ಆಸನ್ಸೋಲ್: ಬಿಜೆಪಿ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಯಶವಂತ ಸಿನ್ಹಾ ಅವರು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಹಾಗೂ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿಯನ್ನು ಭಾರತದ ಪ್ರಧಾನಿಯಾಗಿ ನೋಡಲು ಬಯಸುತ್ತೇನೆ ಎಂದು ಹೇಳಿದ್ದಾರೆ.
ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತಾ ಶಾ ಅವರು ನಡೆಸಿದ ರೋಡ್ ಶೋ ಬಗ್ಗೆ ಟೀಕಿಸಿದ ಸಿನ್ಹಾ, ಮತ ಚಲಾಯಿಸಿದ ಬಳಿಕ ದೇಶದ ಪ್ರಧಾನಿ ತೆರೆದ ಜೀಪಿನಲ್ಲಿ ರೋಡ್ ಶೋ ನಡೆಸುವ ಅಗತ್ಯವೇನಿತ್ತು? ಇದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಲ್ಲವೇ? ಎಂದು ಪ್ರಶ್ನಿಸಿದ್ದಾರೆ.
"ಚುನಾವಣೆಯ ದಿನವೂ ರೋಡ್ ಶೋ ನಡೆಸುತ್ತಾರೆ. ಈ ಚುನಾವಣ ಆಯೋಗಕ್ಕೆ ಏನಾಗಿದೆ? ಪ್ರಧಾನ ಮಂತ್ರಿಯ ಮುಂದೆ ಚುನಾವಣಾ ಆಯೋಗವು ದೌರ್ಜನ್ಯಕ್ಕೊಳಗಾಗಿದೆ. ಇದಕ್ಕೆ ಯಾವುದೇ ಸಾಮರ್ಥ್ಯವಿಲ್ಲ" ಎಂದು ಯಶವಂತ ಸಿನ್ಹಾ ಹೇಳಿದ್ದಾರೆ.
ನೋಟು ನಿಷೇಧದ ಬಗ್ಗೆಯೂ ಮಾತನಾಡಿದ ಸಿನ್ಹಾ, "ನೋಟು ಅಮಾನ್ಯೀಕರಣ ಒಂದು ತಪ್ಪು ನಿರ್ಧಾರ ಎಂಬುದು ನನಗೂ ತಿಳಿದಿದೆ. ಆದರೆ, ಈ ಕ್ರಮದ ಹಿಂದೆ ದೊಡ್ಡ ಪಿತೂರಿ ಇತ್ತು. ಇದಕ್ಕೆ ಸಾಕ್ಷಿ ಇಂದು ದೇಶದ ಮುಂದಿದೆ. ಮೋದಿ ಮತ್ತು ಅಮಿತ್ ಷಾ ಇಂತಹ ಗೇಮ್ ಆಡ್ತಾರೆ ಎಂದು ನನಗೆ ಅರ್ಥವಾಗಿರಲಿಲ್ಲ. ಶೇ.40ರಷ್ಟು ಕಪ್ಪು ಹಣವನ್ನು ವೈಟ್ ಮನಿ ಮಾಡಿದ್ದಾರೆ" ಎಂದು ವಾಗ್ದಾಳಿ ನಡೆಸಿದರು.