವರು ಮೊಘಲ್ ಸರಾಯ್ ಮತ್ತು ವಾರಣಾಸಿಯ ಈಸ್ಟ್ ಸೆಂಟ್ರಲ್ ರೈಲ್ವೆ ಇಂಟರ್ ಕಾಲೇಜಿನಲ್ಲಿ ಅಧ್ಯಯನ ಮಾಡಿದರು. ಅವರು 1926ರಲ್ಲಿ ಕಾಶಿ ವಿದ್ಯಾಪೀಠದಿಂದ ತಮ್ಮ ಪದವಿಯನ್ನು ಪೂರ್ಣಗೊಳಿಸಿದರು. ಅವರ ಪದವಿ ಪ್ರಶಸ್ತಿಯ ಭಾಗವಾಗಿ ವಿದ್ಯಾಪೀಠವು ಅವರಿಗೆ "ಶಾಸ್ತ್ರಿ" ಅಂದರೆ "ವಿದ್ವಾಂಸ" ಎಂಬ ಬಿರುದನ್ನು ನೀಡಿತು. ಆದರೆ ಈ ಬಿರುದು ಅವರ ಹೆಸರಿಗೆ ಸೇರಿಕೊಂಡಿತು. ಶಾಸ್ತ್ರಿಯವರು ಮಹಾತ್ಮ ಗಾಂಧೀಜಿ ಮತ್ತು ಬಾಲಗಂಗಾಧರ ತಿಲಕ್ ಅವರಿಂದ ಬಹಳಷ್ಟು ಪ್ರಭಾವಿತರಾಗಿದ್ದರು. ಶಾಸ್ತ್ರಿಯವರು 16 ಮೇ 1928ರಂದು ಲಲಿತಾದೇವಿ ಅವರನ್ನು ವಿವಾಹವಾದರು. ಅವರು ಲಾಲಾ ಲಜಪತ್ ರಾಯ್ ಸ್ಥಾಪಿಸಿದ ಸರ್ವೆಂಟ್ಸ್ ಆಫ್ ದಿ ಪೀಪಲ್ ಸೊಸೈಟಿಯ (ಲೋಕ ಸೇವಕ ಮಂಡಲ್) ಆಜೀವ ಸದಸ್ಯರಾಗಿದ್ದರು. ಅಲ್ಲಿ ಹಿಂದುಳಿದ ವರ್ಗಗಳ ಅಭ್ಯುದಯಕ್ಕಾಗಿ ಶ್ರಮಿಸಲು ಆರಂಭಿಸಿ, ಮುಂದೆ ಆ ಸೊಸೈಟಿಯ ಅಧ್ಯಕ್ಷರಾದರು.

ಇದನ್ನೂ ಓದಿ: Vistara Sale 2023: ಈ Airlinesನಿಂದ ಬಂಪರ್ ಗಿಫ್ಟ್: ಅತೀ ಕಡಿಮೆ ಬೆಲೆಯಲ್ಲಿ ವಿಮಾನಯಾನ: ಇಂದೇ ಬುಕ್ ಮಾಡಿ

