ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಾಜಿನಗರ ಶಾಸಕ ಆರ್. ರೋಷನ್ ಬೇಗ್ ಅವರನ್ನು ವಿಶೇಷ ತನಿಖಾ ದಳ(ಎಸ್‌ಐಟಿ) ಅಧಿಕಾರಿಗಳು ಸೋಮವಾರ ರಾತ್ರಿ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದಿದ್ದಾರೆ.
ಐಎಂಎ ಜ್ಯುವೆಲ್ಸ್ ವಂಚನೆ ಪ್ರಕರಣದಲ್ಲಿ ಮಾಲೀಕ ಮೊಹಮದ್ ಮನ್ಸೂರ್ ಅಲಿ ಖಾನ್ ಈ ಹಿಂದೆ ವೀಡಿಯೋ ಬಿಡುಗಡೆ ಮಾಡಿ, ರೋಷನ್ ಬೇಗ್‌ಗೆ ಐದು ಕೋಟಿ ರೂಪಾಯಿ ನೀಡಿರುವುದಾಗಿ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ವಿಚಾರಣೆಗೆ ಆಗಮಿಸುವಂತೆ ರೋಷನ್ ಬೇಗ್‌ಗೆ ಹಲವಾರು ಬಾರಿ ಸಮನ್ಸ್ ಜಾರಿ ಮಾಡಿದ್ದರೂ ಅವರು ಗೈರಾಗಿದ್ದರು. ಜುಲೈ 19ರಂದು ವಿಚಾರಣೆಗೆ ಬರುವಂತೆ ಎಸ್‌ಐಟಿ ನೋಟಿಸ್ ನೀಡಿತ್ತು.
ಸೋಮವಾರ ರೋಷನ್ ಬೇಗ್ ಖಾಸಗಿ ವಿಮಾನದಲ್ಲಿ ಬೆಂಗಳೂರು ಬಿಟ್ಟು ಗೌಪ್ಯ ಸ್ಥಳಕ್ಕೆ ಹೋಗಲು ತಯಾರಿ ನಡೆಸಿರುವ ಬಗ್ಗೆ ಖಚಿತ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಎಸ್‌ಐಟಿ, ರಾತ್ರಿ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಪ್ರಯಾಣ ಬೆಳೆಸಲು ಮುಂದಾದ ಸಂದರ್ಭದಲ್ಲಿ ರೋಷನ್ ಬೇಗ್ ಅವರನ್ನು ವಶಕ್ಕೆ ಪಡೆದಿದೆ. ರಾತ್ರಿ 11 ಗಂಟೆ ಸುಮಾರಿಗೆ ರೋಷನ್ ಬೇಗ್‌ರನ್ನು ವಶಕ್ಕೆ ಪಡೆದ ಎಸ್‌ಐಟಿ ಅಧಿಕಾರಿ ಗಿರೀಶ್ ನೇತೃತ್ವದ ತಂಡ ಬಳಿಕ ವಿಚಾರಣೆಗಾಗಿ ಅವರನ್ನು ಎಸ್‌ಐಟಿ ಕಚೇರಿಗೆ ಕರೆದುಕೊಂಡು ಹೋಗಲಾಗಿದೆ.