ಬದಾಮಿ: ಚುನಾವಣೆಗೂ ಮುನ್ನ ಕಾಂಗ್ರೆಸಿಗೆ ಒಂದು ಬಿಗ್ ಶಾಕ್ ದೊರೆತಿದೆ. ಕಾಂಗ್ರೆಸ್ ನಾಯಕನ ಒಡೆತನದ ರೆಸಾರ್ಟ್ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬಾದಾಮಿ ಹೊರವಲಯದಲ್ಲಿರುವ ಕೃಷ್ಣಾ ಹೆರಿಟೇಜ್ ರೆಸಾರ್ಟ್ ಮೇಲೆ ಸೋಮವಾರ ತಡರಾತ್ರಿ ಆದಾಯ ತೆರಿಗೆ ಅಧಿಕಾರಿಗಳ ತಂಡ ದಾಳಿ ನಡೆಸಿದೆ.
ಬಾದಾಮಿ ಹೊರವಲಯದಲ್ಲಿರುವ ಕೃಷ್ಣಾ ಹೆರಿಟೇಜ್ ರೆಸಾರ್ಟ್ ರೆಸಾರ್ಟ್ ನಲ್ಲಿ ಹೊಸಪೇಟೆ (ವಿಜಯನಗರ) ಶಾಸಕ ಆನಂದ್ ಸಿಂಗ್ ಒಡೆತನದ ಕೃಷ್ಣಾ ಹೆರಿಟೇಜ್ ರೆಸಾರ್ಟ್ ಮೇಲೆ ಐಟಿ ಇಲಾಖೆ ಜಂಟಿ ನಿರ್ದೇಶಕರ ನೇತೃತ್ವದಲ್ಲಿ 10 ಕ್ಕೂ ಹೆಚ್ಚು ಐಟಿ ಅಧಿಕಾರಿಗಳ ತಂಡ ಪರೀಶೀಲನೆ ನಡೆಸಿತು. ಈ ಸಮಯದಲ್ಲಿ ಅಧಿಕಾರಿಗಳಿಗೆ 11 ಲಕ್ಷ ರೂ. ದೊರೆತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಈ ರೆಸಾರ್ಟ್ ಬಿಜೆಪಿಯಿಂದ ಕಾಂಗ್ರೆಸಿಗೆ ಸೇರ್ಪಡೆಗೊಂಡಿದ್ದ ವಿಜಯನಗರದ ಕಾಂಗ್ರೆಸ್ ಅಭ್ಯರ್ಥಿ ಆನಂದ್ ಸಿಂಗ್ ಒಡೆತನಕ್ಕೆ ಸೇರಿದ್ದಾಗಿದೆ. ಎರಡು ದಿನಗಳ ಹಿಂದೆ ಬಾದಾಮಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿದ್ದರು.
ಇನ್ನು ಐಟಿ ಅಧಿಕಾರಿಗಳ ವೇಳೆ ರೆಸಾರ್ಟ್ ನಲ್ಲಿ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ವಾಸ್ತವ್ಯ ಹೂಡಿದ್ದರು ಎನ್ನಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿ.ಎಂ. ಇಬ್ರಾಹಿಂ ಈ ರೆಸಾರ್ಟ್ ನಲ್ಲಿ ನಾನು ವಾಸ್ತವ್ಯ ಹೂಡಿರಲಿಲ್ಲ. ಊಟಕ್ಕೆಂದು ರೆಸಾರ್ಟ್ ಗೆ ಬಂದಿದ್ದೇ. ನಾನು ಎಸ್.ಆರ್. ಪಾಟೀಲ್ ಇಬ್ಬರೂ ಊಟಕ್ಕೆಂದು ರೆಸಾರ್ಟ್ ಗೆ ಬಂದಿದ್ದೆವು. ಈ ವೇಳೆ ಐಟಿ ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದಾರೆ. ಅಧಿಕಾರಿಗಳು ನಮ್ಮನ್ನು ಏನು ಪ್ರಶ್ನಿಸಿಲ್ಲ. ಎರಡು ಗಂಟೆಗಳ ಬಳಿಕ ಹೊರಹೋಗಲು ಹೇಳಿದರು ನಾವು ಹೊರಟಿದ್ದೇವೆ ಎಂದು ತಿಳಿಸಿದರು.