1920ರ ದಶಕದಲ್ಲಿ ಅವರು ಭಾರತೀಯ ಸ್ವಾತಂತ್ರ್ಯ ಚಳುವಳಿಗೆ ಧುಮುಕಿ, ಅಸಹಕಾರ ಚಳುವಳಿಯಲ್ಲಿ ಭಾಗವಹಿಸಿದರು. ಅವರನ್ನು ಬ್ರಿಟಿಷರು ಬಂಧಿಸಿ, ಕೆಲಕಾಲ ಜೈಲಿಗೂ ಕಳುಹಿಸಿದ್ದರು. 1930ರಲ್ಲಿ ಅವರು ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿದರು. ಅದಕ್ಕಾಗಿ ಅವರು 2 ವರ್ಷಗಳಿಗಿಂತ ಹೆಚ್ಚು ಕಾಲ ಜೈಲುವಾಸ ಅನುಭವಿಸಿದರು. 1937ರಲ್ಲಿ ಅವರು ಉತ್ತರ ಪ್ರದೇಶದ ಸಂಸದೀಯ ಮಂಡಳಿಯ ಸಂಘಟನಾ ಕಾರ್ಯದರ್ಶಿಯಾಗಿ ಸೇರಿದರು. ಮಹಾತ್ಮಾ ಗಾಂಧಿಯವರು ಮುಂಬೈನಲ್ಲಿ ಕ್ವಿಟ್ ಇಂಡಿಯಾ ಭಾಷಣ ಮಾಡಿದ ನಂತರ ಶಾಸ್ತ್ರಿಯವರನ್ನು 1942ರಲ್ಲಿ ಮತ್ತೆ ಜೈಲಿಗೆ ಕಳುಹಿಸಲಾಯಿತು. ಅವರು 1946ರವರೆಗೆ ಜೈಲಿನಲ್ಲಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಶಾಸ್ತ್ರಿಯವರು ಒಟ್ಟು 9 ವರ್ಷಗಳ ಕಾಲ ಜೈಲಿನಲ್ಲಿ ಕಳೆದರು. ಆ ಅವಧಿಯಲ್ಲಿ ಅವರು ಪಾಶ್ಚಿಮಾತ್ಯ ತತ್ವಜ್ಞಾನಿಗಳು, ಕ್ರಾಂತಿಕಾರಿಗಳು ಮತ್ತು ಸಮಾಜ ಸುಧಾರಕರ ಕೃತಿಗಳನ್ನು ಅಧ್ಯಯನ ಮಾಡಿದರು.

ಶಾಸ್ತ್ರಿಯವರ ರಾಜಕೀಯ ಸಾಧನೆಗಳು

ಭಾರತದ ಸ್ವಾತಂತ್ರ್ಯದ ನಂತರ ಲಾಲ್ ಬಹದ್ದೂರ್ ಶಾಸ್ತ್ರಿಯವರು ಉತ್ತರ ಪ್ರದೇಶದ ಸಂಸದೀಯ ಕಾರ್ಯದರ್ಶಿಯಾದರು. 1947ರಲ್ಲಿ ಪೊಲೀಸ್ ಮತ್ತು ಸಾರಿಗೆ ಸಚಿವರೂ ಆದರು. ಸಾರಿಗೆ ಸಚಿವರಾಗಿ ಪ್ರಥಮ ಬಾರಿಗೆ ಮಹಿಳಾ ಕಂಡಕ್ಟರ್‌ಗಳನ್ನು ನೇಮಿಸಿದರು. ಪೊಲೀಸ್ ಇಲಾಖೆಯ ಉಸ್ತುವಾರಿ ಸಚಿವರಾಗಿದ್ದ ಅವಧಿಯಲ್ಲಿ, ಪ್ರತಿಭಟನಾನಿರತ ಜನರನ್ನು ಚದುರಿಸಲು ಪೊಲೀಸರು ನೀರಿನ ಜೆಟ್‌ಗಳನ್ನು ಬಳಸಬೇಕೇ ಹೊರತು ಲಾಠಿಗಳನ್ನಲ್ಲ ಎಂದು ಆದೇಶ ಹೊರಡಿಸಿದರು.

1951ರಲ್ಲಿ ಶಾಸ್ತ್ರಿಯವರು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡರು. ಬಳಿಕ ಚುನಾವಣೆಗೆ ಸಂಬಂಧಿಸಿದ ಪ್ರಚಾರ ಮತ್ತು ಇತರ ಚಟುವಟಿಕೆಗಳನ್ನು ನಡೆಸುವಲ್ಲಿ ತನ್ನ ಸಾಮರ್ಥ್ಯ ನಿರೂಪಿಸಿದರು. 1952ರಲ್ಲಿ ಅವರು ಉತ್ತರ ಪ್ರದೇಶದಿಂದ ರಾಜ್ಯಸಭೆಗೆ ಆಯ್ಕೆಯಾದರು. ರೈಲ್ವೆ ಸಚಿವರಾಗಿದ್ದ ಅವಧಿಯಲ್ಲಿ 1955ರಲ್ಲಿ ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ಮೊದಲ ಯಂತ್ರವನ್ನು ಸ್ಥಾಪಿಸಿದರು. 1957ರಲ್ಲಿ ಶಾಸ್ತ್ರಿಯವರು ಮತ್ತೆ ಸಾರಿಗೆ ಮತ್ತು ಸಂವಹನ ಸಚಿವರಾದರು. ಬಳಿಕ ನಂತರ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಜವಾಬ್ದಾರಿಯೂ ಬಂತು. 1961ರಲ್ಲಿ ಅವರು ಗೃಹ ಸಚಿವರಾಗಿ ನೇಮಕಗೊಂಡರು. ಆಗ ಸ್ವಚ್ಛ ಆಡಳಿತಕ್ಕಾಗಿ ಭ್ರಷ್ಟಾಚಾರ ತಡೆ ಸಮಿತಿಯನ್ನು ಸ್ಥಾಪಿಸಿದರು. ಅವರು ಅಸ್ಸಾಂ ಮತ್ತು ಪಂಜಾಬ್‌ನಲ್ಲಿ ಭಾಷಾ ಆಂದೋಲನಗಳನ್ನು ಒಳಗೊಂಡಿದ್ದ ಪ್ರಸಿದ್ಧ "ಶಾಸ್ತ್ರಿ ಸೂತ್ರ"ವನ್ನು ರಚಿಸಿದರು.

ಇದನ್ನೂ ಓದಿ: Narendra Modi: ತಮ್ಮ ವೈದ್ಯಕೀಯ ವೆಚ್ಚವನ್ನು ತಾವೇ ಭರಿಸುತ್ತಿರುವ ಪ್ರಧಾನಿ ಮೋದಿ

9 ಜೂನ್ 1964ರಂದು ಲಾಲ್ ಬಹದ್ದೂರ್ ಶಾಸ್ತ್ರಿ ಭಾರತದ ಪ್ರಧಾನಮಂತ್ರಿಯಾದರು. ಅವರು ಹಾಲು ಉತ್ಪಾದನೆಯನ್ನು ಹೆಚ್ಚಿಸುವ ಸಲುವಾಗಿ ಕ್ಷೀರ ಕ್ರಾಂತಿ ಎಂಬ ರಾಷ್ಟ್ರೀಯ ಅಭಿಯಾನವನ್ನು ಬೆಂಬಲಿಸಿದರು. ಭಾರತದಲ್ಲಿ ಆಹಾರ ಉತ್ಪಾದನೆಯನ್ನು ಹೆಚ್ಚಿಸುವ ಸಲುವಾಗಿ ಹಸಿರು ಕ್ರಾಂತಿಯನ್ನು ಬೆಂಬಲಿಸಿದರು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಶಾಸ್ತ್ರಿಯವರು ನೆಹರೂ ಅವರ ಅಲಿಪ್ತ ನೀತಿಯನ್ನು ಮುಂದುವರೆಸಿದರು. ಆದರೆ ಸೋವಿಯತ್ ಒಕ್ಕೂಟದೊಂದಿಗೆ ಭಾರತದ ಬಾಂಧವ್ಯವನ್ನು ವೃದ್ಧಿಸಿದರು. 1964ರಲ್ಲಿ ಅವರು ಶ್ರೀಲಂಕಾದಲ್ಲಿ ಭಾರತೀಯ ತಮಿಳರ ಸ್ಥಾನಮಾನಕ್ಕೆ ಸಂಬಂಧಿಸಿದಂತೆ ಶ್ರೀಲಂಕಾದ ಪ್ರಧಾನಿ ಸಿರಿಮಾವೊ ಬಂಡಾರನಾಯಕೆ ಅವರೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದರು. ಈ ಒಪ್ಪಂದವನ್ನು ಸಿರಿಮಾವೋ-ಶಾಸ್ತ್ರಿ ಒಪ್ಪಂದ ಎಂದು ಕರೆಯಲಾಗುತ್ತದೆ.

