ಬೇಸಿಗೆ ಹಂಗಾಮಿನಲ್ಲಿ ಮಾವು ನಿರ್ವಹಣೆಗಾಗಿ ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರವತಿಯಿಂದ ರೈತರಿಗೆ ಕೆಲವು ಸಲಹೆಗಳನ್ನು ನೀಡಲಾಗಿದೆ.
ಜಿಲ್ಲೆಯಾದ್ಯಂತ ಹಣ್ಣಿನ ರಾಜ ಮಾವು ಸುಮಾರು 3000 ಹೆಕ್ಟರ್ ಹೆಚ್ಚಿನ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಜಿಲ್ಲೆಯಲ್ಲಿ 12ಕ್ಕೂ ಹೆಚ್ಚಿನ ಮಾವಿನ ತಳಿಗಳನ್ನು ಬೆಳೆಯಲಾಗುತ್ತಿದ್ದು, ಇದರಲ್ಲಿ ಬೆನೆಶಾನ್ ನಂತರ ಕೇಸರ ತಳಿ ತುಂಬಾ ಬೇಡಿಕೆ ಇರುವ ಪರಿಮಳವುಳ್ಳ ತಳಿಯಾಗಿದೆ. ಕೊಪ್ಪಳ ಕೇಸರ ಎಂದೇ ಖ್ಯಾತಿ ಹೊಂದಿದ ಈ ತಳಿಗೆ ರಾಜ್ಯದ ತುಂಬೆಲ್ಲಾ ಬೇಡಿಕೆ ಇದೆ.
ಈ ವರ್ಷ ಮಳೆ ಕಮ್ಮಿಯಿದ್ದರೂ, ಬೆಳಗಿನ ತೇವಾಂಶ ಹಾಗೂ ಆರ್ದ್ರತೆಯಿಂದಾಗಿ ಹೂವು ಮತ್ತು ಕಾಯಿ ಕಚ್ಚುವುದು ತುಂಬ ತಡವಾಗಿದೆ. ಈಗ ಶೇ. 70ಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಹೂವು ಮತ್ತು ಹೀಚುಗಳು ಕಾಣಸಿಕೊಂಡಿವೆ. ಈ ಹಂತದಲ್ಲಿ ಕೀಟ ಮತ್ತು ರೋಗಗಳ ಬಾಧೆ ಅಲ್ಲದೇ ಹೂವು ಉದುರುವಿಕೆ ಹೆಚ್ಚಿನ ಪ್ರಮಾಣದಲ್ಲಿ ಕಂಡುಬಂದಿರುವ ಹಿನ್ನೆಲೆಯಲ್ಲಿ ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಜ್ಞಾನಿಗಳು ಇತ್ತೀಚೆಗೆ ಕೆಲ ಮಾವಿನ ತೋಟಗಳಿಗೆ ಭೇಟಿ ನೀಡಿ, ಬೇಸಿಗೆ ಹಂಗಾಮಿನಲ್ಲಿ ನಿರ್ವಹಣಾ ಕ್ರಮಗಳ ಕುರಿತಾಗಿ ಈ ಸಲಹೆಗಳನ್ನು ನೀಡಿದ್ದಾರೆ.
