ನವದೆಹಲಿ: ಉತ್ತರ ಪ್ರದೇಶದ ವೀರ್ ಬಹದ್ದೂರ್ ಸಿಂಗ್ ಪೂರ್ವಾಂಚಲ ವಿಶ್ವವಿದ್ಯಾನಿಲಯದ ಉಪಕುಲಪತಿ ರಾಜಾ ರಾಮ್ ಯಾದವ್ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಸತ್ಯದೇವ್ ಪದವಿ ಕಾಲೇಜು ಮತ್ತು ಡಾ. ರಾಮ್ ಮನೋಹರ್ ಲೋಹಿಯಾ ಪದವಿ ಕಾಲೇಜು ಜಂಟಿಯಾಗಿ ಗಾಜಿಪುರದಲ್ಲಿ ಏರ್ಪಡಿಸಿದ್ದ ಸೆಮಿನಾರ್ ನಲ್ಲಿ ಭಾಗವಹಿಸಿದ್ದ ರಾಜಾ ರಾಮ್ ಯಾದವ್ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, "ನನ್ನ ಬಳಿ ಯಾರೂ ಅಳುತ್ತಾ ಬರಬೇಡಿ, ಯಾರನ್ನಾದರೂ ಮರ್ಡರ್ ಮಾಡಿ ಬನ್ನಿ, ಉಳಿದದ್ದನ್ನು ನಾವು ನೋಡಿಕೊಳ್ಳುತ್ತೇವೆ" ಎಂದಿದ್ದಾರೆ.
"ನೀವು ಪುರ್ವಾಂಚಲ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳೇ ಆಗಿದ್ದರೆ, ಅಳುತ್ತಾ ನನ್ನ ಬಳಿ ಎಂದಿಗೂ ಬರಬೇಡಿ. ಒಂದು ಮಾತು ಹೇಳ್ತೀನಿ, ಯಾರೊಂದಿಗಾದರೂ ಜಗಳ ಆಡಿದ್ದೇ ಆದರೆ, ಚೆನ್ನಾಗಿ ನಾಲ್ಕು ಬಾರಿಸಿ ಬನ್ನಿ. ಆದರೂ ನಿಮ್ಮನ್ನು ಬಿಡಲಿಲ್ಲ ಎಂದರೆ ಅಲ್ಲೇ ಅವರನ್ನು ಮರ್ಡರ್ ಮಾಡಿ ಬನ್ನಿ, ಮುಂದಿನದ್ದು ನಾವು ನೋಡಿಕೊಳ್ತೀವಿ" ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
#WATCH Purvanchal University Vice-Chancellor Raja Ram Yadav at a seminar in the University in Ghazipur: If you’re a student of this University, never come crying to me. If you ever get into a fight, beat them, if possible murder them, we’ll take care of it later. (29.12.18) pic.twitter.com/omFqXN55z9
— ANI UP (@ANINewsUP) December 30, 2018
ಈ ಬಗ್ಗೆ ಎಎನ್ಐ ಸುದ್ದಿಸಂಸ್ಥೆ ಡಿಸೆಂಬರ್ 29 ರಂದು ವೀಡಿಯೋ ಬಿಡುಗಡೆ ಮಾಡಿದೆ. ಉತ್ತರಪ್ರದೇಶ ರಾಜ್ಯಪಾಲರಾದ ರಾಮ್ ನಾಯಕ್ ಅವರು 2017ರಲ್ಲಿ ರಾಜಾ ರಾಮ್ ಯಾದವ್ ಅವರನ್ನು ಪೂರ್ವಾಂಚಲ ವಿಶ್ವವಿದ್ಯಾನಿಲಯದ ಉಪಕುಲಪತಿಯಾಗಿ ನೇಮಿಸಿದ್ದರು. ಇದಕ್ಕೂ ಮುನ್ನ ರಾಜಾ ರಾಮ್ ಯಾದವ್ ಅಲಹಾಬಾದ್ ವಿಶ್ವವಿದ್ಯಾನಿಲಯದ ಭೌತಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದರು.