ಧಾರವಾಡ : ಚೆಂಬೆಳಕಿನ ಕವಿ, ನಾಡೋಜ ಡಾ.ಚೆನ್ನವೀರ ಕಣವಿ ಅವರು ಇಂದು (ಫೆ.16) ಬೆಳಿಗ್ಗೆ ನಿಧನರಾದರು. ಕಲ್ಯಾಣ ನಗರದ ನಿವಾಸ, ಕರ್ನಾಟಕ ಕಾಲೇಜು ಆವರಣದಲ್ಲಿ ಪಾರ್ಥಿವ ಶರೀರಕ್ಕೆ ಅಂತಿಮ ದರ್ಶನ ಏರ್ಪಡಿಸಲಾಗಿತ್ತು. ಸಂಜೆ ಕೆಲಗೇರಿ ಸಮೀಪದ “ಸೃಷ್ಠಿ” ತೋಟದಲ್ಲಿ ಪೊಲೀಸ್ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಯಿತು. ಕೇಂದ್ರ ಹಾಗೂ ರಾಜ್ಯ ಸಚಿವರು, ಶಾಸಕರು, ಗಣ್ಯರು, ಸಾಹಿತಿಗಳು ಅಂತಿಮದರ್ಶನ ಪಡೆದು ಗೌರವ ಸಲ್ಲಿಸಿದರು.
ಬೆಳಿಗ್ಗೆ ಸುದ್ದಿ ತಿಳಿದ ಕೂಡಲೇ ಸತ್ತೂರಿನ ಎಸ್‍ಡಿಎಂ ಆಸ್ಪತ್ರೆಗೆ ಧಾವಿಸಿದ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಡಾ.ಚೆನ್ನವೀರ ಕಣವಿ ಅವರ ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಿದರು. ಕುಟುಂಬ ಸದಸ್ಯರೊಂದಿಗೆ ಚರ್ಚಿಸಿ ಪಾರ್ಥಿವ ಶರೀರದ ಸಾರ್ವಜನಿಕ ದರ್ಶನ ಮತ್ತು ಅಂತ್ಯಕ್ರಿಯೆ ಕುರಿತು ನಿರ್ಧಾರ ಪ್ರಕಟಿಸಿದರು.
ಬೆಳಿಗ್ಗೆ 11 ಗಂಟೆ ಸುಮಾರಿಗೆ ಆಸ್ಪತ್ರೆಯಿಂದ ಡಾ.ಚೆನ್ನವೀರ ಕಣವಿ ಅವರ ಕಲ್ಯಾಣ ನಗರದ ಚೆಂಬೆಳಕು ನಿವಾಸಕ್ಕೆ ಪಾರ್ಥಿವ ಶರೀರವನ್ನು ತೆಗೆದುಕೊಂಡು ಹೊಗಲಾಯಿತು. ಗದುಗಿನ ತೋಂಟದ ಡಾ. ಸಿದ್ಧರಾಮ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಡಾ.ಕಣವಿ ಅವರ ಪುತ್ರರಾದ ಶಿವಾನಂದ, ಚಂದ್ರಮೌಳಿ, ಪ್ರಿಯದರ್ಶಿ, ಕರುಣಪ್ರಸಾದ ಹಾಗೂ ಪುತ್ರಿ ರಂಜನಾ ಗೋದಿ ತಮ್ಮ ಕುಟುಂಬದ ಸದಸ್ಯರು, ಬಂಧುಗಳೊಂದಿಗೆ ಪೂಜೆ ಸಲ್ಲಿಸಿದರು.
