Tokyo Olympics 2020: ಭಾರತಕ್ಕೆ ಮತ್ತೊಂದು ಪದಕ, ಕಂಚಿಗೆ ಮುತ್ತಿಕ್ಕಿದ ಪಿ.ವಿ.ಸಿಂಧು

ಚೀನಾದ ಆಟಗಾರ್ತಿ ವಿರುದ್ಧ  ಭರ್ಜರಿ ಗೆಲುವು ಸಾಧಿಸಿದ ಪಿ.ವಿ.ಸಿಂಧು.

Written by - Zee Kannada News Desk | Last Updated : Aug 1, 2021, 07:44 PM IST
  • ಟೋಕಿಯೊ ಒಲಂಪಿಕ್ಸ್ ನಲ್ಲಿ ಕಂಚಿನ ಪದಕಕ್ಕೆ ಮುತ್ತಿಕ್ಕಿದ ಪಿ.ವಿ.ಸಿಂಧು
  • ಚೀನಾದ ಆಟಗಾರ್ತಿ ವಿರುದ್ಧ 21-13, 21-15 ನೇರ ಸೆಟ್ ಗಳಿಂದ ಗೆಲುವು
  • ಒಲಂಪಿಕ್ಸ್ ನಲ್ಲಿ ಸತತ 2ನೇ ಪದಕ ಗೆದ್ದ ಸಾಧನೆ ಮಾಡಿದ ಪಿ.ವಿ.ಸಿಂಧು
Tokyo Olympics 2020: ಭಾರತಕ್ಕೆ ಮತ್ತೊಂದು ಪದಕ, ಕಂಚಿಗೆ ಮುತ್ತಿಕ್ಕಿದ ಪಿ.ವಿ.ಸಿಂಧು title=
ಕಂಚಿನ ಪದಕಕ್ಕೆ ಮುತ್ತಿಕ್ಕಿದ ಪಿ.ವಿ.ಸಿಂಧು

ನವದೆಹಲಿ: ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು(PV Sindhu) ಟೋಕಿಯೊ ಒಲಂಪಿಕ್ಸ್ ನಲ್ಲಿ ಕಂಚಿನ ಪದಕಕ್ಕೆ ಮುತ್ತಿಕ್ಕಿದ್ದಾರೆ. ಭಾನುವಾರ ನಡೆದ ಮಹತ್ವದ ಪಂದ್ಯದಲ್ಲಿ ಸಿಂಧು, ಚೀನಾದ ಹೇ ಬಿಂಗ್ಜಾವ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಭಾರತಕ್ಕೆ 2ನೇ ಪದಕ ತಂದುಕೊಟ್ಟ ಸಾಧನೆ ಮಾಡಿದ್ದಾರೆ. ಹೇ ಬಿಂಗ್ಜಾವ್ ವಿರುದ್ಧ ಸಿಂಧು 21-13 ಮತ್ತು 21-15 ನೇರ ಸೆಟ್ ಗಳಿಂದ ಗೆಲುವು ಸಾಧಿಸಿದ್ದಾರೆ.

ಸೆಮಿಫೈನಲ್ ಪಂದ್ಯದಲ್ಲಿ ಪಿ.ವಿ.ಸಿಂಧು ವಿಶ್ವ ನಂ.1 ಆಟಗಾರ್ತಿ ಚೈನೀಸ್ ತೈಪೆಯ ತೈ ಜು ಯಿಂಗ್ ವಿರುದ್ಧ ಸೋಲು ಕಂಡಿದ್ದರು. ತನ್ನ ಹಿಂದಿನ ತಪ್ಪುಗಳನ್ನು ತಿದ್ದುಕೊಂಡು ಇಂದು ಕಣಕ್ಕಿಳಿದ ಪಿ.ವಿ.ಸಿಂಧು(PV Sindhu) ದೇಶಕ್ಕೆ ಮತ್ತೊಂದು ಪದಕ ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಚೀನಾದ ಹೇ ಬಿಂಗ್ಜಾವ್(He Bingjiao)ವಿರುದ್ಧ ಆರಂಭದಿಂದಲೂ ಸಿಂಧು ಆಕ್ರಮಣಕಾರಿ ಆಟ ಪ್ರದರ್ಶಿಸಿದರು. ಮೊದಲ ಸೆಟ್ ನಲ್ಲಿ ಚೀನಾದ ಆಟಗಾರ್ತಿ ಪ್ರತಿರೋಧ ತೋರಿದರೂ ಸಿಂಧು ಭರ್ಜರಿ ಪ್ರದರ್ಶನದ ಮೂಲಕ 21-13ರ ಅಂತರದಿಂದ  ಮುನ್ನಡೆ ಕಾಯ್ದುಕೊಂಡರು.

