ಆ ಯುವಕನಿಗೆ ತಾನು ಶಿಕ್ಷಕನಾಗಿ ಗ್ರಾಮದ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಕೆಲಸ ಮಾಡಬೇಕೆನ್ನುವ ಕನಸಿತ್ತು, ಆದರೆ ಆಗ ಅವನಿಗೆ ಆರ್ಥಿಕ ಪರಿಸ್ಥಿತಿ ಇದಕ್ಕೆ ಕೈಹಿಡಿದಿರಲಿಲ್ಲ, ಹೀಗಾಗಿ ಆತ ಕೊನೆಗೆ ತನ್ನ ಬದುಕನ್ನು ಅಗ್ನಿಶಾಮಕ ದಳ ಮತ್ತು ರೈಲ್ವೆ ಇಲಾಖೆಯಲ್ಲಿ ಕಂಡುಕೊಂಡ. ಇಷ್ಟೆಲ್ಲದರ ನಡುವೆಯೂ ಕೂಡ ತಾನು ಶಿಕ್ಷಕನಾಗಬೇಕೆನ್ನುವ ಉತ್ಸಾಹವನ್ನು ಮಾತ್ರ ಎಂದಿಗೂ ಕಳೆದುಕೊಂಡಿರಲ್ಲಿಲ್ಲ. ಹೀಗಾಗಿ ತನ್ನ ಬಾಲ್ಯದ ಕನಸನ್ನು ನನಸು ಮಾಡಲು ಈ ಯುವಕ ಈಗ ಸ್ವಂತ ಶಾಲೆಯನ್ನೇ ನಿರ್ಮಿಸಿದ್ದಾನೆ..!
ಹೌದು, ನಾವು ಈಗ ಹೇಳ ಹೊರಟಿರುವುದು ಗದಗ (Gadag) ಜಿಲ್ಲೆಯ ರೋಣ ತಾಲೂಕಿನ ಯಾವಗಲ್ಲ ಗ್ರಾಮದ ಯುವಕ ವೀರಪ್ಪ ತಾಳದವರ ಎನ್ನುವ ಯುವಕನ ಸಾಹಸಗಾಥೆ. ಈಗಾಗಲೇ ಸಾಹಿತ್ಯ, ಫೋಟೋಗ್ರಾಫಿ, ಚಿತ್ರಕಲೆ ಹೀಗಿ ಹಲವು ಬಗೆಯ ಪ್ರಕಾರಗಳಲ್ಲಿ ಗುರುತಿಸಿಕೊಂಡಿರುವ ವೀರಪ್ಪ ತಾಳದವರ ತನ್ನ ಗ್ರಾಮದಲ್ಲಿ ಬಡ ಮಕ್ಕಳಿಗಾಗಿ ಗುಣ ಮಟ್ಟದ ಶಿಕ್ಷಣ ನೀಡಲು ಹಳ್ಳಿರಂಗ ಶಾಲೆಯನ್ನು ಆರಂಭಿಸಿದ್ದಾನೆ.
ಇದನ್ನೂ ಓದಿ: Karnataka Gram Panchayat Election Results 2020: ಗದಗ ಜಿಲ್ಲೆಯಲ್ಲಿ ಕಾಮ್ರೆಡ್ ಗಳ ಮಿಂಚು
ಆದರೆ ಹಳ್ಳಿರಂಗ ಶಾಲೆಯನ್ನು ಆರಂಭಿಸಲು ವೀರಣ್ಣ ಪಟ್ಟ ಕಷ್ಟ ಮಾತ್ರ ಅಷ್ಟಿಷ್ಟಲ್ಲ, ಆರಂಭದಲ್ಲಿ ಅಗ್ನಿಶಾಮಕದಳದಲ್ಲಿ ಕೆಲಸ ಮಾಡಿ ನಂತರ ಬಾಗಲಕೋಟೆಯಲ್ಲಿ ಕೆಲವು ವರ್ಷಗಳ ಕಾಲ ರೈಲ್ವೆ ಉದ್ಯೋಗಿಯಾಗಿ ಕಾರ್ಯನಿರ್ವಹಿಸಿದ್ದರು.ತದನಂತರ ಗದಗ ಹತ್ತಿರದ ಹೊಂಬಳ ಗ್ರಾಮಕ್ಕೆ ವರ್ಗಾವಣೆಗೊಂಡ ನಂತರ ತಮ್ಮ ಕನಸಿನ ಹಳ್ಳಿರಂಗ ಶಾಲೆಯ ಕಲ್ಪನೆಗೆ ಅವರು ಜೀವ ತುಂಬಿದರು.
