ಪಿಎಫ್ಐ ವಿರುದ್ಧ ದಾಖಲೆಗಳಿದ್ದರೆ ಜನರ ಮುಂದೆ ಇಡಿ : ಹೆಚ್‌ಡಿಕೆ

ಪಿಎಫ್​ಐ ವಿರುದ್ಧ ದಾಖಲೆಗಳಿದ್ದರೆ ಜನರ ಮುಂದೆ ಇಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಸರಕಾರವನ್ನು ಒತ್ತಾಯ ಮಾಡಿದರು. 

Written by - Chetana Devarmani | Last Updated : Sep 28, 2022, 05:55 PM IST
  • ಪಿಎಫ್ಐ ವಿರುದ್ಧ ದಾಖಲೆಗಳಿದ್ದರೆ ಜನರ ಮುಂದೆ ಇಡಿ
  • ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆಗ್ರಹ
  • ಬಿಎಂಎಸ್ ಟ್ರಸ್ಟ್ ವಿಚಾರದಲ್ಲಿ ಸರಕಾರದ್ದು ಭಂಡತನ
ಪಿಎಫ್ಐ ವಿರುದ್ಧ ದಾಖಲೆಗಳಿದ್ದರೆ ಜನರ ಮುಂದೆ ಇಡಿ : ಹೆಚ್‌ಡಿಕೆ  title=
ಹೆಚ್.ಡಿ.ಕುಮಾರಸ್ವಾಮಿ

ರಾಮನಗರ: ಪಿಎಫ್​ಐ ವಿರುದ್ಧ ದಾಖಲೆಗಳಿದ್ದರೆ ಜನರ ಮುಂದೆ ಇಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಸರಕಾರವನ್ನು ಒತ್ತಾಯ ಮಾಡಿದರು. ಪಿಎಫ್​ಐ ಸಂಘಟನೆ ವಿಚಾರವಾಗಿ ಈಗಾಗಲೇ ನಾನು ಹೇಳಿದ್ದೇನೆ. ಯಾವುದೇ ಸಂಘಟನೆಗಳು ಸಮಾಜಘಾತುಕ ಚಟುವಟಿಕೆಯಲ್ಲಿ ತೊಡಗಿದರೆ ಕಠಿಣ ಕ್ರಮ ಆಗಬೇಕು. ಎನ್​ಐಎ ದಾಳಿಯ ಸತ್ಯಾಂಶಗಳನ್ನು ಜನತೆ ಮುಂದೆ ಇಡಬೇಕು. ಯಾವ ಯಾವ ಸಂಘಟನೆಗಳಿಂದ ದೇಶ ದ್ರೋಹದ ಕೆಲಸ ಆಗಿದೆ‌? ಯಾವ ರೀತಿ ಗಲಭೆ ಸೃಷ್ಟಿಗೆ ಪ್ರೋತ್ಸಾಹ ಕೊಡುತ್ತಿದ್ದಾರೆ ಎಂಬ ಮಾಹಿತಿಯನ್ನು ಜನತೆ ಮುಂದೆ ಇಡಬೇಕು. ಇದು ಕೇಂದ್ರ ಸರ್ಕಾರದ ಕರ್ತವ್ಯ ಎಂದು ಅವರು ಪ್ರತಿಪಾದಿಸಿದರು.

ಇದನ್ನೂ ಓದಿ : ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: ಫ್ರೀ ರೇಷನ್ ಕುರಿತು ಮೋದಿ ಸರ್ಕಾರದಿಂದ ಮಹತ್ವದ ಘೋಷಣೆ

ಪಿಎಫ್ಐ ಸಂಘಟನೆ ನಿಷೇಧ ಮಾಡಿದ ತಕ್ಷಣ ಸಂಪೂರ್ಣ ಶಾಂತಿ ನೆಲಸುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸೌಹಾರ್ದತೆ ಬೆಳೆಸುವ ಕೆಲಸವನ್ನು ಸರ್ಕಾರ ಮಾಡಬೇಕು.ಯಾವುದೇ ಒಂದು ಸಂಘಟನೆ ನಿಷೇಧ ಮಾಡಿದರೆ ಶಾಂತಿ ನೆಲೆಸಲ್ಲ ಎಂದರು.

