ನವದೆಹಲಿ:ಕೊರೊನಾ ವೈರಸ್ ಪ್ರಕೋಪ ಹಾಗೂ ಲಾಕ್‌ಡೌನ್ ಹಿನ್ನೆಲೆ ಉದ್ಯಮ ಕ್ಷೇತ್ರಕ್ಕೆ ಭಾರಿ ನಷ್ಟ ಉಂಟಾಗುತ್ತಿದೆ. ಕಂಪನಿಗಳು ತಮ್ಮ ನೌಕರರ ವೇತನವನ್ನು ಕಡಿತಗೊಳಿಸುತ್ತಿವೆ. ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಮಕ್ಕಳ ಶುಲ್ಕವನ್ನು ಹೆಚ್ಚಿಸಬಾರದು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಖಾಸಗಿ ಶಾಲೆಗಳಿಗೆ ಮನವಿ ಮಾಡಿವೆ. ಇವೆಲ್ಲವುಗಳ ನಡುವೆ ದೇಶದ ಸರ್ವೋಚ್ಛ ನ್ಯಾಯಾಲಯ ಕಾಲೇಜು ವಿದ್ಯಾರ್ಥಿಗಳಿಗೆ ಆಘಾತವೊಂದನ್ನು ನೀಡಿದೆ.
ಹೌದು, ಖಾಸಗಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯ್ತಿ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಕಾಲೇಜುಗಳಿಗೆ ಒಂದು ವೇಳೆ ವಿದ್ಯಾರ್ಥಿಗಳಿಂದ ಶುಲ್ಕ ಬಾರದೆ ಹೋದಲ್ಲಿ ಕಾಲೇಜುಗಳು ಹೇಗೆ ನಡೆಯಲು ಸಾಧ್ಯ ಎಂದು ಸುಪ್ರೀಂ ಪ್ರಶ್ನಿಸಿದೆ. ಅಷ್ಟೇ ಅಲ್ಲ ಕಾಲೇಜು ಆಡಳಿತಗಳು ತಮ್ಮ ಸಿಬ್ಬಂದಿಗಳಿಗೆ ವೇತನ ಹೇಗೆ ಪಾವತಿಸಲಿವೆ ಎಂದು ಕೇಳಿದೆ.
ಈ ವೇಳೆ ತಮ್ಮ ವಾದ ಮಂಡಿಸಿರುವ ಅರ್ಜಿದಾರರ ಪರವಕೀಲರು, ವಿದ್ಯಾರ್ಥಿಗಳು ಹಾಗೂ ಕಾಲೇಜು ಆಡಳಿತಗಳ ನಡುವೆ ಸಮತೋಲನ ಕಾಯ್ದುಕೊಳ್ಳುವ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ. ಇದಕ್ಕೂ ಕೂಡ ತನ್ನ ಸಮ್ಮತಿ ಸೂಚಿಸದ ಸುಪ್ರೀಂ ಕೋರ್ಟ್, ಸಂಬಂಧಪಟ್ಟ ವಿಶ್ವವಿದ್ಯಾಲಯಗಳಲ್ಲೇ ಈ ಕುರಿತು ಚರ್ಚಿಸಿ ಎಂದು ಸಲಹೆ ನೀಡಿದೆ.
ಲಾಕ್ ಡೌನ್ ಕಾಲಾವಧಿಯಲ್ಲಿ ಅನೇಕ ವಿದ್ಯಾರ್ಥಿಗಳ ಪೋಷಕರು ತಮ್ಮ ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ, ಖಾಸಗಿ ಕಾಲೇಜುಗಳಲ್ಲಿ ಓದುತ್ತಿರುವ ಮಕ್ಕಳ ಭಾರಿ ಶುಲ್ಕವನ್ನು ಪಾವತಿಸಲು ಪೋಷಕರಿಗೆ ಸಾಧ್ಯವಾಗುವುದಿಲ್ಲ. ಹೀಗಾಗಿ ಶುಲ್ಕದಿಂದ ವಿನಾಯಿತಿ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದ್ದು, ನ್ಯಾಯಪೀಠ ಮನವಿಯನ್ನು ತಳ್ಳಿಹಾಕಿದೆ.