ಇದನ್ನೂ ಓದಿ: Karnataka Hijab row: "ಪ್ರತಿಭಟನೆ ಮುಂದುವರಿದರೆ ಕಠಿಣ ಕ್ರಮ"- ಗೃಹ ಸಚಿವರ ಎಚ್ಚರಿಕೆ
ಸಾರ್ವಜನಿಕರ ದರ್ಶನಕ್ಕಾಗಿ ಕರ್ನಾಟಕ ಕಾಲೇಜು ಮುಖ್ಯ ಕಟ್ಟಡದ ಆವರಣದಲ್ಲಿ ಮಧ್ಯಾಹ್ನ ಡಾ. ಕಣವಿ ಅವರ ಪಾರ್ಥಿವ ಶರೀರವನ್ನು ಇರಿಸಲಾಗಿತ್ತು. ವಿವಿಧ ಮಠಾಧೀಶರು, ಕರ್ನಾಟಕ ವಿದ್ಯಾವರ್ಧಕ ಸಂಘ, ಕನ್ನಡ ಸಾಹಿತ್ಯ ಪರಿಷತ್ತು, ಉತ್ತರ ಕರ್ನಾಟಕ ಲೇಖಕಿಯರ ಸಂಘ, ರಾಜ್ಯ ಸರ್ಕಾರಿ ನೌಕರ ಸಂಘದ ಜಿಲ್ಲಾ ಘಟಕ, ವಿವಿಧ ಶಿಕ್ಷಣ ಸಂಸ್ಥೆಗಳು, ಕನ್ನಡ ಪರ ಸಂಘಟನೆಗಳು, ಸೇರಿದಂತೆ ಡಾ.ಚೆನ್ನವೀರ ಕಣವಿ ಅವರ ಆಪ್ತರು, ಅಭಿಮಾನಿಗಳು, ಶಿಷ್ಯರು, ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ಅಂತಿಮ ನಮನ ಸಲ್ಲಿಸಿದರು.
ಕೇಂದ್ರ ಸಂಸದೀಯ ವ್ಯವಹಾರಗಳು, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ್ ಜೋಶಿ, ರಾಜ್ಯ ಸರ್ಕಾರದ ಪ್ರತಿನಿಧಿಯಾಗಿ ಗಣಿ ಮತ್ತು ಭೂವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸಚಿವ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಆಚಾರ ಹಾಲಪ್ಪ ಬಸಪ್ಪ, ಶಾಸಕ ಅರವಿಂದ ಬೆಲ್ಲದ, ಜಿಲ್ಲಾಧಿಕಾರಿ ನಿತೇಶ ಪಾಟೀಲ, ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಲಾಬೂರಾಮ, ಕವಿವಿ ಕುಲಪತಿ ಡಾ.ಕೆ.ಬಿ.ಗುಡಸಿ, ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಮುಂಡರಗಿ ತೋಂಟದಾರ್ಯ ಶಾಖಾ ಮಠದ ನಿಜಗುಣತೋಂಟದಾರ್ಯ, ಮನಗುಂಡಿಯ ಬಸವಾನಂದ ಸ್ವಾಮೀಜಿ, ಭೈರನಟ್ಟಿಯ ಶಾಂತವೀರ ಸ್ವಾಮೀಜಿ, ಕರ್ನಾಟಕ ಕಲಾ ಕಾಲೇಜು ಪ್ರಾಚಾರ್ಯ ಡಾ.ಡಿ.ಬಿ.ಕರಡೋಣಿ, ವಿಜ್ಞಾನ ಕಾಲೇಜು ಪ್ರಾಚಾರ್ಯ ಡಾ. ಶಿವಾನಂದ ಚೌಗಲಾ ಸೇರಿದಂತೆ ಅನೇಕರು ಡಾ.ಕಣವಿ ಅವರಿಗೆ ಪುಷ್ಪಗುಚ್ಚ ಇರಿಸಿ ಅಂತಿಮ ನಮನ ಸಲ್ಲಿಸಿದರು.
ಸಂಜೆ ಹೊತ್ತಿಗೆ ಡಾ.ಕಣವಿ ಅವರ ಪಾರ್ಥಿವ ಶರೀರದ ಅಂತಿಮ ಯಾತ್ರೆ ಕರ್ನಾಟಕ ಕಾಲೇಜು ಆವರಣದಿಂದ ಕೆಲಗೇರಿ ಹತ್ತಿರದಲ್ಲಿರುವ ಅವರ ತೋಟಕ್ಕೆ ಸಾಗಿತು. ಬಸವತತ್ವ ಹಾಗೂ ವೀರಶೈವ ಲಿಂಗಾಯತ ಪರಂಪರೆಯ ಆಚರಣೆಗಳ ಮೂಲಕ ಅಂತ್ಯಸಂಸ್ಕಾರ ನಡೆಯಿತು.