ಆರಂಭದಲ್ಲಿ ಗ್ರಾಮದಲ್ಲಿನ ದುರ್ಗಮ್ಮ ದೇವಿ ದೇವಸ್ಥಾನದಲ್ಲಿ ಹಳ್ಳಿರಂಗದ ಶಾಲೆಯ ಕಾರ್ಯ ಕ್ಷೇತ್ರವನ್ನಾಗಿ ಮಾಡಿದ್ದರು.ಆದರೆ ಅಲ್ಲಿ ವಿದ್ಯಾರ್ಥಿಗಳ ಅಧ್ಯಯನಕ್ಕೆ ಶಾಂತ ವಾತಾವರಣ ಇಲ್ಲದ ಕಾರಣ ಗ್ರಾಮದಲ್ಲಿರುವ ಹಲವು ಸಮುದಾಯ ಭವನಗಳನ್ನು ತಮ್ಮ ಹಳ್ಳಿರಂಗ ಶಾಲೆ ಕಾರ್ಯ ಚಟುವಟಿಕೆ ನಡೆಸಲು ಕೇಳಿದರು, ಆದರೆ ಸೂಕ್ತ ಸ್ಪಂದನೆ ದೊರೆಯಲಿಲ್ಲ, ಇದಕ್ಕೆ ಎದೆಗುಂದದ ವೀರಣ್ಣ ಮಾತ್ರ ಇದನ್ನು ಮಾಡಿಯೇ ಸಿದ್ದ ಎನ್ನುವ ಧೃಢ ನಿರ್ಧಾರದೊಂದಿಗೆ ತನ್ನ ಮನೆಯ ಪಕ್ಕದ ಚಾವಣಿಯನ್ನೇ ಹಳ್ಳಿರಂಗ ಶಾಲೆಯನ್ನಾಗಿ ಪರಿವರ್ತನೆಗೊಳಿಸಿದ್ದಾರೆ.ಹಳ್ಳಿರಂಗ ಶಾಲೆ ಮುಂಭಾಗದಲ್ಲಿರುವ ಕಾಂಕ್ರಿಟ್ ರಸ್ತೆಗೆ ಭಾರತದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿ ಬಾಯಿ ಫುಲೆ ಅವರ ಹೆಸರನ್ನು ನಾಮಕರಣ ಮಾಡಿದ್ದಾರೆ.
ಇದನ್ನೂ ಓದಿ: ಗದಗ ಬಸ್ ನಿಲ್ದಾಣಕ್ಕೆ ಪಂ.ಪುಟ್ಟರಾಜ ಗವಾಯಿಗಳ ಹೆಸರು ನಾಮಕರಣ ಮಾಡಲು ರಾಜ್ಯ ಸರ್ಕಾರ ಒಪ್ಪಿಗೆ
ಈ ಹಳ್ಳಿರಂಗ ಶಾಲೆಯ ವಿಶೇಷವೆಂದರೆ ಮಕ್ಕಳಿಗೆ ಸಾಹಿತ್ಯ ನಾಟಕ, ದೇಶೀ ಕ್ರೀಡೆಗಳ ಮೂಲಕ ಶಿಕ್ಷಣದ ಅಭಿರುಚಿಯನ್ನು ಹೆಚ್ಚಿಸುವುದು.ಮಕ್ಕಳಿಗೆ ಕಲಿಕೆ ಭಾರವಾಗಬಾರದು ಎನ್ನುವ ಕಾರಣಕ್ಕಾಗಿ ಹಲವು ಬಗೆಯ ಕಾರ್ಯಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತಿದೆ.
ಹಳ್ಳಿರಂಗ ಶಾಲೆಯ ಕಲ್ಪನೆಗೆ ಜೀವ ಬಂದಿದ್ದು ಹೀಗೆ...
ಹಳ್ಳಿರಂಗ ಶಾಲೆ ಕಲ್ಪನೆ ಹುಟ್ಟಿದ್ದು ಹೇಗೆ ಎನ್ನುವ ವಿಚಾರವಾಗಿ ಕೇಳಿದಾಗ "ನಮ್ಮ ಮನ್ಯಾಗ ನಾಲ್ಕು ಜನ ಇದ್ರು, ಅವರೆಲ್ಲಾ ನೌಕರಿ ತಗೊಂಡು ಸಿಟಿಯಲ್ಲಿ ಸೆಟಲ್ ಆಗಿ ಬಿಟ್ರು, ಅವರು ಮತ್ತ ವಾಪಸ್ ಹಳ್ಳಿಗೆ ಬರಲೇ ಇಲ್ಲ, ಹಾಗಾಗಿ ನಾವೆಲ್ಲಾ ನೌಕರಿ ತಗೊಂಡು ಸಿಟಿಗೆ ಹೋಗಿ ಸೆಟ್ಲ್ ಆಗಿ ಬಿಟ್ರ ಹೆಂಗೆ, ವಿದ್ಯಾವಂತರೆಲ್ಲಾ ಅಕ್ಷರ ಜ್ಞಾನ ಪಡೆದು ತಮ್ಮ ಬಿಡುವಿನ ಸಮಯದಲ್ಲಿ ಇಷ್ಟಾದರೂ ತಮ್ಮ ಗ್ರಾಮಕ್ಕ ಮಾಡಿದ್ರ ಎಷ್ಟು ಅನುಕೂಲ ಆಗತ್ತ. ನಂಗೆ ಮೊದಲು ಹಳ್ಳಿಯಲ್ಲಿದ್ದು ನೌಕರಿ ಮಾಡಿದ್ರ ವ್ಯಾಲ್ಯೂ ಇರಲ್ಲ ಅಂತಿದ್ರು, ಆದರೆ ನನಗೆ ನನ್ನೂರು ಶಿಕ್ಷಣ ಕೊಟ್ಟಿದೆ, ಅನ್ನ ಕೊಟ್ಟಿದೆ, ಹುಟ್ಟಿದ ಊರನ್ನ ಬಿಟ್ಟು ಸಿಟಿಗೆ ಹೋಗಿ ನೆಲೆಸಿದ್ರ ಅಷ್ಟು ಸರಿ ಅನಿಸಲ್ಲ ಅಂದುಕೊಂಡು, ಅದಕ್ಕ ಎಷ್ಟೇ ಆಗಲಿ ನನ್ನ ಜೀವನ ಹಳ್ಳಿಯಲ್ಲಿಯೇ ಇರಲಿ ಅಂತ ಗಟ್ಟಿ ಮನಸು ಮಾಡಿಕೊಂಡು ಕಳೆದ ಎರಡು ವರ್ಷಗಳಿಂದ ಈ ಹಳ್ಳಿರಂಗ ಶಾಲೆ ನಡೆಸುತ್ತಿದ್ದೇನೆ"ಎನ್ನುತ್ತಾರೆ ವೀರಣ್ಣ.
