ಪ್ರಯಾಗರಾಜ್: ಅಯೋಧ್ಯೆಯಲ್ಲಿ ರಾಮ ಮಂದಿರ (Ram Mandir) ನಿರ್ಮಾಣಕ್ಕಾಗಿ ಆಗಸ್ಟ್ 5 ರಂದು ಉದ್ದೇಶಿತ ಭೂಮಿ ಪೂಜೆಯನ್ನು ನಿಷೇಧಿಸುವಂತೆ ಕೋರಿ ಅಲಹಾಬಾದ್ ಹೈಕೋರ್ಟ್ನಲ್ಲಿ ಗುರುವಾರ ಅರ್ಜಿ ಸಲ್ಲಿಸಲಾಗಿದೆ. ದೆಹಲಿಯ ಸಾಕೇತ್ ಗೋಖಲೆ ಅವರು ಅಲಹಾಬಾದ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಪಿಐಎಲ್ ಪತ್ರವನ್ನು ಕಳುಹಿಸಿದ್ದಾರೆ.
ಅಯೋಧ್ಯೆ (Ayodhya) ಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಆಯೋಜಿಸಿರುವ ಭೂಮಿ ಪೂಜೆಯು ಕೋವಿಡ್ -19 ರ ಅನ್ಲಾಕ್ -2 ರ ಮಾರ್ಗಸೂಚಿಯ ಉಲ್ಲಂಘನೆಯಾಗಿದೆ ಎಂದು ಪಿಐಎಲ್ ನಲ್ಲಿ ಉಲ್ಲೇಖಿಸಲಾಗಿದೆ. ಭೂಮಿ ಪೂಜೆಯಲ್ಲಿ ಮುನ್ನೂರು ಜನರು ಸೇರುತ್ತಾರೆ, ಇದು ಸರ್ಕಾರದ ಅನ್ಲಾಕ್ -2 ರ ನಿಯಮಗಳಿಗೆ ವಿರುದ್ಧವಾಗಿರುತ್ತದೆ. ಹೀಗಾಗಿ ಭೂಮಿ ಪೂಜೆ ಕಾರ್ಯಕ್ರಮಕ್ಕೆ ತಡೆ ಒಡ್ಡುವಂತೆ ಮನವಿ ಸಲ್ಲಿಸಲಾಗಿದೆ.
ಅಯೋಧ್ಯೆಯಲ್ಲಿ ಆಗಸ್ಟ್ 5ಕ್ಕೆ ರಾಮಮಂದಿರದ ಶಿಲಾನ್ಯಾಸ
ದೇಶಾದ್ಯಂತ ದಿನೇ ದಿನೇ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಲೇ ಇದ್ದು ಈ ಸಂದರ್ಭದಲ್ಲಿ 300 ಜನರು ಒಟ್ಟಿಗೆ ಸೇರಿದರೆ ಸೋಂಕು ಹರಡುವ ಅಪಾಯ ಹೆಚ್ಚಾಗಿರುತ್ತದೆ. ಉತ್ತರ ಪ್ರದೇಶ ಸರ್ಕಾರವು ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ಬದಲಾಯಿಸಲು ಅಥವಾ ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಅರ್ಜಿಯ ಬಗ್ಗೆ ವಿಚಾರಣೆ ನಡೆಸಿ ಕಾರ್ಯಕ್ರಮವನ್ನು ನಿಷೇಧಿಸುವಂತೆ ಮನವಿ ಮಾಡಲಾಗಿದೆ.
ಆದರೆ ಪತ್ರದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಚಾರಣೆಗೆ ಇನ್ನೂ ಅನುಮೋದಿಸಿಲ್ಲ.
ಪಿಐಎಲ್ ಸಲ್ಲಿಸಿರುವ ಸಾಕೇತ್ ಗೋಖಲೆ ಸಾಮಾಜಿಕ ಕಾರ್ಯಕರ್ತರಾಗಿದ್ದು ಅನೇಕ ವಿದೇಶಿ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದಾರೆ.