ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಮೌನ ಮುರಿದಿರುವ ನಟ ಅಂಬರೀಶ್ ಮೊದಲು ಟಿಕೆಟ್ ಘೋಷಣೆಯಾಗಲಿ, ಆಮೇಲೆ ನೋಡೋಣ ಎಂದು ಅಡ್ಡ ಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿದ್ದಾರೆ.
ಇತ್ತ ಕಾಂಗ್ರೆಸ್ ನಾಯಕರು ದೆಹಲಿಯಲ್ಲಿ ಅಭ್ಯರ್ಥಿಗಳ ಅಂತಿಮ ಪಟ್ಟಿ ಬಿಡುಗಡೆಯಲ್ಲಿ ಬ್ಯುಸಿ ಆಗಿದ್ದರೆ, ಅತ್ತ ನಟ ಅಂಬರೀಶ್ ಬೆಂಗಳೂರಿನ ಹೊರವಲಯದ ತಳಘಟ್ಟಪುರದಲ್ಲಿ ಸಿನಿಮಾ ಶೂಟಿಂಗ್'ನಲ್ಲಿ ತಲ್ಲೀನರಾಗಿದ್ದಾರೆ. ಈ ಸಂದರ್ಭದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವುದರ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಮೊದಲ ಬಾರಿ ಉತ್ತರಿಸಿದ ಅವರು, "ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ರಾಜ್ಯ ಕಾಂಗ್ರೆಸ್ ಚುನಾವಣಾ ಉಸ್ತುವಾರಿ ವೇಣುಗೋಪಾಲ್ ಜೊತೆ ಮಾತನಾಡಿದ್ದೇನೆ. ಬಿ. ಫಾರಂ ಡಿಸಿಗೆ ಕೊಡೋವರೆಗೂ ಗ್ಯಾರಂಟಿ ಇದೆಯಾ ಹೇಳಿ? ಕಾಂಗ್ರೆಸ್ ಅನ್ನೋದು ಹೇಗೆ ಅನ್ನೋದು ಗೊತ್ತಲ್ಲಾ?" ಎಂದು ಹೇಳುವ ಮೂಲಕ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಯಾವುದೇ ಮಾಹಿತಿ ನೀಡಲಿಲ್ಲ.
"ಮೊನ್ನೆ ಮೈಸೂರಿನಿಂದ ಬರುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮನ್ನು ಭೇಟಿ ಆಗುವುದಾಗಿ ಹೇಳಿದ್ದರು. ಆದರೆ, ಅವರ ತಲೆಗೆ ಪೆಟ್ಟಾದ್ದರಿಂದ ಭೇಟಿ ಆಗಲು ಸಾಧ್ಯವಾಗಲಿಲ್ಲ" ಎಂದು ಅಂಬರೀಶ್ ಹೇಳಿದರು.
ಈ ಹಿಂದೆ ತಮ್ಮ ಅನಾರೋಗ್ಯದ ಕಾರಣದಿಂದಾಗಿ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಅಂಬರೀಶ್ ಹೇಳಿದ್ದರು. ಆದರೆ ಮುಂದುವರೆದ ರಾಜಕೀಯ ಬೆಳವಣಿಗೆಯಲ್ಲಿ ಮಂಡ್ಯ ಕ್ಷೇತ್ರದಿಂದ ತಾವೂ ಟಿಕೆಟ್ ಆಕಾಂಕ್ಷಿ ಎಂದು ಅಂಬಿ ಹೇಳಿದ್ದಾಗಿ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆದರೆ ಇದುವರೆಗೂ ತಾವು ಚುನಾವಣೆ ಸ್ಪರ್ಧಿಸುವ ಕುರಿತು ಅಂಬರೀಶ್ ಯಾವುದೇ ಸ್ಪಷ್ಟ ಹೇಳಿಕೆ ನೀಡಿಲ್ಲ.