ನವದೆಹಲಿ: ಜಮ್ಮು ಮತ್ತು ಪಂಜಾಬ್ ಪ್ರದೇಶದ ರಕ್ಷಣಾ ನೆಲೆಗಳನ್ನು ಕಿತ್ತಳೆ ಎಚ್ಚರಿಕೆ(ಆರೆಂಜ್ ಅಲರ್ಟ್)ಗೆ ಒಳಪಡಿಸಲಾಗಿದೆ. ಇತ್ತೀಚಿಗೆ ಲಭ್ಯವಾದ ಗುಪ್ತಚರ ಮಾಹಿತಿಯ ಪ್ರಕಾರ, ಈ ಪ್ರದೇಶದ ಕೆಲವು ರಕ್ಷಣಾ ನೆಲೆಗಳನ್ನು ಗುರಿಯಾಗಿಸಲು ಭಯೋತ್ಪಾದಕರ ಗುಂಪು ಯೋಜಿಸುತ್ತಿದೆ ಎಂದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ "ಪಂಜಾಬ್ ಮತ್ತು ಜಮ್ಮು ಮತ್ತು ಸುತ್ತಮುತ್ತಲಿನ ರಕ್ಷಣಾ ನೆಲೆಗಳು ಹೆಚ್ಚಿನ ಎಚ್ಚರಿಕೆ ವಹಿಸಿವೆ. ಭಾರತೀಯ ವಾಯುಪಡೆಯು ಪಂಜಾಬ್ ಮತ್ತು ಜಮ್ಮು ಸೇರಿದಂತೆ ತನ್ನ ವಾಯುನೆಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಿದೆ" ಎಂದು ಸರ್ಕಾರಿ ಮೂಲಗಳು ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿವೆ.
ಬುಧವಾರ ಬೆಳಿಗ್ಗೆ ಭದ್ರತಾ ಪಡೆಗಳಿಗೆ ಈ ಬಗ್ಗೆ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ರಕ್ಷಣಾ ನೆಲೆಗಳಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಲಾಗಿದೆ ಎಂದು ಅವರು ಹೇಳಿದರು. ಇದಕ್ಕೆ ಪುಷ್ಟಿ ನೀಡಿರುವ ಸರ್ಕಾರದ ಮೂಲಗಳು "ಬುಧವಾರ ಈ ಬಗ್ಗೆ ರಕ್ಷಣಾ ಪಡೆಗಳು ಮಾಹಿತಿ ಸ್ವೀಕರಿಸಿವೆ. ನಂತರ ಅವರು ರಕ್ಷಣಾ ನೆಲೆಗಳನ್ನು ರಕ್ಷಿಸಲು ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿದ್ದಾರೆ" ಎಂದು ತಿಳಿಸಿವೆ.
ಈ ಹಿಂದೆಯೂ ಈ ಭಾಗದ ಭದ್ರತಾ ನೆಲೆಗಳಲ್ಲಿ ಅಲರ್ಟ್ ನೀಡಲಾಗಿತ್ತು. ಆದರೆ ಒಂದೆರಡು ದಿನಗಳ ಬಳಿಕ ಸಡಿಲಗೊಳಿಸಲಾಗಿತ್ತು. ವಾಸ್ತವವಾಗಿ ಆಗಸ್ಟ್ 05 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ 370 ನೇ ವಿಧಿಯನ್ನು ರದ್ದುಗೊಳಿಸಿತು. ಅದಾದ ಬಳಿಕ ಜಮ್ಮು ಮತ್ತು ಕಾಶ್ಮೀರ ಮತ್ತು ಪಂಜಾಬ್ನಲ್ಲಿನ ರಕ್ಷಣಾ ನೆಲೆಗಳ ಮೇಲೆ ದಾಳಿ ನಡೆಸಲು ಭಯೋತ್ಪಾದಕರು ನಿರಂತರವಾಗಿ ಸಂಚು ರೂಪಿಸುತ್ತಿದ್ದಾರೆ.
ಸೆಪ್ಟೆಂಬರ್ 2019 ರಲ್ಲಿ, ಗುಪ್ತಚರ ಸಂಸ್ಥೆಗಳು ಎಂಟರಿಂದ ಹತ್ತು ಜೈಶ್-ಎ-ಮೊಹಮ್ಮದ್ (ಜೆಎಂ) ಭಯೋತ್ಪಾದಕರ ಮಾಡ್ಯೂಲ್ ಭಾರತಕ್ಕೆ ನುಸುಳಿದೆ ಮತ್ತು ರಕ್ಷಣಾ ನೆಲೆಗಳ ಮೇಲೆ ಭಯೋತ್ಪಾದಕ ದಾಳಿ ನಡೆಸಲು ಯೋಜಿಸುತ್ತಿದೆ ಎಂದು ಎಚ್ಚರಿಕೆ ನೀಡಿತ್ತು. ಜಮ್ಮು ಮತ್ತು ಕಾಶ್ಮೀರ ಮತ್ತು ಸುತ್ತಮುತ್ತಲಿನ ವಾಯುಪಡೆಯ ನೆಲೆಗಳ ವಿರುದ್ಧ ಜೆಎಂ ಭಯೋತ್ಪಾದಕರು ಆತ್ಮಾಹುತಿ ದಾಳಿ ನಡೆಸಲು ಯೋಜಿಸುತ್ತಿದ್ದಾರೆ ಎಂದು ಮಾಹಿತಿಯಿಂದ ಗೊತ್ತಾಗಿದೆ.