ಬಿಎಂಎಸ್ ಟ್ರಸ್ಟ್ ವಿಚಾರದಲ್ಲಿ ಸರಕಾರದ್ದು ಭಂಡತನ:

ಬಿಎಂಎಸ್ ಟ್ರಸ್ಟ್ ವಿಚಾರದಲ್ಲಿ ಸಚಿವರ ಭ್ರಷ್ಟಾಚಾರ ಸಂಬಂಧ ಸದನದ ಮುಂದೆ ಎಲ್ಲಾ ದಾಖಲೆಗಳನ್ನು ಇಟ್ಟಿದ್ದೇನೆ. ಈ ಪ್ರಕರಣವನ್ನು ತನಿಖೆಗೆ ವಹಿಸದೇ ಬಿಜೆಪಿ ಸರ್ಕಾರ ಭಂಡತನ ಪ್ರದರ್ಶಿಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಚನ್ನಪಟ್ಟಣ ತಾಲೂಕಿನ ಕನ್ನಮಂಗಲ ಗ್ರಾಮದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮುಖ್ಯಮಂತ್ರಿಗಳ‌ ಸಮೇತ, ಒಬ್ಬ ಮಂತ್ರಿ ಕೂಡ ಮಾತನಾಡಿಲಿಲ್ಲ. ದಾಖಲೆ ನೀಡಿದರೆ ಒಬ್ಬರು ಮಾತನಾಡಲಿಲ್ಲ. ಅವರಿಗೆ ನೈತಿಕತೆ ಇಲ್ಲ, ಎಲ್ಲರೂ ತಲೆ ತಗ್ಗಿಸಿಕೊಂಡು ಕೂತಿದ್ದರು ಎಂದರು.

ಪಗಡೆ ಆಟದಲ್ಲಿ ದ್ರೌಪದಿಯನ್ನು ಪಣಕ್ಕೆ ಇಟ್ಟು ಧರ್ಮರಾಯ ಸೋತ ಸಂದರ್ಭದಲ್ಲಿ ಭೀಷ್ಮ, ದ್ರೋಣಾಚಾರ್ಯ ಸೇರಿದಂತೆ ಎಲ್ಲರೂ ಮೂಕವಿಸ್ಮಿತವಾಗಿ ಕೂತಿದ್ದರಲ್ಲ, ಅದೇ ಪರಿಸ್ಥಿತಿ ನಾನು ಅವತ್ತು ದಾಖಲೆ ಬಿಡುಗಡೆ ಮಾಡಿದ್ದಾಗ ಸದನದಲ್ಲಿ ಕಂಡಿತ್ತು ಎಂದು ಕುಟುಕಿದರು.

ನಾನು ಯಾವುದಕ್ಕೂ ಹೆದರುವುದಿಲ್ಲ. ಸದನದಲ್ಲಿ ಮುಖ್ಯಮಂತ್ರಿಗಳಿಂದ ಏನಾದರೂ ಉತ್ತರ ಬಂತಾ?. ಬಿಎಂಎಸ್ ಟ್ರಸ್ಟ್ ಪಬ್ಲಿಕ್ ಪ್ರಾಪರ್ಟಿ. ಖಾಸಗಿ ವ್ಯಕ್ತಿಗೆ ಸರ್ಕಾರದ ಆಸ್ತಿ ಹೋಗುತ್ತಿದೆ. ಸದನದಲ್ಲಿ ದಾಖಲೆ ಸಮೇತ ಇಟ್ಟಿದ್ದಕ್ಕೆ ಇವರ ಬಳಿ ಉತ್ತರ ಇಲ್ಲ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಬಿಎಂಎಸ್ ಟ್ರಸ್ಟ್ ಹಗರಣ ವಿಚಾರವಾಗಿ ಸದನದಲ್ಲಿ ಸಮರ್ಥವಾಗಿ ಉತ್ತರ ಕೊಟ್ಟಿದ್ದೇನೆ ಎಂಬ ಅಶ್ವತ್ಥ​ ನಾರಾಯಣ ಹೇಳಿಕೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ಅವರು, ಈ ಸರ್ಕಾರ ಭಂಡತನದಿಂದ ವರ್ತಿಸುತ್ತಿದೆ. ಇಂತಹವರಿಗೆ  ಏನು ಹೇಳಲು ಸಾಧ್ಯ?. ಸದನದಲ್ಲಿ ಮುಖ್ಯಮಂತ್ರಿಯಾದಿಯಾಗಿ ಎಲ್ಲರೂ ಮೌನಕ್ಕೆ  ಶರಣಾಗಿದ್ದು ಯಾಕೆ?,  ಯಾರು ಸಹ ಅಶ್ವತ್ಥ​ನಾರಾಯಣ ಬೆಂಬಲಕ್ಕೆ ನಿಲ್ಲಲಿಲ್ಲ ಏಕೆ? ಕೋಟ್ಯಾಂತರ ರೂ. ಹಣ ಲೂಟಿ ಮಾಡಿದ್ದಾರೆ. ಮುಂದೆ ಜನ ಇವರಿಗೆ ಬುದ್ಧಿ ಕಲಿಸುತ್ತಾರೆ ಎಂದು ಟೀಕಿಸಿದರು.

