ಪಿಎಂ ಭೇಟಿಯನ್ನು ಕುರ್ಚಿ ಉಳಿಸಿಕೊಳ್ಳುವ ಬದಲು ರಾಜ್ಯದ ಸಮಸ್ಯೆ ಬಗ್ಗೆ ಚರ್ಚಿಸಲು ಬಳಸಿಕೊಳ್ಳಿ: ಸಿದ್ದರಾಮಯ್ಯ

15ನೇ ಹಣಕಾಸು ಆಯೋಗದಿಂದ ಉಳಿದ ರಾಜ್ಯಗಳಿಗೆ ಹೋಲಿಸಿದರೆ ಹೆಚ್ಚು ನಷ್ಟವಾಗಿರುವುದು ಕರ್ನಾಟಕ ರಾಜ್ಯಕ್ಕೆ. ಈ ಅನ್ಯಾಯಕ್ಕೆ ಕಾರಣವಾಗಿರುವ  ಮಾನದಂಡಗಳನ್ನು ಪರಿಷ್ಕರಿಸಿ ತೆರಿಗೆ ಹಂಚಿಕೆ ಮತ್ತು ಎಸ್ ಡಿ ಆರ್ ಎಫ್ ನಲ್ಲಿ ರಾಜ್ಯಕ್ಕೆ ನ್ಯಾಯಬದ್ದ ಪಾಲು ಸಿಗುವಂತೆ ಮಾಡಿ' ಎಂದು ಆಗ್ರಹಿಸಿದ್ದಾರೆ.

Last Updated : Sep 18, 2020, 12:05 PM IST
  • ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ದೆಹಲಿ ಭೇಟಿಯ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ
  • ಈ ಅವಕಾಶವನ್ನು ನಿಮ್ಮ ಕುರ್ಚಿ ಉಳಿಸಿಕೊಳ್ಳುವ ಕಸರತ್ತಿಗೆ ಬಳಸಿಕೊಳ್ಳದೆ ರಾಜ್ಯದ ಹಿತರಕ್ಷಣೆಗಾಗಿ ನಾಲ್ಕು ಮಾತುಗಳನ್ನು ಕಡಕ್ ಆಗಿ ಕೇಳಲು ಬಳಸಿಕೊಳ್ಳಿ- ಬಿಎಸ್‌ವೈಗೆ ಸಿದ್ದರಾಮಯ್ಯ ಕಿವಿಮಾತು
  • 15ನೇ ಹಣಕಾಸು ಆಯೋಗದಿಂದ ಉಳಿದ ರಾಜ್ಯಗಳಿಗೆ ಹೋಲಿಸಿದರೆ ಹೆಚ್ಚು ನಷ್ಟವಾಗಿರುವುದು ಕರ್ನಾಟಕ ರಾಜ್ಯಕ್ಕೆ- ಟ್ವೀಟ್ ಮೂಲಕ ಸಿದ್ದರಾಮಯ್ಯ
ಪಿಎಂ ಭೇಟಿಯನ್ನು ಕುರ್ಚಿ ಉಳಿಸಿಕೊಳ್ಳುವ ಬದಲು ರಾಜ್ಯದ ಸಮಸ್ಯೆ ಬಗ್ಗೆ ಚರ್ಚಿಸಲು ಬಳಸಿಕೊಳ್ಳಿ: ಸಿದ್ದರಾಮಯ್ಯ title=
File Image

ಬೆಂಗಳೂರು: ಮುಖ್ಯಮಂತ್ರಿ @BSYBJP ಅವರೇ, ಕಾಡಿಬೇಡಿ ಕೊನೆಗೂ‌ @PMOIndia ಭೇಟಿಗೆ ಅವಕಾಶ ಪಡೆದಿದ್ದೀರಿ. ಈ ಅವಕಾಶವನ್ನು ನಿಮ್ಮ ಕುರ್ಚಿ ಉಳಿಸಿಕೊಳ್ಳುವ ಕಸರತ್ತಿಗೆ ಬಳಸಿಕೊಳ್ಳದೆ ರಾಜ್ಯದ ಹಿತರಕ್ಷಣೆಗಾಗಿ ನಾಲ್ಕು ಮಾತುಗಳನ್ನು ಕಡಕ್ ಆಗಿ ಕೇಳಲು ಬಳಸಿಕೊಳ್ಳಿ. ರಾಜ್ಯದ ಜನ ನಿಮ್ಮ ಬೆನ್ನ ಹಿಂದಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (BS Yediyurappa) ಅವರನ್ನು ಒತ್ತಾಯಿಸಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ದೆಹಲಿ ಭೇಟಿಯ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, '@CMofKarnataka ಅವರೇ, ಕಳೆದ ವರ್ಷದ ಅತಿವೃಷ್ಟಿಗೆ ರೂ.35000 ಕೋಟಿ ಪರಿಹಾರ ಕೇಳಿದ್ದೀರಿ,‌ @PMOIndia ನೀಡಿದ್ದು ರೂ.1,869 ಕೋಟಿ‌. ಈ ಬಾರಿ  ರೂ.8000 ಕೋಟಿ ನಷ್ಟವಾಗಿದೆ ಎಂದು ಹೇಳುತ್ತಿದ್ದೀರಿ. ಕಳೆದ ವರ್ಷದ ಬಾಕಿ ಜೊತೆ ಈ ವರ್ಷದ ಪರಿಹಾರವನ್ನು ಉದಾರವಾಗಿ ಕೊಡುವಂತೆ ಕೇಳಿಕೊಳ್ಳಿ' ಎಂದು ಸಲಹೆ ನೀಡಿದ್ದಾರೆ.