ಇದನ್ನೂ ಓದಿ: DK Shivakumar vs KS Eshwarappa: ಏಕವಚನದಲ್ಲಿ ಬೈದಾಡಿಕೊಂಡ ಡಿಕೆಶಿ ಮತ್ತು ಈಶ್ವರಪ್ಪ
ಕನ್ನಡದಲ್ಲಿ ಪೊಲೀಸ್ ಕವಾಯತ ಗೌರವ ಸಲ್ಲಿಕೆ : ನಾಡೋಜ ಡಾ.ಚೆನ್ನವೀರ ಕಣವಿ ಅವರ ಪಾರ್ಥಿವ ಶರೀರಕ್ಕೆ ಗೌರವ ರಕ್ಷೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ ಅವರ ನೇತೃತ್ವದಲ್ಲಿ ನೀಡಲಾಯಿತು. ಕನ್ನಡದಲ್ಲಿ ಕವಾಯತು ಆಜ್ಞೆಗಳನ್ನು ನೀಡಿ ಪೊಲೀಸ್ ಗೌರವ ಸಲ್ಲಿಸಿ, ಗಾಲಿಯಲ್ಲಿ 3 ಸುತ್ತು ಕುಶಾಲತೋಪು ಸಿಡಿಸಿ ಗೌರವ ಅರ್ಪಿಸಲಾಯಿತು.
ಅಂತ್ಯಕ್ರಿಯೆ ಸ್ಥಳದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಆಚಾರ ಹಾಲಪ್ಪ ಬಸಪ್ಪ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ ಜೋಶಿ, ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ಸಾಹಿತಿ ಅಲ್ಲಮಪ್ರಭು ಬೆಟ್ಟದೂರ ಅವರು ನುಡಿನಮನ ಸಲ್ಲಿಸಿದರು.
ಹಿರಿಯ ಸಾಹಿತಿ ಕುಂ. ವೀರಭದ್ರಪ್ಪ, ಕವಿವಿ ವಿಶ್ರಾಂತ ಕುಲಪತಿ ಪ್ರೊ ಎಚ್.ಬಿ.ವಾಲಿಕಾರ, ರಾಮಕೃಷ್ಣ ಆಶ್ರಮದ ವಿಜಯಾನಂದ ಸರಸ್ವತಿ ಸ್ವಾಮೀಜಿ, ಉನ್ನತ ಶಿಕ್ಷಣ ಅಕಾಡೆಮಿಯ ನಿರ್ದೇಶಕ ಪ್ರೊ. ಎಸ್.ಎಂ.ಶಿವಪ್ರಸಾದ, ಮಾಜಿ ಶಾಸಕ ಮೋಹನ ಲಿಂಬಿಕಾಯಿ, ರಂಗಾಯಣ ನಿರ್ದೇಶಕ ರಮೇಶ ಪರವಿನಾಯ್ಕರ, ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಈರಣ್ಣ ಜಡಿ, ಜಿಲ್ಲಾಧಿಕಾರಿ ನಿತೇಶ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ, ಜಿ.ಪಂ.ಸಿಇಓ ಡಾ.ಸುರೇಶ ಇಟ್ನಾಳ, ಮಹಾನಗರ ಪಾಲಿಕೆ ಆಯುಕ್ತ ಡಾ. ಗೋಪಾಲಕೃಷ್ಣ.ಬಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಬೆಳಗಾವಿ ವಿಭಾಗದ ಜಂಟಿ ನಿರ್ದೇಶಕ ಬಸವರಾಜ ಹೂಗಾರ ಉಪವಿಭಾಗಾಧಿಕಾರಿ ಅಶೋಕ ತೇಲಿ, ತಹಶೀಲ್ದಾರ ಡಾ.ಸಂತೋಷಕುಮಾರ ಬಿರಾದಾರ, ಲೋಕೋಪಯೋಗ ಇಲಾಖೆಯ ಕಾರ್ಯಪಾಲಕ ಅಭಿಯಂತರ ಎಸ್.ಬಿ.ಚೌಡಣ್ಣವರ, ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಶಿವಕುಮಾರ ಪಾಟೀಲ ಸೇರಿದಂತೆ ವಿವಿಧ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು, ಸಾಹಿತಿಗಳು, ಸಂಘಟಕರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.