ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಬಜೆಟ್ ನ್ನು ಸಿಎಂ ಕುಮಾರಸ್ವಾಮಿ ಮಂಡಿಸಿದ್ದು ಇದರಲ್ಲಿ ಈ ಬಾರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಹಲವು ನೂತನ ಯೋಜನೆಗಳನ್ನು ಘೋಷಣೆ ಮಾಡಲಾಗಿದೆ.
-ಶ್ರೀ ಶಿವಕುಮಾರ ಸ್ವಾಮೀಜಿಗಳ ಹುಟ್ಟೂರು ರಾಮನಗರ ಜಿಲ್ಲೆಯ ವೀರಾಪುರ ಗ್ರಾಮದಲ್ಲಿ ವಿಶ್ವದರ್ಜೆಯ ಸಾಂಸ್ಕೃತಿಕ ಹಾಗೂ ಪಾರಂಪರಿಕ ಕೇಂದ್ರ ಸ್ಥಾಪನೆಗೆ 25 ಕೋಟಿ ರೂ. ಗಳ ವಿಶೇಷ ಅನುದಾನ.
-ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಜನ್ಮಸ್ಥಳ ರಾಮನಗರ ಜಿಲ್ಲೆಯ ಬಿಡದಿ ತಾ. ಬಾಣಂದೂರು ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಅಭಿವೃದ್ಧಿಪಡಿಸಲು ಹಾಗೂ ಶ್ರೀಗಳ ಜೀವನ ಸಾಧನೆಗಳು, ವಿಚಾರಗಳನ್ನು ಸಾರಲು ಸಾಂಸ್ಕೃತಿಕ ಹಾಗೂ ಪಾರಂಪರಿಕ ಕೇಂದ್ರ ಸ್ಥಾಪನೆಗೂ ಸಹ 25 ಕೋಟಿ ರೂ. ಅನುದಾನ
-ನಾಡಪ್ರಭು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರಕ್ಕೆ 5 ಕೋಟಿ ಅನುದಾನ.
-ಕೊಡವ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ 10 ಕೋಟಿ ರೂ. ಅನುದಾನ.
-ರಾಜ್ಯದ ಜಾನಪದ ಕಲಾವಿದರು ಹಾಗೂ ಕಲೆಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ''ಜಾನಪದ ಜಾತ್ರೆ'' ಕಾರ್ಯಕ್ರಮಕ್ಕೆ ಮರುಚಾಲನೆ ನೀಡಲು ರಾಜ್ಯ ಸರಕಾರ ತೀರ್ಮಾನಿಸಿದೆ.ಈ ಹಿನ್ನೆಲೆ, ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಜಾನಪದ ಜಾತ್ರೆ ಏರ್ಪಡಿಸಲು 2 ಕೋಟಿ ರೂ. ಅನುದಾನ.
-ಮೈಸೂರಿನಲ್ಲಿ ಸುತ್ತೂರಿನ ಜಗದ್ಗುರು ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಮಠದ ವತಿಯಿಂದ ಕರಕುಶಲಕರ್ಮಿಗಳಿಗೆ ಅರ್ಬನ್ ಹಾಟ್ ವ್ಯವಸ್ಥಿತ ಸೌಲಭ್ಯ ಕಲ್ಪಿಸಲು ಹಾಗೂ ಉನ್ನತೀಕರಿಸಲು 5 ಕೋಟಿ ರೂ. ಅನುದಾನ.
-ಬೆಂಗಳೂರಿನ ಶ್ರೀ ಕೆಂಗಲ್ ಹನುಮಂತಯ್ಯ ಹಾಸ್ಟಲ್ ಟ್ರಸ್ಟ್ನ ಸಾಂಸ್ಕೃತಿಕ ಮತ್ತು ಗ್ರಂಥಾಲಯ ಕೇಂದ್ರ ಅಭಿವೃದ್ಧಿಗೆ 5 ಕೋಟಿ ರೂ. ಅನುದಾನ ಘೋಷಿಸಲಾಗಿದೆ. ಅಲ್ಲದೆ, ಕರಗ ಉತ್ಸವ ಆಚರಿಸುವ 139 ಸಂಘ ಸಂಸ್ಥೆಗಳಿಗೆ, ತುಮಕೂರು ಜಿಲ್ಲೆ ಮಾಯಸಂದ್ರದ ಆದಶಕ್ತಿ ಮಾತೆಯರ ವೃದ್ಧಾಶ್ರಮ ಅಭಿವೃದ್ಧಿಗೆ, ಕರ್ನಾಟಕ ರಾಜ್ಯ ಕುಂಚಿಟಿಗರ - ಒಕ್ಕಲಿಗರ ಸಂಘದ ಅಭಿವೃದ್ಧಿಗೆ ತಲಾ 2 ಕೋಟಿ ರೂ. ಅನುದಾನ.
-ಮಂಡ್ಯದ ಕರ್ನಾಟಕ ಸಂಘದ ಅಭಿವೃದ್ಧಿಗೆ, ಕರ್ನಾಟಕ ಜಾನಪದ ಪರಿಷತ್ತಿನ ಚಟುವಟಿಕೆಗಳಿಗೆ, ದಾವಣಗೆರೆ ಜಿಲ್ಲೆ ಮಲೇಬೆನ್ನೂರಿನ ವೀರಭದ್ರೇಶ್ವರ ಚಾರಿಟೆಬಲ್ ಟ್ರಸ್ಟಿಗೆ ತಲಾ 1 ಕೋಟಿ ರೂ. ಅನುದಾನ ಘೋಷಿಸಲಾಗಿದೆ.
-ತಿಪಟೂರಿನಲ್ಲಿ ಹಾಸ್ಯ ಚಕ್ರವರ್ತಿ ದಿ. ನರಸಿಂಹರಾಜು ಅವರ ಹೆಸರಿನಲ್ಲಿ ಸ್ಮಾರಕ ಸಭಾ ಮಂದಿರ ನಿರ್ಮಾಣಕ್ಕೆ 2 ಕೋಟಿ ರೂ. ಅನುದಾನ.