ನವದೆಹಲಿ: ಬಿಜೆಪಿ ಶಾಸಕ ಆಕಾಶ್ ವಿಜಯವರ್ಗಿಯ ಕಳೆದ ಬುಧವಾರ ಇಂದೋರ್ನಲ್ಲಿ ಸಾರ್ವಜನಿಕ ಅಧಿಕಾರಿಯೊಬ್ಬರ ಮೇಲೆ ಕ್ರಿಕೆಟ್ ಬ್ಯಾಟ್ ನಿಂದ ಹಲ್ಲೆ ನಡೆಸಿದ್ದ ಪ್ರಕರಣದ ಬಗ್ಗೆ ಮಂಗಳವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಇಂತಹವರನ್ನು ಪಕ್ಷದಿಂದಲೇ ವಜಾಗೊಳಿಸಬೇಕು. ಯಾವುದೇ ಕಾರಣಕ್ಕೂ ಇಂಥ ಕ್ರಮಗಳನ್ನು ಸಹಿಸಲಾಗುವುದಿಲ್ಲ ಎಂದಿದ್ದಾರೆ.
ನವದೆಹಲಿಯಲ್ಲಿ ನಡೆದ ಸಂಸದೀಯ ಮಂಡಳಿ ಸಭೆಯಲ್ಲಿ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಪ್ರಧಾನಿ ಮೋದಿ, "ಅಂತಹ ಜನರನ್ನು ಹೊರಹಾಕಬೇಕು. ಈ ರೀತಿಯ ನಡವಳಿಕೆಯನ್ನು ಸಹಿಸಲಾಗುವುದಿಲ್ಲ. ರಾಜಕಾರಣಿಯ ಮಗನಾಗಿರುವುದು ಯಾರಿಗೆ ಏನು ಬೇಕಾದರೂ ಮಾಡುವ ಹಕ್ಕನ್ನು ನೀಡುವುದಿಲ್ಲ" ಎಂದಿದ್ದಾರೆ.
ಬಿಜೆಪಿಯ ಹಿರಿಯ ಮುಖಂಡ ಕೈಲಾಶ್ ವಿಜಯವರ್ಗಿಯ ಅವರ ಪುತ್ರ ಆಕಾಶ್ ಕ್ರಿಕೆಟ್ ಬ್ಯಾಟ್ ಬಳಸಿ, ಅತಿಕ್ರಮಣ ವಿರೋಧಿ ಚಾಲನೆಯಲ್ಲಿದ್ದ ಸಾರ್ವಜನಿಕ ಅಧಿಕಾರಿಯೊಬ್ಬರಿಗೆ ಹೊಡೆದಿರುವ ಸಂಪೂರ್ಣ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಕಷ್ಟು ಚರ್ಚೆಗೆ ಎಡೆಮಾಡಿಕೊಟ್ಟಿತ್ತು. ಇದರಿಂದಾಗಿ ಬಿಜೆಪಿಗೆ ಭಾರೀ ಮುಜುಗರವನ್ನುಂಟು ಮಾಡಿತ್ತು.
ಘಟನೆಯ ಬಳಿಕ ಶಾಸಕ ವಿಜಯವರ್ಗಿಯ ವಿರುದ್ಧ ಪ್ರಕರಣ ದಾಖಲಾಗಿ ನಾಲ್ಕು ದಿನ ಜೈಲುವಾಸದ ಬಳಿಕ ನ್ಯಾಯಾಲಯ ಭಾನುವಾರ ಜಾಮೀನಿನ ಮೇಲೆ ಹೊರಬಂದಿದ್ದಾರೆ.