ನವದೆಹಲಿ: ಇನ್ಮುಂದೆ ವಿದ್ಯುತ್ ಬಿಲ್ ಅಥವಾ ಮೊಬೈಲ್ ಬಿಲ್ ತಡವಾಗಿ ಪಾವತಿಸುವುದು ಅಥವಾ ಪಾವತಿಸುವಡೆ ಇರುವುದು ನಿಮಗೆ ಭಾರಿಯಾಗಿ ಪರಿಣಮಿಸಲಿದೆ. ಹೌದು ಇನ್ಮುಂದೆ ಬ್ಯಾಂಕ್ ಗಳು ನಿಮಗೆ ಸಾಲ ನೀಡುವಾಗ ನಿಮ್ಮ ಈ ವಿಷಯಗಳ ಕುರಿತು ಕೂಡ ಗಮನ ಹರಿಸಲಿವೆ. ನಿತ್ಯ ಜೀವನಕ್ಕೆ ಸಂಬಂಧಿಸಿದಂತೆ ಅವಶ್ಯಕವಾಗಿರುವ ಎಲ್ಲ ಬಿಲ್ಲಗಳ ಪಾವತಿಗಳ ಟ್ರ್ಯಾಕ್ ರಿಕಾರ್ಡ್ ಕೂಡ ಇದೀಗ ಬ್ಯಾಂಕ್ ಗಳು ಪರಿಶೀಲಿಸಲಿವೆ. ಇದರ ಜೊತೆಗೆ ನಿಮ್ಮ ವಿಮಾ ಪ್ರೀಮಿಯಂ ಪಾವತಿ, ನಿಮ್ಮ ಹೂಡಿಕೆ ಇತ್ಯಾದಿಗಳನ್ನೂ ಸಹ ಸಾಲ ನೀಡುವಾಗ ಬ್ಯಾಂಕ್ ಗಳು ಪರಿಶೀಲಿಸಲಿವೆ. ಇದರ ಜೊತೆಗೆ ನಿಮ್ಮ ಸಾಮಾಜಿಕ ಜಾನತಾಣಗಳ ಪ್ರೊಫೈಲ್ ಕೂಡ ಬ್ಯಾಂಕ್ ಗಳು ಪರಿಗಣನೆಗೆ ತೆಗೆದುಕೊಳ್ಳಲಿವೆ.
ಬ್ಯಾಂಕ್ ಕ್ರೆಡಿಟ್ ಸ್ಕೋರ್ ಮೂಲಕ ನಿಮ್ಮ ಹಳೆ ಬ್ಯಾಂಕಿಂಗ್ ವ್ಯವಹಾರಗಳ ಮಾಹಿತಿ ಸಿಗಬಹುದು. ಆದರೆ, ಗ್ರಾಹಕರ ಪ್ರವೃತ್ತಿ ಅರಿಯಲು ಗ್ರಾಹಕರ ಇತರೆ ಪೇಮೆಂಟ್ ಗಳ ಮಾಹಿತಿ ಕೂಡ ಇದೀಗ ಟ್ರ್ಯಾಕ್ ಮಾಡಲಾಗುವುದು. ಸಾಲ ನೀಡುವುದಕ್ಕೂ ಮುನ್ನ ಬ್ಯಾಂಕ್ ಗಳು ನಿಮ್ಮ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕಲು ಮುಂದಾಗಿವೆ. ಇದರಿಂದ ಬ್ಯಾಂಕ್ ಎಷ್ಟು ಪ್ರಮಾಣದಲ್ಲಿ ರಿಸ್ಕ್ ತೆಗೆದುಕೊಳ್ಳಬಹುದು ಎಂಬುದನ್ನು ಅಂದಾಜಿಸಲಾಗುವುದು.
ಈ ಟ್ರ್ಯಾಕಿಂಗ್ ಗೆ ಕಾರಣ ಏನು?
ಕ್ರೆಡಿಟ್ ಸ್ಕೋರ್ ಮೂಲಕ ಕೇವಲ ನಿಮ್ಮ ಹಳೆ ಸಾಲದ ಕುರಿತು ಮಾಹಿತಿ ಸಿಗಲಿದೆ. ಆದರೆ, ನಿಮ್ಮ ನಿತ್ಯ ವ್ಯವಹಾರದ ಪ್ರವೃತ್ತಿ ಇದರಿಂದ ತಿಳಿದುಬರುವುದಿಲ್ಲ. ಇಂತಹ ಸಂದರ್ಭಗಳಲ್ಲಿ ಬ್ಯಾಂಕ್ ಫಿನ್ ಟೆಕ್ ಕಂಪನಿಗಳ ಸಹಾಯ ಪಡೆದು ವಿದ್ಯುತ್ ಬಿಲ್ ಹಾಗೂ ಇತರೆ ವ್ಯವಹಾರಗಳ ಮಾಹಿತಿ ಕಲೆ ಹಾಕುತ್ತವೆ. ಅಷ್ಟೇ ಅಲ್ಲ ಇನ್ಸುರೆನ್ಸ್ ಪ್ರಿಮಿಯಂ, ಮ್ಯೂಚುವಲ್ ಫಂಡ್ ಇತ್ಯಾದಿಗಳ ಮಾಹಿತಿ ಕೂಡ ಸಿಗಲಿದೆ.
ನಿಮ್ಮ ಸಾಮಾಜಿಕ ಮಾಧ್ಯಮದ ಮಾಹಿತಿ ಯಾಕೆ?
ಫೇಸ್ ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಾಮ್ ಗಳೂ ಕೂಡ ಇಂದಿನ ದಿನಗಳಲ್ಲಿ ಭಾರಿ ಮಹತ್ವ ಪಡೆದುಕೊಳ್ಳುತ್ತಿವೆ. ಇವುಗಳಿಂದ ನೀವು ವಾರ್ಷಿಕವಾಗಿ ಕಾರ್, ಮನೆ, ಪ್ರವಾಸ ಇತ್ಯಾದಿಗಳ ಮೇಲೆ ಎಷ್ಟು ಹಣ ವ್ಯಯಿಸುತ್ತೀರಿ ಎಂಬುದರ ಅಂದಾಜು ಪಡೆಯಲು ಬ್ಯಾಂಕ್ ಗಳು ನಿಮ್ಮ ಖಾತೆಗಳ ಪ್ರೊಫೈಲ್ ಮಾಹಿತಿ ಕಲೆಹಾಕಲಿವೆ. ಈ ಎಲ್ಲ ಸಂಗತಿಗಳನ್ನು ಗಮನಿಸಿ ನಿಮ್ಮ ನೂತನ ಕ್ರೆಡಿಟ್ ಸ್ಕೋರ್ ಸಿದ್ಧಪಡಿಸಿ ಬಳಿಕ ಬ್ಯಾಂಕ್ ಗಳು ನಿಮಗೆ ಸಾಲ ನೀಡುವ ಕುರಿತು ನಿರ್ಧಾರ ಕೈಗೊಳ್ಳಲಿವೆ.