ಇದನ್ನು ಓದಿ : ಕಡು ನೀಲಿ ಬಣ್ಣದಲ್ಲಿ ಕಂಗನಾ ರಣಾವತ್ : ಫೋಟೋಸ್ ವೈರಲ್
ನಿರ್ವಹಣಾ ಕ್ರಮಗಳು: ಪ್ರಸ್ತುತ ತಾಪಮಾನ ಹೆಚ್ಚಾಗುತ್ತಿರುವುದರಿಂದ ಬೆಳಿಗ್ಗೆ ಅಥವಾ ಸಾಯಂಕಾಲ ಹನಿ ನೀರಾವರಿ ಇದ್ದಲ್ಲಿ 3 ರಿಂದ 4 ಗಂಟೆ ನೀರು ಹರಿಸಬೇಕು. ಹರಿ ನೀರಾವರಿ ಇದ್ದಲ್ಲಿ 8 ರಿಂದ 10 ದಿನಗಳಿಗೊಮ್ಮೆ ಮಣ್ಣಿನ ವಿಧವನ್ನು ಆದರಿಸಿ ನೀರು ಹರಿಸಬೇಕು. ಗಿಡದ ಸುತ್ತಲೂ ಪಾತಿ ಮಾಡಿ ಸಸ್ಯಜನ್ಯ ಸಾವಯವ ಉಳಿಕೆಗಳನ್ನು ಹೊದಿಕೆ ಹಾಕಬೇಕು. ಹೂವಾಡುವ ಹಂತದಲ್ಲಿ ಜಾನುವಾರುಗಳು ಮತ್ತು ಯಂತ್ರಗಳ ಓಡಾಟ ಕಡಿಮೆ ಮಾಡಬೇಕು. ಇದರಿಂದಾಗಿ ಹೂವು ಕಾಯಿ ಉದುರುವುದನ್ನು ತಡೆಗಟ್ಟಬಹುದು. ಇರುವೆಗಳು ಹಾಗೂ ಗೆದ್ದಲುಗಳ ನಿಯಂತ್ರಣ ಮಾಡಬೇಕು. ಗಿಡದ ಬಡ್ಡೆಗೆ ನೆಲದಿಂದ ಮೇಲಕ್ಕೆ ಮೂರು ಅಡಿಯಷ್ಟು ಸುತ್ತಲೂ ಸಿ.ಓ.ಸಿ. ಪುಡಿ ಅಥವಾ ಬೋರ್ಡೋ ಪುಡಿ ಅಥವಾ ಸುಣ್ಣವನ್ನು ಲೇಪನ ಮಾಡಬೇಕು. ಹೂವು, ಕಾಯಿ 40:60 ಅನುಪಾತದಲ್ಲಿದ್ದರೇ ರೋಗ, ಕೀಟಗಳ ಹತೋಟಿ ಮತ್ತು ಪೋಷಕಾಂಶಗಳ ನಿರ್ವಹಣೆಗಾಗಿ ರೈತರು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಸಿಂಪರಣೆ ಮಾಡುವಾಗ ನೀರಿನ ಪ್ರಮಾಣ ಹೆಚ್ಚಾಗಿರಬೇಕು. ದೊಡ್ಡ ಗಿಡಗಳಿಗೆ 8 ರಿಂದ 10 ಲೀಟರ್ ದ್ರಾವಣ ಸಿಂಪಡಿಸಬೇಕು.
ಮಾವಿನ ಬೆಳೆಯಲ್ಲಿ ಕಂಡುಬರುವ ಪ್ರಮುಖ ಕೀಟಗಳು ಮತ್ತು ಕೀಟಗಳ ನಿಯಂತ್ರಣಕ್ಕೆ ರೈತರು ಅನುಸರಿಸಬೇಕಾದ ಕ್ರಮಗಳ ವಿವರ ಇಂತಿವೆ.
ಜಿಗಿಹುಳು: ತಂಪುವಾತಾವರಣ ಹಾಗೂ ಆಗಾಗ ಮೋಡ ಕವಿದ ವಾತಾವರಣದಿಂದಾಗಿ ಜಿಗಿಹುಳುವಿನ ಬಾಧೆ ಕಂಡು ಬಂದಿರುತ್ತದೆ. ಇದರ ನಿಯಂತ್ರಣಕ್ಕೆ ಉತ್ತಮ ಗಾಳಿ ಮತ್ತು ಬೆಳೆಕು ಆಡುವಂತೆ ಗಿಡಗಳ ನಿರ್ವಹಣೆ ಮಾಡಬೇಕು ಮತ್ತು ತಿಳಿಸಿದಂತೆ ಸಿಂಪರಣೆ ಕೈಗೊಳ್ಳಬೇಕು. ಬೇವಿನ ಎಣ್ಣೆ 10000 ಪಿ.ಪಿ.ಎಂ. 2 ಮಿಲಿ ಅಥವಾ ಇಮಿಡಾಕ್ಲೋಪ್ರಿಡ್ 17.8 ಇ.ಸಿ. 0.5 ಮಿಲಿ ಅಥವಾ ಲ್ಯಾಂಬ್ಡಾ ಸಿಯಾಲೋಥ್ರಿನ್ 5 ಇ.ಸಿ. ಅಥವಾ ಬಿಪ್ರೋಫೆಜಿನ್ 25 ಎಸ್.ಸಿ. 1 ಮಿಲಿ ಜೊತೆಗೆ ಅಸಿಫೇಟ್ 75 ಎಸ..ಪಿ. ಪುಡಿಯನ್ನು ಒಂದು ಗ್ರಾಂ. ಒಂದು ಲೀಟರಗೆ ಬೆರೆಸಿ ಸಿಂಪರಿಸಬೇಕು. ಹಳದಿ ಅಂಟುಕಾರ್ಡುಗಳನ್ನು ಅಳವಡಿಸಬೇಕು.
