ಇಂದು ನೆಲಸಮವಾಗಲಿದೆ ಅವಳಿ ಗೋಪುರ! ಕುತುಬ್ ಮಿನಾರ್ ಗಿಂತಲೂ ಎತ್ತರದ ಕಟ್ಟಡ ಸ್ಪೋಟಕ್ಕೆ 3700 ಕೆಜಿ ಗನ್ ಪೌಡರ್ ಬಳಕೆ

ಎಮರಾಲ್ಡ್ ಕೋರ್ಟ್ ಸೊಸೈಟಿ ಆವರಣದಲ್ಲಿ ನಿಯಮಾವಳಿಗಳನ್ನು ಉಲ್ಲಂಘಿಸಿ ಕಟ್ಟಡಗಳನ್ನು ನಿರ್ಮಿಸಿರುವುದನ್ನು ಗಮನಿಸಿ ಸುಪ್ರೀಂ ಕೋರ್ಟ್ ಆದೇಶದ ಅನುಸಾರವಾಗಿ ಕಟ್ಟಡಗಳನ್ನು ಧ್ವಂಸಗೊಳಿಸಲು 3,700 ಕೆಜಿ ಸ್ಫೋಟಕಗಳನ್ನು ಬಳಸಲಾಗುತ್ತಿದೆ.

Written by - Bhavishya Shetty | Last Updated : Aug 28, 2022, 08:24 AM IST
    • ಎಮರಾಲ್ಡ್ ಕೋರ್ಟ್ ಸೊಸೈಟಿ ಆವರಣದಲ್ಲಿ ನಿಯಮಾವಳಿಗಳನ್ನು ಉಲ್ಲಂಘಿಸಿ ಕಟ್ಟಡಗಳನ್ನು ನಿರ್ಮಾಣ
    • ಕುತುಬ್ ಮಿನಾರ್‌ ಗಿಂತಲೂ ಎತ್ತರದ ಕಟ್ಟಡ ಇಂದು ನೆಲಸಮ
    • 3700 ಕೆಜಿ ಗನ್ ಪೌಡರ್ ಬಳಸಿ ಕಟ್ಟಡ ನೆಲಸಮ ಮಾಡಲು ನಿರ್ಧಾರ
ಇಂದು ನೆಲಸಮವಾಗಲಿದೆ ಅವಳಿ ಗೋಪುರ! ಕುತುಬ್ ಮಿನಾರ್ ಗಿಂತಲೂ ಎತ್ತರದ ಕಟ್ಟಡ ಸ್ಪೋಟಕ್ಕೆ 3700 ಕೆಜಿ ಗನ್ ಪೌಡರ್ ಬಳಕೆ title=
Noida Supertech twin towers

ದೆಹಲಿಯ ಕುತುಬ್ ಮಿನಾರ್‌ಗಿಂತಲೂ ಎತ್ತರವಾಗಿರುವ ನೋಯ್ಡಾದಲ್ಲಿರುವ ಸೂಪರ್‌ಟೆಕ್‌ನ ಅವಳಿ ಗೋಪುರಗಳನ್ನು ಇಂದು (ಆಗಸ್ಟ್ 28, 2022) ಕೆಡವಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ನೋಯ್ಡಾದ ಸೆಕ್ಟರ್ 93A ನ ಎಮರಾಲ್ಡ್ ಕೋರ್ಟ್ ಪ್ರಾಜೆಕ್ಟ್‌ನಲ್ಲಿ ಸುಮಾರು 100 ಮೀಟರ್ ಎತ್ತರದ ರಚನೆಯುಳ್ಳ ಈ ಸೂಪರ್ ಟವರ್ ನ್ನು 15 ಸೆಕೆಂಡುಗಳಿಗಿಂತ ಕಡಿಮೆ ಅವಧಿಯಲ್ಲಿ ನೆಲಸಮಗೊಳಿಸಲಾಗುತ್ತಿದೆ. ಅವಳಿ ಗೋಪುರಗಳ ಧ್ವಂಸವು ಮಧ್ಯಾಹ್ನ 2.30 ಕ್ಕೆ ನಡೆಯಲಿದೆ ಎಂದು ನೋಯ್ಡಾ ಪ್ರಾಧಿಕಾರದ ಸಿಇಒ ರಿತು ಮಹೇಶ್ವರಿ ತಿಳಿಸಿದ್ದಾರೆ.

ಎಮರಾಲ್ಡ್ ಕೋರ್ಟ್ ಸೊಸೈಟಿ ಆವರಣದಲ್ಲಿ ನಿಯಮಾವಳಿಗಳನ್ನು ಉಲ್ಲಂಘಿಸಿ ಕಟ್ಟಡಗಳನ್ನು ನಿರ್ಮಿಸಿರುವುದನ್ನು ಗಮನಿಸಿ ಸುಪ್ರೀಂ ಕೋರ್ಟ್ ಆದೇಶದ ಅನುಸಾರವಾಗಿ ಕಟ್ಟಡಗಳನ್ನು ಧ್ವಂಸಗೊಳಿಸಲು 3,700 ಕೆಜಿ ಸ್ಫೋಟಕಗಳನ್ನು ಬಳಸಲಾಗುತ್ತಿದೆ. 

