ಸಲ್ಮಾನ್ ಖಾನ್ ನನ್ನು ಜೈಲಿಗೆ ಕಳುಹಿಸಿದ ಬಿಷ್ನೋಯಿಗಳ ತ್ಯಾಗದ ಬಗ್ಗೆ ಗೊತ್ತೆ?

     

Last Updated : Apr 5, 2018, 05:46 PM IST
  • ಈ ಬಿಷ್ನೋಯಿ ಸಮುದಾಯವು ಹೆಚ್ಚಾಗಿ ರಾಜಸ್ತಾನದ ಥಾರ್ ಮರುಭೂಮಿಯ ಪಶ್ಚಿಮ ಭಾಗದಲ್ಲಿ ಹೆಚ್ಚಾಗಿ ಕಂಡುಬರುತ್ತದೆ.
  • 15 ನೇ ಶತಮಾನದಲ್ಲಿ ರಾಜಸ್ಥಾನದ ಬಿಕಾನೇರ್ನ ಗುರು ಜಂಬೇಶ್ವರ್(ಜಂಭಾಜಿ) ಅವರು ಬಿಷ್ನೋಯಿ ಪಂಗಡವನ್ನು ಪ್ರಾರಂಭಿಸಿದರು.
  • ಒಂದು ತತ್ವವು "ಜೀವ್ ದೀಯಾ ಪಳನಿ, ರಂಖ್ ಲಿಲೋ ನಹಿ ದೇವ್" ಎಂದು ಹೇಳುತ್ತದೆ.ಅಂದರೆ ನಿಮ್ಮ ಮರಗಳನ್ನು ಮತ್ತು ಪ್ರಾಣಿಗಳನ್ನು ಸಂರಕ್ಷಿಸಿ ಎಂದು ಹೇಳುತ್ತದೆ.
ಸಲ್ಮಾನ್ ಖಾನ್ ನನ್ನು ಜೈಲಿಗೆ ಕಳುಹಿಸಿದ ಬಿಷ್ನೋಯಿಗಳ ತ್ಯಾಗದ ಬಗ್ಗೆ ಗೊತ್ತೆ?  title=

ನಿಮಗೆ ಈಗ ಬಾಲಿವುಡ್ ನಟ ಸಲ್ಮಾನ್ ಖಾನ್ ಜೈಲಿಗೆ ಹೋಗುತ್ತಿರುವ ಸಂಗತಿ ನಿಮಗೆ ಬೇಸರ ತಂದಿರಬಹುದು, ಆದರೆ ಈಗ ಸಲ್ಮಾನ ಖಾನ್ ಮೇಲೆ ಕೃಷ್ಣ ಮೃಗ ಬೇಟೆಯ ವಿಚಾರವಾಗಿ ಕೋರ್ಟ್ ಮೆಟ್ಟಿಲೇರಿ ಅವರನ್ನು ಸೆರೆಮನೆಗೆ ಕಳುಹಿಸುವಲ್ಲಿ ಯಶಸ್ವಿಯಾದ ರಾಜಸ್ತಾನದ ಬಿಷ್ನೋಯಿ ಸಮುದಾಯದ ಇತಿಹಾಸ ಕೇಳಿದರೆ ನಿಮಗೆ ಖಂಡಿತಾ ಅಚ್ಚರಿಯಾಗುತ್ತದೆ.

ಹೌದು, 1998 ರಿಂದ ಎರಡು ದಶಕಗಳ ಕಾಲ ಸಲ್ಮಾನ್ ಖಾನ್ ವಿರುದ್ದ ಕೃಷ್ಣಮೃಗ ಬೇಟೆ ಪ್ರಕರಣದ ಕುರಿತಾಗಿ ಹೋರಾಟ ಮಾಡುತ್ತಿರುವ ಬಿಷ್ನೋಯಿ ಸಮುದಾಯದ ಹಿನ್ನಲೆಯನ್ನು ಕೇಳಿದರೆ ನೀವು ನಿಜಕ್ಕೂ ಅಚ್ಚರಿಯ ಜೊತೆಗೆ ಹೆಮ್ಮೆಯೂ ಪಡಲಿದ್ದಿರಿ.

ಹಾಗಾದರೆ ಏನಿದು ಬಿಷ್ನೋಯಿ ಸಮುದಾಯ?   