ಹಿಟ್ಟು ತಿಗಣೆ: ಈ ಕೀಟದ ಹತೋಟಿಗಾಗಿ ಇರುವೆಗಳನ್ನು ಇರದಂತೆ ನೋಡಿಕೊಳ್ಳಬೇಕು. ಎರಡನೇಯದಾಗಿ ಬೇವಿನ ಎಣ್ಣೆ ಜೊತೆಗೆ ಮೀನಿನೆಣ್ಣೆ 2 ಮಿಲಿ ಅಥವಾ ರಾಸಾಯನಿಕಗಳಾದ ಕ್ಲೋರೋಪೈರಿಫಾಸ್ 20 ಇ.ಸಿ. 2 ಮಿಲಿ ಒಂದು ಲೀಟರ ನೀರಿಗೆ ಬೆರೆಸಿ ಜೊತೆಗೆ ಶ್ಯಾಂಪೂ ಮಿಶ್ರ ಮಾಡಿ ಸಿಂಪರಿಸಬೇಕು.
ಗೂಡು ಕಟ್ಟುವ ಕೀಡೆ ಅಥವಾ ಬಾರುಹುಳು: ಕಂಡುಬಂದಲ್ಲಿ ಇಮ್ಯಾಮೆಕ್ಟಿನ್ ಬೆಂಜೋಯೇಟ್ 5 ಎಸ್.ಜಿ. 0.4 ಮಿಲಿ ಅಥವಾ ಕ್ವಿನಾಲಫಾಸ್ 25 ಇ.ಸಿ. 2 ಮಿಲಿ 1 ಲೀಟರ ನೀರಿಗೆ ಬೆರೆಸಿ ಸಿಂಪರಿಸಬೇಕು.
ಮುಂದೆ ಬರಬಹುದಾದ ಹಣ್ಣಿನ ನೊಣ ಕೀಟದ ಹತೋಟಿಗಾಗಿ ಈಗಲೇ ಎಕರೆಗೆ 6-10 ರಂತೆ ಮೋಹಕ ಬಲೆಗಳನ್ನು ಅಳವಡಿಸಬೇಕು. ತೋಟದಲ್ಲಿ ಅಲ್ಲಲ್ಲಿ ಎಕರೆಗೆ 1 ರಂತೆ ದೀಪಾಕರ್ಷಕ ಬಲೆಗಳನ್ನು ಅಳವಡಿಸಬೇಕು.
ಪ್ರಮುಖ ರೋಗಗಳು: ಮಾವಿನ ಬೆಳೆಯಲ್ಲಿ ಕಂಡುಬರುವ ಪ್ರಮುಖ ರೋಗವಾದ `ಬೂದಿ ರೋಗ’ದ ನಿಯಂತ್ರಣಕ್ಕಾಗಿ ಹುಳಿಮಜ್ಜಿಗೆ ಅಥವಾ ಅಡುಗೆ ಸೋಡಾ 2-3 ಗ್ರಾಂ. ಅಥವಾ ಹೆಕ್ಸಾಕೋನಾಜೋಲ್ 5% ಎಸ್.ಸಿ. 1 ಮಿಲಿ ಅಥವಾ ಸಿಸ್ಥೇನ್ 20% ಇ.ಡಬ್ಲ್ಯೂ ಪುಡಿ 2 ಗ್ರಾಂ. 1 ಲೀಟರ ನೀರಿಗೆ ಬೆರೆಸಿ ಸಿಂಪರಿಸಬೇಕು.
