ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ಹಾಗು ಡಿಎಂಕೆ ಪಕ್ಷದ ಮುಖ್ಯಸ್ಥ ಎಂ.ಕರುಣಾನಿಧಿ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ತಮಿಳುನಾಡು ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಸ್.ತಿರುನವುಕ್ಕರಸರ್, ಇಂದು ಬೆಳಿಗ್ಗೆ ಕರುಣಾನಿಧಿ ಅವರ ಆರೋಗ್ಯ ಸ್ಥಿತಿ ಬಹಳ ಗಂಭೀರವಾಗಿತ್ತು. ಆದರೀಗ ಚೇತರಿಸಿಕೊಳ್ಳುತ್ತಿದ್ದಾರೆ. ವೈದ್ಯರು ಚಿಕಿತ್ಸೆ ನೀಡುತ್ತಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ. ಅವರು ಶೀಘ್ರ ಗುಣಮುಖರಾಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ" ಎಂದು ಹೇಳಿದ್ದಾರೆ.
ಜ್ವರ ಹಾಗೂ ಮೂತ್ರನಾಳ ಸೋಂಕಿನಿಂದ ಬಳಲುತ್ತಿದ್ದ ಡಿಎಂಕೆ ನಾಯಕ ಎಂ.ಕರುಣಾನಿಧಿ(94) ಅವರನ್ನು ಜುಲೈ 28ರಂದು ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಾಗಿಸಲಾಗಿತ್ತು. ನಂತರ ಕರುಣಾನಿಧಿ ಆರೋಗ್ಯ ಸ್ಥಿತಿ ಬಗ್ಗೆ ಪ್ರಕಟಣೆ ಹೊರಡಿಸಿದ್ದ ಕಾವೇರಿ ಆಸ್ಪತ್ರೆ ಆಡಳಿತ ಮಂಡಳಿ, "ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿರುವುದರಿಂದ ಕರುಣಾನಿಧಿಯವರಿಗೆ ಉನ್ನತ ವೈದ್ಯರುಗಳು ಚಿಕಿತ್ಸೆ ಮುಂದುವರಿಸಿದ್ದು, ಆರೋಗ್ಯ ಸುಧಾರಣೆ ಕಾಣುವವರೆಗೂ ಆಸ್ಪತ್ರೆಯಲ್ಲೇ ದಾಖಲಾಗಿರುತ್ತಾರೆ" ಹೇಳಿಕೆ ನೀಡಿತ್ತು.
ಭಾನುವಾರ ರಾಷ್ಟ್ರಪತಿ ರಾಮನಾಥ ಕೋವಿಂದರವರು ಕಾವೇರಿ ಆಸ್ಪತ್ರೆಗೆ 5 ಬಾರಿ ಭೇಟಿ ನೀಡಿ ಕರುಣಾನಿಧಿಯವರ ಆರೋಗ್ಯವನ್ನು ಖುದ್ದು ವಿಚಾರಿಸಿದ್ದಾರೆ. ಅವರ ಆರೋಗ್ಯದ ಬಗ್ಗೆ ಪುತ್ರ ಸ್ಟಾಲಿನ್ ಹಾಗೂ ವೈದ್ಯರ ಬಳಿ ದೀರ್ಘ ಮಾತುಕತೆಯನ್ನು ನಡೆಸಿದ್ದರು. ಅಲ್ಲದೆ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಬಹಳಷ್ಟು ನಾಯಕರು ಕರುಣಾನಿಧಿ ಅವರ ಆರೋಗ್ಯ ವಿಚಾರಿಸಿದ್ದರು.