ಈ ಬಿಷ್ನೋಯಿ ಸಮುದಾಯವು ಹೆಚ್ಚಾಗಿ ರಾಜಸ್ತಾನದ ಥಾರ್ ಮರುಭೂಮಿಯ ಪಶ್ಚಿಮ ಭಾಗದಲ್ಲಿ ಹೆಚ್ಚಾಗಿ ಕಂಡುಬರುತ್ತದೆ.15 ನೇ ಶತಮಾನದಲ್ಲಿ ರಾಜಸ್ಥಾನದ ಬಿಕಾನೇರ್ನ ಗುರು ಜಂಬೇಶ್ವರ್(ಜಂಭಾಜಿ) ಅವರು ಬಿಷ್ನೋಯಿ ಪಂಗಡವನ್ನು ಪ್ರಾರಂಭಿಸಿದರು.

ಅವರು ಪ್ರಕೃತಿಯನ್ನು ಮತ್ತು ಪ್ರಾಣಿಗಳನ್ನು ರಕ್ಷಿಸಲು ಹಾಗೂ ದೇವರನ್ನು ಆರಾಧಿಸಲು ಸಮುದಾಯವನ್ನು ನಿರ್ದೇಶಿಸುವ 29 ತತ್ವಗಳನ್ನು ಪ್ರತಿಪಾದಿಸಿದರು, ಇವು ನಾಗ್ರಿ ಲಿಪಿಯಲ್ಲಿ ದಾಖಲಾಗಿದ್ದು ಇವುಗಳನ್ನು ಶಬದವಾಣಿ ಎಂದು ಕರೆಯಲಾಗುತ್ತದೆ. ಇದರಲ್ಲಿ ಒಂದು ತತ್ವವು "ಜೀವ್ ದೀಯಾ ಪಳನಿ, ರಂಖ್ ಲಿಲೋ ನಹಿ ದೇವ್" ಎಂದು ಹೇಳುತ್ತದೆ.ಅಂದರೆ ನಿಮ್ಮ ಮರಗಳನ್ನು ಮತ್ತು ಪ್ರಾಣಿಗಳನ್ನು ಸಂರಕ್ಷಿಸಿ ಎಂದು ಹೇಳುತ್ತದೆ. ಹಾಗಾಗಿ ಪ್ರಾಣಿಗಳನ್ನು ಕೊಲ್ಲುವುದು ಮತ್ತು ಮರಗಳು ಕಡಿಯುವುದು ಬಿಷ್ನೋಯಿ ಸಮುದಾಯದಲ್ಲಿ ಗಂಭೀರವಾದ ಅಪರಾಧ ಮತ್ತು ಪಾಪ ಎಂದು ಪರಿಗಣಿಸಲಾಗಿದೆ. ಯಾರಾದರು ಕೃಷ್ಣ ಮೃಗವನ್ನು ಮತ್ತು ಮರಗಳನ್ನು ತಮ್ಮ ಸಮುದಾಯದಲ್ಲಿ ಕೊಂದರೆ ಅಥವಾ ಕಡಿದರೆ ಅವರ ಜೀವವನ್ನು ಸಹಿತ ತೆಗೆಯಲು ಹಿಂಜರಿಯದಂತಹ ಕಠಿಣ ಪರಿಪಾಲನೆ ನಿಯಮಗಳು ಈ ಸಮುದಾಯದಲ್ಲಿ ಇಂದಿಗೂ ರೂಡಿಗತವಾಗಿ ಉಳಿದುಕೊಂಡು ಬಂದಿವೆ.