ಇದನ್ನೂ ಓದಿ: Tokyo Olympics Discus throw: ಫೈನಲ್ ಗೆ ಲಗ್ಗೆ ಇಟ್ಟ ಕಮಲ್‌ ಪ್ರೀತ್ ಕೌರ್, ಚಿನ್ನದ ಬೇಟೆಗೆ ಸಜ್ಜು

ಬಳಿಕ 2ನೇ ಸೆಟ್ ನಲ್ಲಿ ಮತ್ತೆ ತಮ್ಮ ಆಕ್ರಮಣಕಾರಿ ಆಟ ಮುಂದುವರಿಸಿದ ಸಿಂಧು, ಚೀನಾ(China)ದ ಆಟಗಾರ್ತಿಗೆ ಪ್ರಬಲ ಪೈಪೋಟಿ ನೀಡಿದರು. 2ನೇ ಸೆಟ್ ನಲ್ಲಿ ಸಿಂಧು ವಿರುದ್ಧ ಹೇ ಬಿಂಗ್ಜಾವ್ ಒಂದು ಹಂತದಲ್ಲಿ ಪ್ರತಿರೋಧ ತೋರಿದರು. ಆದರೆ ಸಿಂಧು ತಮ್ಮ ಬಲವಾದ ಹೊಡೆತಗಳಿಂದ 2ನೇ ಸೆಟ್ ಅನ್ನು ತಮ್ಮದಾಗಿಸಿಕೊಂಡರು. ಈ ಮೂಲಕ ಟೋಕಿಯೊ ಒಲಂಪಿಕ್ಸ್(Tokyo Olympics 2020)ನಲ್ಲಿ ಕಂಚಿನ ಪದಕ ಗೆದ್ದು ಸಿಂಧು ದೇಶಕ್ಕೆ ಹೆಮ್ಮೆ ತಂದಿದ್ದಾರೆ.

ಇದನ್ನೂ ಓದಿ: Tokyo Olympics 2020: ಚಿನ್ನದ ಪದಕ ಗೆಲ್ಲುವ ಹಾಕಿ ಆಟಗಾರರಿಗೆ 2.25 ಕೋಟಿ ರೂ. ಬಹುಮಾನ

2016ರ ರಿಯೋ ಒಲಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಪಿ.ವಿ.ಸಿಂಧು ಈ ಬಾರಿ ಚಿನ್ನದ ಪದಕ ಗೆಲ್ಲುತ್ತಾರೆಂದು ನಿರೀಕ್ಷಿಸಲಾಗಿತ್ತು. ಆದರೆ ತೈವಾನ್ ಆಟಗಾರ್ತಿ ಎದುರು ಪಿ.ವಿ.ಸಿಂಧು ಉತ್ತಮ ಆಟ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಇದರಿಂದ ಕೋಟ್ಯಂತರ ಭಾರತೀಯರಿಗೆ ನಿರಾಸೆ ಮೂಡಿತ್ತು. ಆದರೆ ಅವರ ನಿರಾಸೆಯನ್ನು ಕಂಚಿನ ಪದಕ(Bronze Medal)ಗೆಲ್ಲುವ ಮೂಲಕ ಸಿಂಧು ಹೋಗಲಾಡಿಸಿದ್ದಾರೆ. ಭಾರತ ಸದ್ಯ ಟೋಕಿಯೊ ಒಲಂಪಿಕ್ಸ್ ನಲ್ಲಿ 1 ಬೆಳ್ಳಿ ಮತ್ತು 1 ಕಂಚಿನ ಪದಕ ಗೆದ್ದಿದೆ. ಮಹಿಳಾ 49 ಕೆಜಿ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ವೇಟ್ ಲಿಫ್ಟರ್ ಸೈಖೋಮ್ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದಿದ್ದರು. ಇದೀಗ ಸಿಂಧು ಬ್ಯಾಡ್ಮಿಂಟನ್ ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಟೋಕಿಯೊ ಒಲಂಪಿಕ್ಸ್ ಕ್ರೀಡಾಕೂಟದ ಪದಕ ಪಟ್ಟಿಯಲ್ಲಿ ಭಾರತ 59ನೇ ಸ್ಥಾನದಲ್ಲಿದೆ.

 ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News