ಕೆಲಸದ ಮಧ್ಯದಲ್ಲಿಯೂ ಇದನ್ನೆಲ್ಲಾ ಹೇಗೆ ನಿರ್ವಹಿಸುತ್ತೀರಿ ಎಂದಾಗ 'ಉತ್ಸಾಹ, ಸ್ಫೂರ್ತಿ ಎಲ್ಲವೂ ಇದನ್ನು ಸುಲಭ ಮಾಡಿದೆ.ಈಗ ಸುಮಾರು 50 ವಿದ್ಯಾರ್ಥಿಗಳಿಗೆ ನಾವು ಹಳ್ಳಿರಂಗ ಶಾಲೆಯಲ್ಲಿ ಕಲಿಸುತ್ತಿದ್ದೇವೆ, ಯಾವುದೇ ಶುಲ್ಕವನ್ನು ವಿಧಿಸುತ್ತಿಲ್ಲ, ಪ್ರತಿದಿನ ಮೂರು ಬ್ಯಾಚ್ ಗಳಂತೆ ವಿದ್ಯಾರ್ಥಿಗಳಿಗೆ ಪಾಠವನ್ನು ಬೋಧನೆ ಮಾಡುತ್ತೇವೆ. ಸ್ಥಳೀಯವಾಗಿ ನನ್ನ ಕಾರ್ಯಕ್ಕೆ ರವಿ ಕಾಳೆ, ನಿಂಗಬಸಪ್ಪ ಛಲವಾದಿ ನೆರವಾಗಿದ್ದಾರೆ ಎಂದು ಸ್ಮರಿಸುತ್ತಾರೆ. ಮುಂಬರುವ ದಿನಗಳಲ್ಲಿ ಹಳ್ಳಿ ಮಕ್ಕಳು ಕೂಡ ಸ್ಪರ್ಧಾತ್ಮಕ ಜಗತ್ತಿಗೆ ತೆರೆದುಕೊಳ್ಳುವ ನಿಟ್ಟಿನಲ್ಲಿ ಆದಕ್ಕೆ ಪೂರಕವಾಗಿ ಈ ಶಾಲೆಯನ್ನು ವಿಸ್ತರಿಸುವ ಯೋಜನೆ ಇದೆ ಎಂದು ವೀರಣ್ಣ ಹೇಳುತ್ತಾರೆ.
ಈ ಹಳ್ಳಿರಂಗ ಶಾಲೆ ಮಾದರಿ ಈಗಾಗಲೇ ರಾಜ್ಯದ ಗಮನ ಸೆಳೆದಿದೆ, ಗದಗ ಜಿಲ್ಲೆಯೊಂದರಲ್ಲಿಯೇ ಇದರಿಂದ ಪ್ರೇರಣೆ ಪಡೆದು ಸುಮಾರು 18-20 ಸಾಮುದಾಯಿಕ ಕಲಿಕಾ ಕೇಂದ್ರಗಳು ಸಕ್ರೀಯವಾಗಿ ಕಾರ್ಯನಿರ್ವಹಿಸುತ್ತಿವೆ.ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಸ್ವೆರೋಸ್ ಸಂಘಟನೆ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಬಡ ಮಕ್ಕಳ ಗುಣಮಟ್ಟದ ಶಿಕ್ಷಣಕ್ಕಾಗಿ ಶ್ರಮಿಸುತ್ತಿರುವ ಐಪಿಎಸ್ ಅಧಿಕಾರಿ ಆರ್.ಎಸ್ ಪ್ರವೀಣ್ ಕುಮಾರ ರವರು ಕೂಡ ಹಳ್ಳಿರಂಗ ಶಾಲೆಯ ಪ್ರಯತ್ನವನ್ನು ಶ್ಲಾಘಿಸಿದ್ದಾರೆ.
-ಮಂಜುನಾಥ ನರಗುಂದ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.