ಕ್ರಿ.ಶ 1730 ರಲ್ಲಿ ಬಿಷ್ನೋಯಿ ಸಮುದಾಯವು ಜೋಧಪುರದ ಮಹಾರಾಜ ಅಭಯ ಸಿಂಗ್ ತನಗೆ ಅರಮನೆ ನಿರ್ಮಿಸಿಕೊಳ್ಳಲು ಖೇಜ್ರಿ ಮರಗಳನ್ನು ಕಡಿಯಲು ಆದೇಶಿಸಿದಾಗ,ಮರಗಳನ್ನು ದೈವ ಸ್ವರೂಪಿ ಎಂದು ಪರಿಗಣಿಸುವ ಈ ಸಮುಧಾಯ ಇದಕ್ಕೆ ತೀವ್ರ ವಿರೋಧವನ್ನು ವ್ಯಕ್ತಪಡಿಸಿತು. ಅಮೃತಾದೇವಿ ಎನ್ನುವ ಬಿಷ್ನೋಯಿ ಮಹಿಳೆ ಮತ್ತು ಅವಳ ಮೂವರು ಹೆಣ್ಣು ಮಕ್ಕಳು ಗಿಡಗಳನ್ನು ಅಪ್ಪಿಕೊಂಡು ಪ್ರತಿರೋಧ ವ್ಯಕ್ತಪಡಿಸಿದರು. ಆದರೆ ಇದನ್ನು ಪರಿಗಣಿಸದೆ ರಾಜನ ಸೈನಿಕರು ಅವರನ್ನು ಕೊಂದುಬಿಟ್ಟರು.ಇದರಿಂದ ರೊಚ್ಚಿಗೆದ್ದ ಇಡೀ ಬಿಷ್ನೋಯಿ ಸಮುದಾಯವು ಖೆಜ್ರಿ ಮರಗಳನ್ನು ರಕ್ಷಿಸಲು ರೊಚ್ಚಿಗೆದ್ದು ಇದೇ ರೀತಿ ವಿರೋಧ ವ್ಯಕ್ತಪಡಿಸಿ ಪ್ರಾಣಬಿಟ್ಟರು.ಈ ಮಾದರಿಯ ಪ್ರತಿಭಟನೆ ಮುಂದೆ ಆಧುನಿಕ ಭಾರತದ ಸುಂದರ್ ಲಾಲ್ ಬಹುಗುಣ ರವರ  ಚಿಫ್ಕೋ ಮತ್ತು  ಕರ್ನಾಟಕದ ಉತ್ತರಕನ್ನಡ ಜಿಲ್ಲೆಯಲ್ಲಿ ನಡೆದ ಅಪ್ಪಿಕೋ ಚಳುವಳಿಗೆ ಮಾದರಿಯಾಯಿತು.

ಬಿಷ್ನೋಯಿ ಸಮುದಾಯದ ಮಹಿಳೆಯರು ಕೃಷ್ಣ ಮೃಗಗಳಿಗೆ ತಮ್ಮ ಮಕ್ಕಳಿಗೆ ನೀಡುವಂತೆ ಎದೆ ಹಾಲನ್ನು ನೀಡಿಯೂ ಪೋಷಣೆ ಮಾಡುವಂತಹ ಪರಂಪರೆಯನ್ನು ಇಂದಿಗೂ ಕೂಡ ಉಳಿಸಿಕೊಂಡು ಬಂದಿದ್ದಾರೆ. ಆದ್ದರಿಂದ ಇಂದು ಬಾಲಿವುಡ್ ಸ್ಟಾರ್  ಸಲ್ಮಾನ್ ಖಾನ್ ಜೋಧಪುರದ ಹತ್ತಿರ  ಕೃಷ್ಣ ಮೃಗದ ಬೇಟೆಯಾಡಿದ್ದಕ್ಕೆ ತಮ್ಮ ಸಮುದಾಯದಲ್ಲಿನ ಪದ್ಧತಿ ಮತ್ತು ಸಂಪ್ರದಾಯದ ಉಳಿವಿಗಾಗಿ  ಬಿಷ್ನೋಯಿ ಸಮುದಾಯದ ಪೂನಮ್ ಚಂದ್ ಬಿಷ್ನೋಯಿ ಎನ್ನುವ ವ್ಯಕ್ತಿ ಅಂತಹ ಸ್ಟಾರ್ ಗಳನ್ನು ಸಹಿತ  ಸೆರೆಮನೆಗೆ ತಳ್ಳುವವರೆಗೆ ಎರಡು ದಶಕಗಳ  ಕಾನೂನು ಹೋರಾಟವನ್ನು ಕೈಗೊಂಡಿದ್ದರು. ಈ ಹೋರಾಟವು ನಿಜಕ್ಕೂ ಬಿಷ್ನೋಯಿ ಸಮುದಾಯಗಳಲ್ಲಿನ ಪರಿಸರ ಮತ್ತು ಜೀವ ಸಂಕುಲದ ಉಳಿವಿನ ಕುರಿತಾಗಿರುವ ಬದ್ದತೆ ಮತ್ತು ತ್ಯಾಗದ ಹಿರಿಮೆಯನ್ನು ಎತ್ತಿ ತೋರಿಸುತ್ತದೆ.

 

Trending News