ಹೈದರಾಬಾದ್: ಬಕ್ರೀದ್ ಎಂದು ಜನಪ್ರಿಯವಾಗಿರುವ ಈದ್ ಅಲ್-ಅಧಾ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದ ಸದಸ್ಯರು ಹಸುಗಳನ್ನು ಬಲಿ ನೀಡುವುದನ್ನು ತಪ್ಪಿಸಬೇಕೆಂದು ತೆಲಂಗಾಣ ಗೃಹ ಸಚಿವ ಮಹಮೂದ್ ಅಲಿ ಕೋರಿದ್ದಾರೆ. ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ಎಸ್) ಸದಸ್ಯತ್ವ ಚಾಲನೆ ನೀಡಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ಗೃಹ ಸಚಿವರು, ಒಂದು ನಿರ್ದಿಷ್ಟ ಸಮುದಾಯದ ಸದಸ್ಯರು ಹಸುವನ್ನು ಪೂಜಿಸುತ್ತಾರೆ ಎಂಬ ಅಂಶವನ್ನು ನಾವು ಗೌರವಿಸಬೇಕು ಎಂದು ತಿಳಿಸಿದರು.
“ನಾನು ಎಲ್ಲಾ ಮುಸ್ಲಿಂ ಸಹೋದರರಿಗೆ ಹಸುಗಳನ್ನು ಬಲಿ ನೀಡುವುದನ್ನು ತಪ್ಪಿಸಬೇಕೆಂದು ಮನವಿ ಮಾಡುತ್ತೇನೆ. ಹಸುವನ್ನು ಒಂದು ಧರ್ಮದಲ್ಲಿ ಗೌರವಿಸಲಾಗುತ್ತದೆ ಮತ್ತು ಪೂಜಿಸಲಾಗುತ್ತದೆ”. ಮುಸ್ಲಿಂ ಸಮುದಾಯದ ಸದಸ್ಯರು ಹಸು ಬದಲಿಗೆ ಆಡು ಮತ್ತು ಇತರ ಸಣ್ಣ ಪ್ರಾಣಿಗಳನ್ನು ಬಳಸಬಹುದು ಎಂದು ಅಲಿ ಹೇಳಿದರು.
ಈದ್ ಅಲ್-ಅಧಾ ಸಂದರ್ಭದಲ್ಲಿ ಹಸುಗಳನ್ನು ಬಲಿ ನೀಡಿದರೆ ಕಾನೂನಿನ ಪ್ರಕಾರ ಕ್ರಮ ಜರುಗಿಸಲಾಗುವುದು ಎಂದು ರಾಜ್ಯ ಗೃಹ ಸಚಿವರು ಸೂಚಿಸಿದರು. "ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಪೊಲೀಸರು ಹೆಚ್ಚು ಜಾಗರೂಕರಾಗಿದ್ದು, ಎಲ್ಲಾ ಸಾರಿಗೆ ವಾಹನಗಳನ್ನು ಪರಿಶೀಲಿಸುತ್ತಿದ್ದಾರೆ" ಎಂದು ಅವರು ಹೇಳಿದರು.
ಹೈದರಾಬಾದ್ನ ಅಪ್ರತಿಮ ಚಾರ್ಮಿನಾರ್ರನ್ನು ಉಲ್ಲೇಖಿಸಿದ ಮಹಮೂದ್ ಅಲಿ, ಈ ಸ್ಮಾರಕವು “ನಮ್ಮ ಪೂರ್ವಜರ ನಂಬಿಕೆಯನ್ನು” ಪ್ರತಿಬಿಂಬಿಸುತ್ತದೆ. ಚಾರ್ಮಿನಾರ್ನ ನಾಲ್ಕು ಸ್ತಂಭಗಳು ಹಿಂದೂ ಧರ್ಮ, ಇಸ್ಲಾಂ, ಸಿಖ್ ಧರ್ಮ ಮತ್ತು ಕ್ರಿಶ್ಚಿಯನ್ ಧರ್ಮ ಎಂಬ ನಾಲ್ಕು ಧರ್ಮಗಳನ್ನು ಪ್ರತಿನಿಧಿಸುತ್ತವೆ ಎಂದು ತಿಳಿಸಿದರು.
ಮೊಹಮ್ಮದ್ ಕುಲಿ ಕುತುಬ್ ಶಾಹಿ ಅವರಿಂದ ನಿರ್ಮಿಸಲ್ಪಟ್ಟ 'ಚಾರ್ಮಿನಾರ್' ಎಲ್ಲಾ ನಂಬಿಕೆಯ ಜನರನ್ನು ಒಟ್ಟಿಗೆ ಸೇರಿಸುವ ಪ್ರಯತ್ನವಾಗಿದೆ. ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರಿಗೆ ಇದೇ ರೀತಿಯ ನಂಬಿಕೆಗಳಿವೆ ಎಂದು ತೆಲಂಗಾಣ ಗೃಹ ಸಚಿವರು ತಿಳಿಸಿದ್ದಾರೆ.
"ಕುಲಿ ಕುತುಬ್ ಶಾಹಿಯ ನಂತರ, ಎಲ್ಲಾ ಜನರನ್ನು ಒಟ್ಟಿಗೆ ಇರಿಸುವ ನಾಯಕರು ಇದ್ದರೆ, ಅದು ನಮ್ಮ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್" ಎಂದು ಅಲಿ ಹೇಳಿದರು.
ಈದ್ ಅಲ್-ಅಧಾ(ಬಕ್ರಿದ್)ವನ್ನು ಆಗಸ್ಟ್ 11 ರಂದು ಆಚರಿಸಲಾಗುವುದು.