1965ರಲ್ಲಿ ಶಾಸ್ತ್ರಿ ಅಧಿಕೃತವಾಗಿ ಬರ್ಮಾದ ರಂಗೂನ್‌ಗೆ ಭೇಟಿ ನೀಡಿದರು. ಅಲ್ಲಿನ ಸರ್ವಾಧಿಕಾರಿ ಜನರಲ್ ನೆ ವಿನ್ ಅವರ ಮಿಲಿಟರಿ ಸರ್ಕಾರದೊಂದಿಗೆ ಭಾರತದ ಉತ್ತಮ ಸಂಬಂಧವನ್ನು ಮರುಸ್ಥಾಪಿಸಿದರು. ಅವರ ಅಧಿಕಾರಾವಧಿಯಲ್ಲಿ ಭಾರತವು 1965ರಲ್ಲಿ ಪಾಕಿಸ್ತಾನದಿಂದ ಮತ್ತೊಂದು ಆಕ್ರಮಣವನ್ನು ಎದುರಿಸಿತು. ದಾಳಿಗೆ ಪ್ರತಿಕ್ರಿಯೆಯಾಗಿ ಶಾಸ್ತ್ರಿಯವರು ಭಾರತದ ಭದ್ರತಾ ಪಡೆಗಳಿಗೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಿದರು. "ಬಲಪ್ರಯೋಗಕ್ಕೆ ಬಲಪ್ರಯೋಗದಿಂದಲೇ ಉತ್ತರಿಸಲಾಗುವುದು" ಎಂದು ಹೇಳಿದರು. ಅವರ ನಾಯಕತ್ವ ಅವರಿಗೆ ಜನಪ್ರಿಯತೆಯನ್ನು ತಂದಿತು.

ಇಂಡೋ-ಪಾಕ್ ಯುದ್ಧವು ಸೆಪ್ಟೆಂಬರ್ 23, 1965ರಂದು ಕೊನೆಗೊಂಡಿತು. ಜನವರಿ 10, 1966ರಂದು ರಷ್ಯಾದ ಪ್ರಧಾನ ಮಂತ್ರಿ ಕೊಸಿಗಿನ್ ಅವರು ಲಾಲ್ ಬಹದ್ದೂರ್ ಶಾಸ್ತ್ರಿ ಮತ್ತು ಪಾಕಿಸ್ತಾನದ ಪ್ರಧಾನಿ ಅಯೂಬ್ ಖಾನ್ ಅವರ ಮಧ್ಯ ಶಾಂತಿ ಸ್ಥಾಪನೆಯ ಸಂಬಂಧ ಮಧ್ಯಸ್ಥಿಕೆ ವಹಿಸಲು ಮುಂದಾದರು. ಇದರ ಪರಿಣಾಮವಾಗಿ ಶಾಸ್ತ್ರಿ ಮತ್ತು ಅಯೂಬ್ ಖಾನ್ ತಾಷ್ಕೆಂಟ್ ಒಪ್ಪಂದಕ್ಕೆ ಸಹಿ ಹಾಕಿದರು.

ಲಾಲ್ ಬಹದ್ದೂರ್ ಶಾಸ್ತ್ರಿ ನಿಧನ

ಲಾಲ್ ಬಹದ್ದೂರ್ ಶಾಸ್ತ್ರಿಯವರು 11 ಜನವರಿ 1966ರಂದು ತಾಷ್ಕೆಂಟ್‌ನಲ್ಲಿ ಹೃದಯಾಘಾತದಿಂದ ನಿಧನರಾದರು. ಅವರಿಗೆ 1966ರಲ್ಲಿ ಮರಣೋತ್ತರವಾಗಿ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನ ನೀಡಿ ಗೌರವಿಸಲಾಯಿತು.