ಇದನ್ನೂ ಓದಿ: Ideal Woman: ಓರ್ವ ಆದರ್ಶ ಮಹಿಳೆಯಲ್ಲಿ ಯಾವ ಗುಣಗಳಿರಬೇಕು? ನಿಮಗೆ ಗೊತ್ತಿದೆಯಾ?

ಸೆಕ್ಟರ್ 93A ನಲ್ಲಿರುವ ಎಮರಾಲ್ಡ್ ಕೋರ್ಟ್ ಮತ್ತು ಪಕ್ಕದ ಎಟಿಎಸ್ ವಿಲೇಜ್ ಸೊಸೈಟಿಗಳ ಸುಮಾರು 5,000 ನಿವಾಸಿಗಳನ್ನು ಇಂದು ಬೆಳಿಗ್ಗೆ 7 ಗಂಟೆಯೊಳಗೆ ತಮ್ಮ ನಿವೇಶನಗಳನ್ನು ಖಾಲಿ ಮಾಡುವಂತೆ ತಿಳಿಸಲಾಗಿದೆ.

ಅವಳಿ ಗೋಪುರಗಳ ಪಕ್ಕದಲ್ಲಿರುವ ಹತ್ತಿರದ ಕಟ್ಟಡಗಳೆಂದರೆ ಎಮರಾಲ್ಡ್ ಕೋರ್ಟ್ ಸೊಸೈಟಿಯ ಆಸ್ಟರ್ 2 ಮತ್ತು ಆಸ್ಟರ್ 3. ಈ ಕಟ್ಟಡಗಳಿಂದ ಅವು ಕೇವಲ ಒಂಬತ್ತು ಮೀಟರ್ ದೂರದಲ್ಲಿದೆ. ಇತರ ಕಟ್ಟಡಗಳಿಗೆ ಯಾವುದೇ ಹಾನಿಯಾಗದಂತೆ ನೆಲಸಮಗೊಳಿಸುವ ಪ್ರಕ್ರಿಯೆಯನ್ನು ಮಾಡಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮುಂಬೈ ಮೂಲದ ಎಡಿಫೈಸ್ ಇಂಜಿನಿಯರಿಂಗ್  ಸಂಸ್ಥೆ, ಸುರಕ್ಷಿತವಾಗಿ ಕಟ್ಟಡಗಳನ್ನು ನೆಲಸಮ ಮಾಡುವ ಜವಾಬ್ದಾರಿಯನ್ನು ವಹಿಸಿಕೊಂಡಿದೆ. ಎಡಿಫೈಸ್ ಈ ಯೋಜನೆಗಾಗಿ ದಕ್ಷಿಣ ಆಫ್ರಿಕಾದ ತಜ್ಞರಾದ ಜೆಟ್ ಡೆಮಾಲಿಷನ್ಸ್‌ ನ್ನು ಸಹ ತೊಡಗಿಸಿಕೊಂಡಿದೆ. ಇಡೀ ಕಾರ್ಯಾಚರಣೆಯನ್ನು ಸ್ಥಳೀಯ ನೋಯ್ಡಾ ಪ್ರಾಧಿಕಾರವು ಮೇಲ್ವಿಚಾರಣೆ ನಡೆಸಲಿದೆ.

ಮೂವರು ವಿದೇಶಿ ತಜ್ಞರು, ಎಡಿಫೈಸ್ ಇಂಜಿನಿಯರಿಂಗ್‌ನ ಪ್ರಾಜೆಕ್ಟ್ ಮ್ಯಾನೇಜರ್ ಮಯೂರ್ ಮೆಹ್ತಾ, ಇಂಡಿಯನ್ ಬ್ಲಾಸ್ಟರ್ ಚೇತನ್ ದತ್ತಾ ಮತ್ತು ಪೊಲೀಸ್ ಅಧಿಕಾರಿ ಸೇರಿದಂತೆ ಆರು ಜನರು ಮಾತ್ರ ಈ ವಲಯದಲ್ಲಿ ಇರಲಿದ್ದಾರೆ.

ಭಾನುವಾರ ಬೆಳಗ್ಗೆಯಿಂದ ನೋಯ್ಡಾ ಸೆಕ್ಟರ್ 93A ನಲ್ಲಿ ಅವಳಿ ಗೋಪುರಗಳ ಕಡೆಗೆ ಹೋಗುವ ಮಾರ್ಗವನ್ನು ತಡೆಯಲಾಗಿದ್ದು, ಪರ್ಯಾಯ ವ್ಯವಸ್ಥೆಯನ್ನು ಮಾಡಲಾಗಿದೆ. ನೋಯ್ಡಾ-ಗ್ರೇಟರ್ ನೋಯ್ಡಾ ಎಕ್ಸ್‌ಪ್ರೆಸ್‌ವೇ, ಡೆಮಾಲಿಷನ್ ಸೈಟ್‌ನಿಂದ ಕೇವಲ 200 ಮೀಟರ್‌ಗಳಷ್ಟು ದೂರದಲ್ಲಿದ್ದು, ವಾಹನ ಸಂಚಾರವನ್ನು ಮಧ್ಯಾಹ್ನ 2 ರಿಂದ 3 ರವರೆಗೆ ಬಂದ್ ಮಾಡಲಾಗುತ್ತದೆ.

