ಡಾರ್ಜಿಲಿಂಗ್: ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ ಹಲವೆಡೆ ಭೂಕುಸಿತ ಸಂಭವಿಸಿ ಸೋಮವಾರ ಇಬ್ಬರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಸೋಮವಾರ ಮುಂಜಾನೆ 2 ಗಂಟೆ ಸುಮಾರಿಗೆ ಡಾರ್ಜಿಲಿಂಗ್ನ ಸುಖಿಯಾದ ಪುಬುಂಗ್ ಫಟಕ್ ಬಳಿ ಭೂಕುಸಿತ ಸಂಭವಿಸಿದ್ದು, ಮನೆಯೊಂದು ಸಂಪೂರ್ಣವಾಗಿ ನಾಶಗೊಂಡಿದೆ. ಈ ಸಂದರ್ಭದಲ್ಲಿ ದಂಪತಿಗಳು ಅವಶೇಷಗಳಲ್ಲಿ ಸಿಲುಕಿದ್ದರು. ತಕ್ಷಣವೇ ಕಾರ್ಯೋನ್ಮುಖರಾದ ಪೊಲೀಸರು, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಅಧಿಕಾರಿಗಳು ದಂಪತಿಯನ್ನು ಡಾರ್ಜಿಲಿಂಗ್ ಜಿಲ್ಲಾ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಮಾರ್ಗ ಮಧ್ಯೆ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮೃತರನ್ನು ಕುಮಾರ್ ಲೋಪ್ಚಾನ್ ಮತ್ತು ಅವರ ಪತ್ನಿ ಬಾಲ್ ಕುಮಾರಿ ಲೋಪ್ಚಾನ್ ಎಂದು ಗುರುತಿಸಲಾಗಿದೆ.
ಘೂಮ್ ನಿಲ್ದಾಣದ ಬಳಿ ಮತ್ತೊಂದು ಭೂಕುಸಿತ ಸಂಭವಿಸಿದೆ. ಆದರೆ, ಈ ಭೂಕುಸಿತದಲ್ಲಿ ಯಾವುದೇ ಜೀವಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ. ಭೂಕುಸಿತದಿಂದಾಗಿ ಹಲವಾರು ಪ್ರವಾಸಿ ವಾಹನಗಳು ಸಿಕ್ಕಿಹಾಕಿಕೊಂಡಿದ್ದರಿಂದ ಘೂಮ್ ನಿಲ್ದಾಣ ಮತ್ತು ಸುಖಿಯಾ ನಡುವೆ ವಾಹನ ಸಂಚಾರ ಸ್ಥಗಿತಗೊಂಡಿತ್ತು.
ಗೂರ್ಖಾಲ್ಯಾಂಡ್ ಟೆರಿಟೋರಿಯಲ್ ಅಡ್ಮಿನಿಸ್ಟ್ರೇಷನ್ (ಜಿಟಿಎ) ಯ ಅಧ್ಯಕ್ಷ ಅನಿತ್ ಥಾಪಾ ಅವರು ರಸ್ತೆ ತೆರವು ಕಾರ್ಯಾಚರಣೆಗೂ ಮೊದಲು ಸೋಮವಾರ ಸ್ಥಳವನ್ನು ಪರಿಶೀಲಿಸಿದರು. ಸಂಜೆಯ ವೇಳೆಗೆ ಅವಶೇಷಗಳನ್ನು ತೆರವುಗೊಳಿಸಲಾಯಿತು. ಬಳಿಕ ಸಂಚಾರ ಸಾಮಾನ್ಯ ಸ್ಥಿತಿಗೆ ಮರಳಿತು.
ಮತ್ತೊಂದೆಡೆ, ಹರ್ಸಿಂಗ್ ಮತ್ತು ಮಿನರಲ್ ಸ್ಪ್ರಿಂಗ್ ಸಂಪರ್ಕಿಸುವ ರಸ್ತೆ ಭಾರೀ ಮಳೆಯಿಂದ ಕೊಚ್ಚಿ ಹೋಗಿದೆ. ಕೈಂಜಲಿಯ, ಬಿಲ್ಲಿಂಗ್, ಪಾಡೆಂಗ್, ಕೋಟಿಧುರಾದ ಬಿಜನ್ಬಾರಿ ಬ್ಲಾಕ್ನ ವಿವಿಧ ಪ್ರದೇಶಗಳಲ್ಲಿ ಭೂಕುಸಿತ ಸಂಭವಿಸಿ ಸಂಚಾರಕ್ಕೆ ಅಡ್ಡಿಯಾಗಿದೆ. ಬೆಟ್ಟದ ರಸ್ತೆಗಳಿಂದ ಅವಶೇಷಗಳನ್ನು ತೆರವುಗೊಳಿಸಲು ಜಿಲ್ಲಾಡಳಿತವನ್ನು ಹರಸಾಹಸ ಪಡುತ್ತಿದೆ.
ಭಾರತೀಯ ಹವಾಮಾನ ಇಲಾಖೆ, ಪ್ರಾದೇಶಿಕ ಕೇಂದ್ರ ಕೋಲ್ಕತಾ ಜುಲೈ 12 ರವರೆಗೆ ಡಾರ್ಜಿಲಿಂಗ್ ಮತ್ತು ಉತ್ತರ ಬಂಗಾಳದ ಇತರ ಜಿಲ್ಲೆಗಳಿಗೆ ಹೆಚ್ಚಿನ ಮಳೆಯಾಗುವ ಮುನ್ಸೂಚನೆ ನೀಡಿದೆ.