ಶಿವಮೊಗ್ಗ: ರಾಜ್ಯದಲ್ಲಿ 21 ಡಿಸಿಸಿ ಬ್ಯಾಂಕ್ ಇದ್ದು, ಪ್ರತಿ ಬ್ಯಾಂಕಿನ ಪ್ರಗತಿ ಪರಿಶೀಲನೆ ಮಾಡುತ್ತಿದ್ದೇವೆ. ಶಿವಮೊಗ್ಗ ಡಿಸಿಸಿ ಬ್ಯಾಂಕ್ ರಿವ್ಯೂ ಮಾಡಬೇಕಾದರೆ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿರುವುದು ಮೇಲ್ನೋಟಕ್ಕೆ ಬೆಳಕಿಗೆ ಬಂದಿತ್ತು. ಕೂಡಲೇ ತನಿಖೆಗೆ ತಂಡ ಕಳಿಹಿಸಿದ್ದೆ. ಅಲ್ಲಿಂದ ವರದಿ ನಿರೀಕ್ಷೆಯಲ್ಲಿದ್ದೇನೆ ಎಂದು ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ (ST Somashekhar) ತಿಳಿಸಿದರು.
ಈ ಬಗ್ಗೆ ತನಿಖೆ ಕೈಗೊಳ್ಳಲು ಇಲಾಖೆಯಿಂದ ತನಿಖಾಧಿಕಾರಿಯನ್ನು ಕಳುಹಿಸಿದ್ದು, ಇನ್ನೂ ವರದಿ ಬಂದಿಲ್ಲ. ಜೊತೆಗೆ ತನಿಖಾಧಿಕಾರಿಗಳ ಮೇಲೆ ಹಲ್ಲೆ ನಡೆಸಿರುವ ವರದಿಯಾಗಿದೆ. ಇದರ ಹಿಂದೆ ನೇರವಾಗಿ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕರು ಇರುವುದು ಗಮನಕ್ಕೆ ಬಂದಿದೆ. ತನಿಖಾ ವರದಿಗಾಗಿ ಕಾಯುತ್ತಿದ್ದು, ಬಂದ ಬಳಿಕ ಕ್ರಮ ಕೈಗೊಳ್ಳಲಾಗಿವುದು ಎಂದು ಸುದ್ದಿಗಾರರಿಗೆ ಸಚಿವರು ತಿಳಿಸಿದರು.
ಎರಡ್ಮೂರು ದಿನದಲ್ಲಿ ವರದಿ:
ಇನ್ನು 2-3 ದಿನಗಳಲ್ಲಿ ವರದಿ ಬರಲಿದ್ದು, ಬಳಿಕ ಪರಿಶೀಲನೆ ನಡೆಸಿ ಯಾವ ರೀತಿ ಕ್ರಮ ಕೈಗೊಳ್ಳಬೇಕು ಎಂದು ತೀರ್ಮಾನ ಮಾಡಲಾಗುವುದು. ಇಲ್ಲಿ ತಪ್ಪು ಮಾಡಿರುವುದನ್ನು ಸಹಿಸಲು ಆಗಲ್ಲ. ತಪ್ಪು ಯಾರೇ ಮಾಡಿರಲಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಂಡು ಶಿಕ್ಷೆ ಕೊಡಿಸಲಾಗುವುದು ಎಂದು ಸಚಿವರು ತಿಳಿಸಿದರು.
ನುಡಿದಂತೆ ನಡೆದ ಮುಖ್ಯಮಂತ್ರಿಗಳು!
ಮುಖ್ಯಮಂತ್ರಿಗಳು ನುಡಿದಂತೆ ನಡೆದಿದ್ದಾರೆ. ನಮ್ಮವರಿಗೆ ಈಗಾಗಲೇ ಸಚಿವ ಸ್ಥಾನಗಳನ್ನು ನೀಡಲಾಗಿದೆ. ನಾನು, ಬಿ.ಎ. ಬಸವರಾಜು ಪಕ್ಷದ ಶಿಸ್ತಿನ ಸಿಪಾಯಿಗಳಂತೆ ಕೆಲಸ ಮಾಡುತ್ತಿದ್ದೇವೆ. ಇನ್ನು ಮುನಿರತ್ನ, ಪ್ರತಾಪ್ ಗೌಡ ಪಾಟೀಲ್ ಅವರ ಕ್ಷೇತ್ರದ ಉಪಚುನಾವಣೆ ಬಳಿಕ ಅವರಿಗೂ ಸಚಿವ ಸ್ಥಾನ ನೀಡುವುದಾಗಿ ಮುಖ್ಯಮಂತ್ರಿಗಳಲ್ಲಿ ಕೇಳಿಕೊಂಡಿದ್ದೇವೆ. ಅವರು ಸ್ಥಾನ ಕಲ್ಪಿಸಿಕೊಡುವ ನಿರೀಕ್ಷೆ ಇದೆ ಎಂದು ಸಚಿವರು ತಿಳಿಸಿದರು.
ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ಸಂಬಂಧಪಟ್ಟಂತೆ ಯಾರೂ ಯಾರ ಮೇಲೂ ಒತ್ತಡ ಹೇರುತ್ತಿಲ್ಲ. ಉಸ್ತುವಾರಿ ಸಚಿವರ ಬಳಿ ಆಯಾ ಜಿಲ್ಲೆಗಳ ಮುಖಂಡರು ಹಾಗೂ ನಾಯಕರು ಭೇಟಿ ಮಾಡಿ ಚರ್ಚಿಸುವುದು ಸಾಮಾನ್ಯ. ಇದನ್ನು ಲಾಬಿ ಎನ್ನಲು ಸಾಧ್ಯವಿಲ್ಲ ಎಂದು ಸಚಿವರಾದ ಸೋಮಶೇಖರ್ ತಿಳಿಸಿದರು.
ಸಚಿವರಿಗೆ ಮನವಿ ಪತ್ರ:
ಶಿವಮೊಗ್ಗ ಡಿಸಿಸಿ ಬ್ಯಾಂಕ್ ನಿಂದ ಅವ್ಯವಹಾರ ಮತ್ತೆ ಮತ್ತೆ ಆಗಿದೆ. ರೈತರಿಗೆ 3 ಲಕ್ಷ ರೂಪಾಯಿವರೆಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಕೊಡಲು ಮುಂದಾಗುತ್ತಿಲ್ಲ. ಇದನ್ನು ಸಕ್ಕರೆ ಕಾರ್ಖಾನೆ ಸೇರಿದಂತೆ ಇನ್ನಿತರ ಕಡೆ ಕೊಟ್ಟಿದ್ದಲ್ಲದೆ, ಸ್ವಂತ ಸೊಸೈಟಿಗಳನ್ನು ಮಾಡಿಕೊಂಡು ಹಣ ದುರುಪಯೋಗ ಮಾಡಿಕೊಂಡಿದ್ದು, ನೂರಾರು ಕೋಟಿ ಹಗರಣವಾಗಿದೆ. ಹೀಗಾಗಿ ಇದನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಶಾಸಕರಾದ ಆರಗ ಜ್ಞಾನೇಂದ್ರ ಅವರು ಸಹಕಾರ ಸಚಿವರಾದ ಎಸ್.ಟಿ. ಸೋಮಶೇಖರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.