ಗಡ್ಚಿರೋಲಿ: ನಕ್ಸಲ್ ಪೀಡಿತ ಜಿಲ್ಲೆ ಗಡ್ಚಿರೋಲಿಯ ಭಮರಗಢದಲ್ಲಿ ಮೂವರು ಗ್ರಾಮಸ್ಥರನ್ನು ಕೊಂದ ನಕ್ಸಲರು ಮೃತ ದೇಹಗಳನ್ನು ರಸ್ತೆಯಲ್ಲಿ ಬಿಸಾಡಿದ ಅಮಾನುಷ ಘಟನೆ
ಅಷ್ಟೇ ಅಲ್ಲದೆ, ಶವಗಳನ್ನು ಎಸೆದ ಸ್ಥಳದಲ್ಲಿ ನಕ್ಸಲರು ತಮ್ಮ ಬ್ಯಾನರ್ ಹಾಕಿ ಹೋಗಿದ್ದು, ಇದರಲ್ಲಿ "ನೀವೂ ಸಹ ಪೊಲೀಸ್ ಪ್ರತಿನಿಧಿಗಳಾಗಿದ್ದರೆ ನಿಮಗೂ ಇದೇ ಸ್ಥಿತಿ ಬರಲಿದೆ" ಎಂದು ಹೇಳಿದ್ದಾರೆ. ಮೃತರನ್ನು ಮಾಲೂ ಡೋಗ್ಗೆ ಮಡಾವೀ, ಕನ್ನಾ ರಾಣಾ ಮಡಾವಿ ಮತ್ತು ಲಾಲಸು ಕುಡಯೆಟ್ಟಿ ಎಂದು ಗುರುತಿಸಲಾಗಿದ್ದು, ಕಸ್ನಾಸೂರ್ ಗ್ರಾಮದವರು ಎನ್ನಲಾಗಿದೆ.
ನಕ್ಸಲರು ಬಿಟ್ಟು ಹೋಗಿರುವ ಬ್ಯಾನರ್'ನಲ್ಲಿ ಹತ್ಯೆಯಾದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡುತ್ತಿದ್ದರು. ಅದಕ್ಕಾಗಿ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಬರೆಯಲಾಗಿದೆ.
ಕಳೆದ ವರ್ಷ ಏಪ್ರಿಲ್ 22ರಂದು ಕಸ್ನೂರ್-ತುಮಿರ್ಗುಡ್'ನ ಮುಠಭೇಡ್'ನಲ್ಲಿ 40 ನಕ್ಸಲರನ್ನು ಎಸ್ಟಿಎಫ್ ಪಡೆ ಎನ್ಕೌಂಟರ್ ಮಾಡಿತ್ತು. ಈ ಘಟನೆಯ ಬಗ್ಗೆಯೂ ನಕ್ಸಲರು ಬ್ಯಾನರ್'ನಲಿ ಪ್ರಸ್ತಾಪಿಸಿದ್ದು, "ಕಸ್ನೂರ್-ತುಮಿರ್ಗುಡ್ ಘಟನೆಯಲ್ಲಿ ನಮ್ಮ ಆತ್ಮೀಯರು ಸಾವನ್ನಪ್ಪಿದರು. ಹೀಗಾಗಿ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದರು ಎಂಬ ಆರೋಪದ ಮೇಲೆ ಮಾಲೂ ಡೋಗ್ಗೆ ಮಡಾವೀ, ಕನ್ನಾ ರಾಣಾ ಮಡಾವಿ ಮತ್ತು ಲಾಲಸು ಕುಡಯೆಟ್ಟಿ ಈ ಮೂವರು ಗ್ರಾಮಸ್ಥರನ್ನು ಕೊಲ್ಲಲಾಗಿದೆ. - ಭಾರತೀಯ ಕಮ್ಯೂನಿಸ್ಟ್ ಪಕ್ಷ(ಮಾವೋವಾದಿ), ದಕ್ಷಿಣ ಗಡ್ಚಿರೋಲಿ ವಿಭಾಗ ಸಮಿತಿ" ಎಂದು ಬರೆಯಲಾಗಿದೆ.