ಪ್ರಧಾನಿ‌ ಮೋದಿ ಭೇಟಿ ಮಾಡಿದ ಸಿಎಂ ಯಡಿಯೂರಪ್ಪ

'15ನೇ ಹಣಕಾಸು ಆಯೋಗದಿಂದ ಉಳಿದ ರಾಜ್ಯಗಳಿಗೆ ಹೋಲಿಸಿದರೆ ಹೆಚ್ಚು ನಷ್ಟವಾಗಿರುವುದು ಕರ್ನಾಟಕ ರಾಜ್ಯಕ್ಕೆ. ಈ ಅನ್ಯಾಯಕ್ಕೆ ಕಾರಣವಾಗಿರುವ  ಮಾನದಂಡಗಳನ್ನು ಪರಿಷ್ಕರಿಸಿ ತೆರಿಗೆ ಹಂಚಿಕೆ ಮತ್ತು ಎಸ್ ಡಿ ಆರ್ ಎಫ್ ನಲ್ಲಿ ರಾಜ್ಯಕ್ಕೆ ನ್ಯಾಯಬದ್ದ ಪಾಲು ಸಿಗುವಂತೆ ಮಾಡಿ' ಎಂದು ಆಗ್ರಹಿಸಿದ್ದಾರೆ.

'ಕೊರೊನಾ ಸೋಂಕಿನಲ್ಲಿ ವಿಶ್ವದಲ್ಲಿ ಭಾರತ, ದೇಶದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿವೆ. ಗೆಲುವಿನ ಕಿರೀಟಗಳನ್ನೆಲ್ಲ ಮುಡಿಗೇರಿಸುವ  @narendramodi, ವೈಫಲ್ಯಗಳ ಹೊಣೆಯನ್ನು ರಾಜ್ಯಗಳ ಹೆಗಲ ಕಡೆ ಜಾರಿಸುವ ಚಾಳಿ ಇದೆ. @PMOIndia ಅವರಿಗೆ ಜವಾಬ್ದಾರಿ ನೆನಪಿಸಿ ರಾಜ್ಯಕ್ಕೆ ನ್ಯಾಯ ಕೊಡಿಸಿ' ಎಂದು ಹೇಳಿದ್ದಾರೆ.

ಕೊರೊನಾ ನಿಯಂತ್ರಣದ ಸಾಮಗ್ರಿ ಖರೀದಿಯನ್ನು ಕೇಂದ್ರೀಕೃತಗೊಳಿಸಿರುವ @PMOIndia,
ಕರ್ನಾಟಕದ ಬೇಡಿಕೆಯ ಶೇಕಡಾ ಹತ್ತರಷ್ಟೂ ಪೂರೈಸಿಲ್ಲ. ವೆಂಟಿಲೇಟರ್ ಮತ್ತು ಆಮ್ಲಜನಕ ಪೂರೈಕೆಯ ಸಾಧನಗಳ ಕೊರತೆಯಿಂದ ಜನ ಸಾಯುತ್ತಿರುವುದನ್ನು ಗಮನಕ್ಕೆ ತಂದು @narendramodi ಅವರ ಕಣ್ಣು ತೆರೆಸಿ ಎಂದು ಸಲಹೆ ನೀಡಿದ್ದಾರೆ.

ಸಿಎಂ ಬಿಎಸ್ವೈ ಭೇಟಿಯಾದ ಮಾಜಿ ಸಿಎಂ ಎಚ್ಡಿಕೆ: ಕುತೂಹಲ ಮೂಡಿಸಿರುವ ಹಾಲಿ-ಮಾಜಿಗಳ ಭೇಟಿ

@PMOIndia ಘೋಷಿಸಿದ್ದ ರೂ.20 ಲಕ್ಷ ಕೋಟಿ ಪ್ಯಾಕೇಜ್ ರಾಜ್ಯದ ಜನರನ್ನು ಇನ್ನೂ ತಲುಪಿಲ್ಲ. ಕೊರೊನಾ ಸೋಂಕಿಗಿಂತ ಹಸಿವು ಮತ್ತು ನಿರುದ್ಯೋಗದಿಂದ ಹೆಚ್ಚು ಜನ ಸಾವು-ನೋವಿಗೀಡಾಗುವ ಮೊದಲು, ಪ್ಯಾಕೇಜ್ ನಲ್ಲಿ ರಾಜ್ಯಕ್ಕೆ ನ್ಯಾಯಬದ್ಧ ಪಾಲು ನೀಡಲು ಒತ್ತಾಯಿಸಿ ಎಂದು ಸಿದ್ದರಾಮಯ್ಯ, ಯಡಿಯೂರಪ್ಪ ಅವರಿಗೆ ಸಲಹೆ ನೀಡಿದ್ದಾರೆ.

ನ್ಯಾಯಬದ್ಧವಾಗಿ ರಾಜ್ಯಕ್ಕೆ ನೀಡಬೇಕಾಗಿರುವ ಜಿಎಸ್‌ಟಿ ಪರಿಹಾರ ರೂ.25,508 ಕೋಟಿ ನೀಡದೆ ದ್ರೋಹ ಬಗೆದಿರುವ @PMOIndia, ಸಾಲ ಎತ್ತಲು @CMofKarnataka ಕೈಗೆ ಭಿಕ್ಷಾಪಾತ್ರೆ ನೀಡಿದೆ. @BSYBJP ಅವರೇ, ನಿಮ್ಮ ನಾಯಕರ ಎದೆಯಳತೆಯ ಮುಂದೆ ಮಣಿಯದೆ ಧೈರ್ಯದಿಂದ ಈ ಅನ್ಯಾಯ ಸರಿಪಡಿಸಲು ಹೇಳಿ ಎಂದು ತಿಳಿಸಿದ್ದಾರೆ.
 

Trending News