ಇದನ್ನೂ ಓದಿ: ಪಡಿತರ ಚೀಟಿ ಇದ್ದರೆ ಸರ್ಕಾರದಿಂದ ಸಂಕ್ರಾಂತಿಗೆ ಒಂದು ಸಾವಿರ ರೂಪಾಯಿ ಮತ್ತು ಗಿಫ್ಟ್ ಹ್ಯಾಂಪರ್ !

ಲಾಲ್ ಬಹದ್ದೂರ್ ಶಾಸ್ತ್ರಿಯವರ ಬಗ್ಗೆ ಕೆಲವು ಸಂಗತಿಗಳು

- ಭಾರತದ 2ನೇ ಪ್ರಧಾನ ಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿಯವರು ಮಹಾತ್ಮ ಗಾಂಧಿಯವರ ಜನ್ಮದಿನವಾದ ಅಕ್ಟೋಬರ್ 2ರಂದು ಜನಿಸಿದ್ದರು.

- 1926ರಲ್ಲಿ ಅವರ ಪಾಂಡಿತ್ಯದ ಗುರುತಾಗಿ ಕಾಶಿ ವಿದ್ಯಾಪೀಠ ವಿಶ್ವವಿದ್ಯಾಲಯದಲ್ಲಿ 'ಶಾಸ್ತ್ರಿ' ಪದವಿಯನ್ನು ನೀಡಿ ಗೌರವಿಸಿತ್ತು.

- ಬಾಲ್ಯದಲ್ಲಿ ಅವರು ಶಾಲೆಗೆ ಹೋಗಲು ದಿನಕ್ಕೆ 2 ಬಾರಿ ಗಂಗಾನದಿಯನ್ನು ಈಜುತ್ತಿದ್ದರು. ಆ ಸಮಯದಲ್ಲಿ ದೋಣಿಯಲ್ಲಿ ತೆರಳಲು ಹಣವಿಲ್ಲದ ಕಾರಣ ತಲೆಯ ಮೇಲೆ ಪುಸ್ತಕಗಳ ಚೀಲ ಕಟ್ಟಿಕೊಂಡು ಈಜುತ್ತಿದ್ದರು.

- ಲಾಲ್ ಬಹದ್ದೂರ್ ಶಾಸ್ತ್ರಿಯವರು ಉತ್ತರ ಪ್ರದೇಶದ ಸಚಿವರಾಗಿದ್ದಾಗ, ಗುಂಪನ್ನು ಚದುರಿಸಲು ಲಾಠಿ ಚಾರ್ಜ್ ಬದಲಿಗೆ ನೀರಿನ ಜೆಟ್ ಬಳಸಿದ ಮೊದಲ ವ್ಯಕ್ತಿ.

- ಶಾಸ್ತ್ರಿಯವರು "ಜೈ ಜವಾನ್ ಜೈ ಕಿಸಾನ್" ಘೋಷಣೆಯನ್ನು ಪರಿಚಯಿಸಿದರು.

- ಶಾಸ್ತ್ರಿಯವರು ಗಾಂಧೀಜಿ ಅವರೊಂದಿಗೆ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಅಸಹಕಾರ ಚಳವಳಿಯಲ್ಲಿ ಭಾಗವಹಿಸಿದ್ದರಿಂದ ಜೈಲಿಗೆ ಹೋಗಬೇಕಾಯಿತು. ಆದರೆ ಅವರು ಕೇವಲ 17 ವರ್ಷ ವಯಸ್ಸಿನವರಾಗಿದ್ದರಿಂದ ಬಿಡುಗಡೆ ಮಾಡಲಾಯಿತು.

- ಸ್ವಾತಂತ್ರ್ಯದ ನಂತರ ಸಾರಿಗೆ ಸಚಿವರಾಗಿದ್ದ ಅವರು ಸಾರ್ವಜನಿಕ ಸಾರಿಗೆಯಲ್ಲಿ ಮಹಿಳಾ ಚಾಲಕರು ಮತ್ತು ಕಂಡಕ್ಟರ್‌ಗಳ ಅವಕಾಶವನ್ನು ಪರಿಚಯಿಸಿದರು.

- ಶಾಸ್ತ್ರಿಯವರು ತಮ್ಮ ಮದುವೆಯಲ್ಲಿ ವರದಕ್ಷಿಣೆಯಾಗಿ ಖಾದಿ ಬಟ್ಟೆ ಮತ್ತು ನೂಲುವ ಚಕ್ರವನ್ನು ಸ್ವೀಕರಿಸಿದರು.

- ಶಾಸ್ತ್ರಿಯವರು ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿ, ಅದಕ್ಕಾಗಿ 2 ವರ್ಷಗಳ ಕಾಲ ಜೈಲಿಗೆ ಹೋದರು.

- ಶಾಸ್ತ್ರಿಯವರು ಗೃಹ ಸಚಿವರಾಗಿದ್ದಾಗ, ಭ್ರಷ್ಟಾಚಾರ ತಡೆಗೆ ಮೊದಲ ಸಮಿತಿಯನ್ನು ಸ್ಥಾಪಿಸಿದರು.

- ಶಾಸ್ತ್ರಿಯವರು ಭಾರತದ ಆಹಾರ ಉತ್ಪಾದನೆಯನ್ನು ಹೆಚ್ಚಿಸಲು ಹಸಿರು ಕ್ರಾಂತಿಯ ಕಲ್ಪನೆಯನ್ನು ಸಹ ಸಂಯೋಜಿಸಿದ್ದರು.

- 1920ರ ದಶಕದಲ್ಲಿ ಶಾಸ್ತ್ರಿಯವರು ಸ್ವಾತಂತ್ರ್ಯ ಚಳುವಳಿಗೆ ಸೇರಿದರು ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಪ್ರಮುಖ ನಾಯಕರಾಗಿ ಸೇವೆ ಸಲ್ಲಿಸಿದರು.

- ದೇಶದಲ್ಲಿ ಹಾಲಿನ ಉತ್ಪಾದನೆಯನ್ನು ಹೆಚ್ಚಿಸುವ ಕ್ಷೀರ ಕ್ರಾಂತಿಯ ಪ್ರಚಾರಕ್ಕೂ ಶಾಸ್ತ್ರಿಯವರು ಬೆಂಬಲ ನೀಡಿದ್ದರು. ಅವರು ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಯನ್ನು ರಚಿಸಿದ್ದರು. ಗುಜರಾತ್‌ನ ಆನಂದ್‌ನಲ್ಲಿರುವ ಅಮುಲ್ ಹಾಲಿನ ಸಹಕಾರಿ ಸಂಘವನ್ನು ಬೆಂಬಲಿಸಿದರು.

- 1965ರ ಭಾರತ-ಪಾಕ್ ಯುದ್ಧವನ್ನು ಕೊನೆಗೊಳಿಸಲು ಪಾಕಿಸ್ತಾನದ ಅಧ್ಯಕ್ಷ ಮುಹಮ್ಮದ್ ಅಯೂಬ್ ಖಾನ್ ಅವರೊಂದಿಗೆ ಜನವರಿ 10, 1966ರಂದು ತಾಷ್ಕೆಂಟ್ ಘೋಷಣೆಗೆ ಶಾಸ್ತ್ರಿಯವರು ಸಹಿ ಹಾಕಿದರು.

- ಶಾಸ್ತ್ರಿಯವರು ವರದಕ್ಷಿಣೆ ವ್ಯವಸ್ಥೆ ಮತ್ತು ಜಾತಿ ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಿದರು.

- ಶಾಸ್ತ್ರಿಯವರು ಶಿಸ್ತು ಮತ್ತು ಪ್ರಾಮಾಣಿಕತೆಗೆ ಹೆಸರಾದವರು. ಭಾರತದ ಪ್ರಧಾನಿಯಾದ ನಂತರವೂ ಅವರ ಬಳಿ ಸ್ವಂತ ಕಾರು ಸಹ ಇರಲಿಲ್ಲ.

✍ ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕರು

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News