ಪಶ್ಚಿಮ ಬಂಗಾಳದಲ್ಲಿ ಮತ್ತೊಬ್ಬ ಬಿಜೆಪಿ ಕಾರ್ಯಕರ್ತನಿಗೆ ಗುಂಡಿಕ್ಕಿ ಹತ್ಯೆ

ಪಶ್ಚಿಮ ಬಂಗಾಳದಲ್ಲಿ ನಡೆದ ಹಿಂಸಾಚಾರದ ಮತ್ತೊಂದು ಘಟನೆಯಲ್ಲಿ, 55 ವರ್ಷದ ಸ್ಥಳೀಯ ಬಿಜೆಪಿ ನಾಯಕನನ್ನು ರಾಜ್ಯದ ನಾಡಿಯಾ ಜಿಲ್ಲೆಯಲ್ಲಿ ಇಬ್ಬರು ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆಗೈದಿದ್ದಾರೆ.

Last Updated : Oct 13, 2019, 11:35 AM IST
ಪಶ್ಚಿಮ ಬಂಗಾಳದಲ್ಲಿ ಮತ್ತೊಬ್ಬ ಬಿಜೆಪಿ ಕಾರ್ಯಕರ್ತನಿಗೆ ಗುಂಡಿಕ್ಕಿ ಹತ್ಯೆ title=
Representational image (Courtesy: Pixabay)

ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ನಡೆದ ಹಿಂಸಾಚಾರದ ಮತ್ತೊಂದು ಘಟನೆಯಲ್ಲಿ, 55 ವರ್ಷದ ಸ್ಥಳೀಯ ಬಿಜೆಪಿ ನಾಯಕನನ್ನು ರಾಜ್ಯದ ನಾಡಿಯಾ ಜಿಲ್ಲೆಯಲ್ಲಿ ಇಬ್ಬರು ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆಗೈದಿದ್ದಾರೆ.

ಶುಕ್ರವಾರ ರಾತ್ರಿ ಈ ಘಟನೆ ನಡೆದಿದ್ದು, ಕಿರಾಣಿ ಅಂಗಡಿಯೊಂದನ್ನು ನಡೆಸುತ್ತಿದ್ದ ಬಿಜೆಪಿ ಮುಖಂಡ ಹರಾಲಾ ದೇಬ್ನಾಥ್ ಅವರು ಕೆಲಸ ಮುಗಿಸಿ ತಮ್ಮ ಅಂಗಡಿಯಿಂದ ಹೊರಬಂದು, ಅಂಗಡಿಯನ್ನು ಮುಚ್ಚುತ್ತಿದ್ದಾಗ ಇಬ್ಬರು ವ್ಯಕ್ತಿಗಳು ಏನೋ ಖರೀದಿಸುವವರಂತೆ ಬಂದು ಅವರಿಗೆ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ.

"ದೇಬ್ನಾಥ್ ಅವರಿಗೆ ತಿಂಡಿ ಪ್ಯಾಕೆಟ್ ನೀಡಿ ಹೊರಗೆ ಬಂದ ಕೂಡಲೇ ಇಬ್ಬರು ರಿವಾಲ್ವರ್ ಎಳೆದು ಗುಂಡು ಹಾರಿಸಿದರು. ಈ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್ ಭಾಗಿಯಾಗಿದೆ ಎಂದು ನನಗೆ ಅನುಮಾನವಿದೆ" ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಮನೋಬೇಂದ್ರ ರಾಯ್ ಸುದ್ದಿಸಂಸ್ಥೆ ಎಎನ್‌ಐಗೆ ತಿಳಿಸಿದರು.

ಘಟನೆ ಬಳಿಕ ಸ್ಥಳೀಯರು ತಕ್ಷಣ ದೇಬ್ನಾಥ್ ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಿದರು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ.

"ದುಷ್ಕರ್ಮಿಗಳು ಯಾವುದೇ ಭಯವಿಲ್ಲದೆ ಜನರನ್ನು ಕೊಲ್ಲುತ್ತಿದ್ದಾರೆ. ಈ ವಿಷಯದಲ್ಲಿ ಸರ್ಕಾರ ಏನನ್ನೂ ಮಾಡುತ್ತಿಲ್ಲ" ಎಂದು ದೇಬ್ನಾಥ್ ಅವರ ನೆರೆಹೊರೆಯ ಪ್ರದೀಪ್ ರಾಯ್ ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಅಪರಾಧಿಗಳ ಪತ್ತೆ ಮತ್ತು ಅಪರಾಧದ ಉದ್ದೇಶದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಶನಿವಾರ, ಬಿಜೆಪಿಯ ಪಶ್ಚಿಮ ಬಂಗಾಳ ಘಟಕ ಪ್ರತಿಭಟನೆ ನಡೆಸಿ, ರಾಜ್ಯದಲ್ಲಿ ಪಕ್ಷದ ಕಾರ್ಯಕರ್ತರ ಹತ್ಯೆಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸರನ್ನು ಒತ್ತಾಯಿಸಿದರು. ಇಂತಹ ಕೊಲೆ ವಿಷಯದಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಆರೋಪಿಗಳನ್ನು ಬಂಧಿಸಬೇಕು ಎಂದು ಅವರು ಪೊಲೀಸರನ್ನು ಒತ್ತಾಯಿಸಿದರು.

ಕಳೆದ 81 ದಿನಗಳಲ್ಲಿ ತನ್ನ ಪಕ್ಷದ ಎಂಟು ಸದಸ್ಯರು ಸಾವನ್ನಪ್ಪಿದ್ದಾರೆ ಎಂದು ಬಿಜೆಪಿ ಹೇಳಿಕೊಂಡಿದೆ.

Trending News