ಬೆಂಗಳೂರು: ಕೊಡಗಿನ ವಿರಾಜ್ಪೇಟೆಯಲ್ಲಿರುವ ನಟಿ ರಷ್ಮಿಕಾ ಮಂದಣ್ಣ ಅವರ ನಿವಾಸದಲ್ಲಿ ತೆರಿಗೆ ವಂಚನೆ ಆರೋಪದ ಮೇಲೆ ಅವರನ್ನು ಪ್ರಸ್ತುತ ಆದಾಯ ತೆರಿಗೆ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
ಜನವರಿ 16 ರ ಗುರುವಾರ ಬೆಳಿಗ್ಗೆ 10 ಅಧಿಕಾರಿಗಳು ದಾಳಿ ನಡೆಸಿದ ನಂತರ ನಟಿ ಚೆನ್ನೈನಿಂದ ನಿನ್ನೆ ರಾತ್ರಿ 9.30 ಕ್ಕೆ ನಿವಾಸಕ್ಕೆ ಮರಳಿದರು. ವಿಚಾರಣೆ ನಡೆಯುತ್ತಿರುವ, ಸಂದರ್ಭದಲ್ಲೇ ಆಕೆಯ ಸಂಭಾವನೆ ಕುರಿತು ಹಲವಾರು ವದಂತಿಗಳಿವೆ. ಕಿರಿಕ್ ಪಾರ್ಟಿಯೊಂದಿಗೆ ವೃತ್ತಿಜೀವನವನ್ನು ಪ್ರಾರಂಭಿಸಿದ ರಶ್ಮಿಕಾ ಮಂದಣ್ಣ, ತನ್ನ ಚೊಚ್ಚಲ ಚಿತ್ರಕ್ಕೆ ಸಂಭಾವನೆಯಾಗಿ ಅಲ್ಪ ಮೊತ್ತವನ್ನು ಪಡೆದಿದ್ದರು.
ಮೂಲಗಳ ಪ್ರಕಾರ ರಶ್ಮಿಕಾ ಮಂದಣ್ಣ ರಕ್ಷಿತ್ ಶೆಟ್ಟಿ ಕಿರಿಕ್ ಪಾರ್ಟಿ ಸಿನಿಮಾಗೆ ಪಡೆದದ್ದು ಅಲ್ಪ ಮೊತ್ತವಂತೆ, ಮುಂದಿನ ಅವರ ಅಂಜನಿಪುತ್ರ, ಹಾಗೂ ಚಮಕ್ ಚಿತ್ರದಲ್ಲಿಯೂ ಕೂಡ ಅವರಿಗೆ ಹೆಚ್ಚಿನ ಸಂಭಾವನೆ ಸಿಕ್ಕಿಲ್ಲ ಎನ್ನಲಾಗಿದೆ.ಆದರೆ ಅವರು ಯಾವಾಗ ತೆಲುಗು ಸಿನಿಮಾಗೆ ಪ್ರವೇಶಿಸಿದರೂ ಆಗ ಅವರ ಸಂಭಾವನೆ ಲೆಕ್ಕಾಚಾರ ಏಕಾಏಕಿ ಬದಲಾಯಿತು ಎನ್ನಲಾಗಿದೆ.ಅದರಲ್ಲೂ ವಿಜಯ್ ದೇವರಕೊಂಡ್ ಜೊತೆಗಿನ ಗೀತ ಗೋವಿಂದಂ ನಂತರ ಅವರ ಲಕ್ ಬದಲಾಯಿತು ಎನ್ನಬಹುದು. ತದನಂತರ ಅವರು ಪ್ರತಿ ಸಿನಿಮಾಗೆ 50 ಲಕ್ಷ ರೂ ಸಂಭಾವನೆಯನ್ನು ಪಡೆಯಲು ಆರಂಭಿಸಿದರು ಎನ್ನಲಾಗಿದೆ. ಕನ್ನಡದ ಪೊಗರು ಸಿನಿಮಾಗೆ ಅವರು ಪಡೆದಿರುವ ಸಂಭಾವನೆ ಬರೋಬ್ಬರಿ 65 ಲಕ್ಷ ರೂ,ಎನ್ನಲಾಗಿದೆ.
ಅಲ್ಪಾವಧಿಯಲ್ಲಿಯೇ, ರಶ್ಮಿಕಾ ಮಂದಣ್ಣ ದಕ್ಷಿಣ ಭಾರತದಾದ್ಯಂತ ಜನಪ್ರಿಯತೆಯನ್ನು ಗಳಿಸಿದರು. ಅವರ ಜನಪ್ರಿಯತೆ ಎಷ್ಟರ ಮಟ್ಟಿಗೆ ಏರಿತೆಂದರೆ ಅನೇಕ ಕನ್ನಡ ನಿರ್ಮಾಪಕರಿಗೆ ನಿಭಾಯಿಸಲಾಗದ ನಟಿ ಎನ್ನುವಂತೆ ಆಯಿತು ಎನ್ನಲಾಗಿದೆ.ಇನ್ನು ಇತ್ತೀಚಿಗೆ ಮಹೇಶ್ ಬಾಬು ಅವರ ಸರಿಲೆರು ನೀಕೆವ್ವರು ಸಿನಿಮಾಗೆ ಅವರು ಸಂಭಾವನೆ ರೂಪದಲ್ಲಿ 1 ಕೋಟಿ ರೂ.ಪಡೆದಿದ್ದಾರೆ ಎನ್ನುತ್ತಿವೆ ಸಿನಿಮಾ ಮೂಲಗಳು.
ಇತ್ತೀಚಿಗಿನ ವದಂತಿಗಳ ಪ್ರಕಾರ ಅವರು ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯ ಸ್ಥಾನಮಾನವನ್ನು ರಶ್ಮಿಕಾ ಮಂದಣ್ಣ ಹೊಂದಿದ್ದಾರೆ ಎನ್ನುವ ಮಾತುಗಳು ಕೂಡ ಕೇಳಿ ಬರುತ್ತಿವೆ. ಆದರೆ ಒಂದೆರಡು ದಿನಗಳ ಹಿಂದೆ ಅವರು ಈ ವರದಿಗಳನ್ನು ನಿರಾಕರಿಸಿದರು. "ನಾನು ಹೆಚ್ಚು ಸಂಭಾವನೆ ಪಡೆಯುವ ನಟಿ ಅಲ್ಲ. ನಾನು ಚಿತ್ರರಂಗದಲ್ಲಿ ಮಗುವಿನ ಹೆಜ್ಜೆಗಳನ್ನು ಇಡುತ್ತಿದ್ದೇನೆ. ಎಲ್ಲವನ್ನೂ ಮತ್ತು ಎಲ್ಲರನ್ನು ತಿಳಿದುಕೊಳ್ಳಲು ನಾನು ಚಿತ್ರರಂಗದಲ್ಲಿ ಕೆಲಸ ಮಾಡುತ್ತಿಲ್ಲ" ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿದರು.
ಆದರೆ ಈಗ ಅವರ ಚೆಕ್ಗಳಲ್ಲಿನ ವೇತನ ಆದಾಯ ತೆರಿಗೆ ಇಲಾಖೆಯ ಗಮನ ಸೆಳೆದಿದೆ ಎನ್ನಲಾಗಿದೆ.