ಇನ್ನು ಅವಳಿ ಗೋಪುರಗಳನ್ನು ನೆಲಸಮ ಮಾಡುವ ಸಂದರ್ಭದಲ್ಲಿ ಮತ್ತು ಬಳಿಕ, ಆ ಸ್ಥಳಗಳಲ್ಲಿ ವಾಸಿಸುವ ಜನರು ಮಾಸ್ಕ್ ಗಳನ್ನು ಧರಿಸುವಂತೆ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಾಧಿಕಾರವು ವಿಶೇಷವಾಗಿ ಸಮೀಪದ ಪಾರ್ಶ್ವನಾಥ್ ಪ್ರೆಸ್ಟೀಜ್, ಪಾರ್ಶ್ವನಾಥ ಸೃಷ್ಟಿ ಸೊಸೈಟಿಗಳು, ಗೆಜಾ ವಿಲೇಜ್ ನಿವಾಸಿಗಳು ಮತ್ತು ಸೆಕ್ಟರ್ 93, 93A, 93B, ಮತ್ತು 92 ರಲ್ಲಿರುವ ಇತರರಿಗೆ ಮಧ್ಯಾಹ್ನ 2.30 ರ ನಂತರ ಮಾಸ್ಕ್ ಗಳನ್ನು ಧರಿಸಲು ಸೂಚಿಸಿದೆ.

ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಸುಮಾರು 400 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಮತ್ತು PAC, NDRF ಸಿಬ್ಬಂದಿ ಕೂಡ ಸ್ಥಳದಲ್ಲಿ ನಿಯೋಜನೆಗೊಂಡಿದ್ದಾರೆ.

ನೊಯ್ಡಾ ಅವಳಿ ಗೋಪುರಗಳನ್ನು ಎಮರಾಲ್ಡ್ ಕೋರ್ಟ್ ಸೊಸೈಟಿ ಆವರಣದಲ್ಲಿ ನಿಯಮಾವಳಿಗಳನ್ನು ಉಲ್ಲಂಘಿಸಿ ನಿರ್ಮಿಸಿರುವುದನ್ನು ಕಂಡು 2021 ರ ಆಗಸ್ಟ್‌ನ ಸುಪ್ರೀಂ ಕೋರ್ಟ್ ಆದೇಶದ ಅನುಸಾರವಾಗಿ ಕೆಡವಲಾಗುತ್ತಿದೆ.

ಕಳೆದ ವರ್ಷ ಆಗಸ್ಟ್ 31 ರಂದು, ನೊಯ್ಡಾ ಅಧಿಕಾರಿಗಳೊಂದಿಗೆ ಮಾಡಿದ ಒಪ್ಪಂದದಲ್ಲಿ ಕಟ್ಟಡದ ನಿಯಮಗಳ ಉಲ್ಲಂಘನೆಗಾಗಿ ನಿರ್ಮಾಣ ಹಂತದಲ್ಲಿರುವ ಟವರ್‌ಗಳನ್ನು ಮೂರು ತಿಂಗಳೊಳಗೆ ಕೆಡವಲು ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. 

ಇದನ್ನೂ ಓದಿ: Team India : ದುಬೈನಲ್ಲಿ ಭಾರತ ತಂಡ ತಂಗಿರುವ ಐಷಾರಾಮಿ ಹೋಟೆಲ್ : ದಿನದ ಬಾಡಿಗೆ ಕೇಳಿದ್ರೆ ಶಾಕ್ ಆಗ್ತೀರಾ!

ಮನೆ ಖರೀದಿದಾರರ ಸಂಪೂರ್ಣ ಮೊತ್ತವನ್ನು ಬುಕಿಂಗ್‌ನಿಂದ ಶೇಕಡಾ 12 ರಷ್ಟು ಬಡ್ಡಿಯೊಂದಿಗೆ ಮರುಪಾವತಿಸಬೇಕು ಮತ್ತು ಅವಳಿ ಗೋಪುರಗಳ ನಿರ್ಮಾಣದಿಂದ ಉಂಟಾದ ಕಿರುಕುಳಕ್ಕಾಗಿ ಆರ್‌ಡಬ್ಲ್ಯೂಎ ಆಫ್ ಎಮರಾಲ್ಡ್ ಕೋರ್ಟ್ ಪ್ರಾಜೆಕ್ಟ್‌ಗೆ 2 ಕೋಟಿ ರೂ ಪಾವತಿಸಬೇಕೆಂದು ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ.  

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News