ಇದನ್ನೂ ಓದಿ : ಕೇರಳದಲ್ಲಿ ಕಿಂಗ್ ಕೊಹ್ಲಿ ಬೃಹತ್ ಫ್ಲೆಕ್ಸ್ : ಫೋಟೋ ವೈರಲ್

ಬಿಎಂಎಸ್ ಟ್ರಸ್ಟ್ ವಿಚಾರವನ್ನು ಅಷ್ಟು ಸುಲಭವಾಗಿ ನಾನು ಬಿಡುವುದಿಲ್ಲ. ಕಾನೂನಾತ್ಮಕ ಕ್ರಮ ತೆಗೆದುಕೊಳ್ಳುವಂತೆ ಮಾಡುತ್ತೇನೆ. ಪ್ರಧಾನ ಮಂತ್ರಿಗಳು ಭ್ರಷ್ಟಾಚಾರ ನಿಲ್ಲಿಸುತ್ತೇನೆ ಅಂತಾ ಹೇಳುತ್ತಾರೆ. ಈಗ ದಾಖಲೆ ಸಮೇತ ಕಳುಹಿಸುತ್ತೇನೆ. ಏನು ಉತ್ತರ ಕೊಡುತ್ತಾರೋ ನೋಡೋಣ ಎಂದರು.
 
ಕಾಂಗ್ರೆಸ್ ಯಾತ್ರೆಗೆ ಟಾಂಗ್:

ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಹೆಚ್ ಡಿಕೆ, ಭಾರತ ಯಾವಾಗ ಒಡೆದು ಹೋಗಿದೆ ಅನ್ನೋದು ನನಗೆ ಗೊತ್ತಿಲ್ಲ. ಭಾರತ ಜೋಡೋ ಮುಖಾಂತರ ದೇಶವನ್ನು ಒಗ್ಗೂಡಿಸುತ್ತೇವೆ ಅಂತಾ ಕಾಂಗ್ರೆಸ್ ನಾಯಕರು ಹೊರಟಿದ್ದಾರೆ. ಯಾವಾಗ ದೇಶ ಛಿದ್ರ ಆಗಿದೆಯೆಂದು ನನಗೆ ಗೊತ್ತಿಲ್ಲ. ಛಿದ್ರ ಆಗಿದ್ರೆ ಕಾರ್ಯಕ್ರಮದ ಮುಖಾಂತರ ಅದನ್ನು ಹೇಗೆ ಸರಿಪಡಿಸುತ್ತಾರೆ ಎನ್ನುವುದನ್ನು ಜನರ ಮುಂದೆ ಇಡಬೇಕು ಎಂದು ಟಾಂಗ್ ನೀಡಿದರು.

ರಾಜ್ಯದಲ್ಲಿ ಹಲವಾರು ಸಮಸ್ಯೆಗಳಿವೆ. ಅದರ ವಿರುದ್ಧ ನಾವು ಹೋರಾಡಬೇಕು. ಕಾಂಗ್ರೆಸ್​ನವರು ಭಾರತ್ ಜೋಡೋ, ಪೇಸಿಎಂ ಮುಖಾಂತರ ಜನರ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಿದೆಯೇ? ಎಂದು ಅವರು ಪ್ರಶ್ನಿಸಿದರು. ಮಾಗಡಿ ಶಾಸಕ ಮಂಜುನಾಥ್ ಸೇರಿದಂತೆ ಸ್ಥಳೀಯ ಮುಖಂಡರು ಹಾಜರಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News