ಇನ್ನೊಂದು ಪ್ರಮುಖ ರೋಗವಾದ `ಚಿಬ್ಬುರೋಗ’ದ ಹತೋಟಿಗೆ ಕಾರ್ಬನ್ಡೇಜಿಮ್ 50 ಡಬ್ಲ್ಯೂ.ಪಿ 1 ಗ್ರಾಂ. ಅಥವಾ ಥಯೋಫಿನೈಟ್ ಮಿಥೈಲ್ 70 ಡಬ್ಲೂ.ಪಿ 1 ಗ್ರಾಂ. ಅಥವಾ ಫಾಲಿಕ್ಯೂರ್ 250 ಇ.ಸಿ. 1 ಮಿಲಿ 1 ಲೀಟರ ನೀರಿಗೆ ಸಿಂಪರಿಸಬೇಕು.
ಸೂಚನೆ: ಹೂವು ಜಾಸ್ತಿ ಇದ್ದಾಗ ಸಿಂಪರಣೆ ಮಾಡಬಾರದು ಮತ್ತು ಅತೀ ಮುಖ್ಯವಾಗಿ ಗಂಧಕ ಮತ್ತು ಗಂಧಕಯುಕ್ತ ಪದಾರ್ಥಗಳನ್ನು ಸಿಂಪಡಿಸಬಾರದು. ಮಾವು ಅತ್ಯಂತ ಉಪಕಾರಿ ಬಹುವಾರ್ಷಿಕ ಹಣ್ಣಿನ ಬೆಳೆಯಾಗಿದ್ದು, ಅನೇಕ ಪರಭಕ್ಷಕ ಕೀಟಗಳು ಹಾಗೂ ಜೇನು ನೊಣದಂತಹ ಉಪಕಾರಿ ಕೀಟಗಳಿಗೆ ಆಶ್ರಯ ನೀಡುತ್ತದಾದ್ದರಿಂದ ಅನಾವಶ್ಯಕವಾಗಿ ಮತ್ತು ಹಾನಿಕಾರಕ ರಾಸಾಯನಿಕಗಳ ಸಿಂಪರಣೆ ಮಾಡಬಾರದು.
ಉತ್ತಮ ಪೋಷಣೆಗಾಗಿ ಮಾವು ಸ್ಪೇಷಲ್, ಜೀವಾಮೃತ, ಗೋಕೃಪಾಮೃತ ಅಲ್ಲದೇ ದ್ರವರೂಪದ ಗೊಬ್ಬರಗಳನ್ನು 15 ದಿನಗಳಿಗೊಮ್ಮೆ ಅಗತ್ಯವಿದ್ದಲ್ಲಿ ಸೂಕ್ತ ಪೀಡೆನಾಶಕಗಳೊಂದಿಗೆ ಬೆರೆಸಿ ಸಿಂಪರಿಸಬೇಕು ಅಥವಾ ಹನಿ ನೀರಾವರಿ ಮೂಲಕ ವಾರಕ್ಕೊಮ್ಮೆ ನೀಡಬೇಕು. ಮಾವು ಸ್ಪೆಷಲ್ ಕೇವಲ ಸಿಂಪರಣೆಗಾಗಿ ಉಪಯೋಗಿಸಬಹುದು.
ಹೆಚ್ಚಿನ ಮಾಹಿತಿಗಾಗಿ ವಿಸ್ತರಣಾ ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಮುಂದಾಳುಗಳಾದ ಡಾ ಎಂ.ವಿ.ರವಿ., (ಮೊ.ಸಂಖ್ಯೆ 9480247745) ಹಾಗೂ ಸಹಾಯಕ ಪ್ರಾಧ್ಯಾಪಕರಾದ ವಾಮನಮೂರ್ತಿ (ಮೊ.ಸಂಖ್ಯೆ 9482672039) ಇವರನ್ನು ಸಂಪರ್ಕಿಸಬಹುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.