ಲಂಡನ್: ಈ ವರ್ಷದ ಪುರುಷರ ಟಿ 20 ವಿಶ್ವಕಪ್ ಅನ್ನು ಮುಂದಿನ ವರ್ಷದ ಆರಂಭಕ್ಕೆ ಮುಂದೂಡಬೇಕು ಮತ್ತು ಟಿ 20 ವಿಶ್ವಕಪ್ ಬದಲಿಗೆ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಆಯೋಜಿಸುವಂತೆ ನ್ಯೂಜಿಲೆಂಡ್ ಮಾಜಿ ನಾಯಕ ಮತ್ತು ಐಪಿಎಲ್ ಫ್ರ್ಯಾಂಚೈಸ್ ಕೆಕೆಆರ್ ತರಬೇತುದಾರ ಬ್ರೆಂಡನ್ ಮೆಕಲಮ್ ಬುಧವಾರ ಹೇಳಿದ್ದಾರೆ.
ಕೊರೊನಾವೈರಸ್ (Coronavirus) ಸಾಂಕ್ರಾಮಿಕವು ಪ್ರಪಂಚದಾದ್ಯಂತದ ಎಲ್ಲಾ ಕ್ರೀಡಾ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದೆ ಮತ್ತು ಅಕ್ಟೋಬರ್ 18ರಿಂದ ನವೆಂಬರ್ 15ರವರೆಗೆ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ 2020ರ ಟಿ-20 ವಿಶ್ವಕಪ್ ಅನ್ನು ಮುಂದೂಡುವ ಸಾಧ್ಯತೆ ಇದೆ. ಈ ಕಾರಣದಿಂದಾಗಿ ಮಾರ್ಚ್ 29 ರಂದು ಪ್ರಾರಂಭವಾಗಬೇಕಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ನ 13 ನೇ ಆವೃತ್ತಿಯನ್ನು ಸಹ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಐಪಿಎಲ್ ಅಕ್ಟೋಬರ್ ವಿಂಡೋವನ್ನು ಪಡೆಯಲು ಪ್ರಯತ್ನಿಸುತ್ತದೆ ಮತ್ತು ಟಿ 20 ವಿಶ್ವಕಪ್ ಮುಂದಿನ ವರ್ಷಕ್ಕೆ ಮುಂದೂಡಬಹುದು ಎಂದು ತಾವು ಭಾವಿಸುತ್ತಿರುವುದಾಗಿ ಮೆಕಲಮ್ ಹೇಳಿದರು.
ಇದರೊಂದಿಗೆ ಮಹಿಳಾ ಏಕದಿನ ವಿಶ್ವಕಪ್ ಫೆಬ್ರವರಿ 2021ರಲ್ಲಿ ನ್ಯೂಜಿಲೆಂಡ್ನಲ್ಲಿ ನಡೆಯಲಿದೆ. ಈ ಬಗ್ಗೆಯೂ ಪ್ರತಿಕ್ರಿಯೆ ನೀಡಿರುವ ಐಪಿಎಲ್ ತಂಡದ ಕೋಲ್ಕತಾ ನೈಟ್ ರೈಡರ್ಸ್ನ ತರಬೇತುದಾರ ಮೆಕಲಮ್ಮಹಿಳಾ ವಿಶ್ವಕಪ್ ಅನ್ನು ಮತ್ತಷ್ಟು ವಿಸ್ತರಿಸಬೇಕು ಆದರೆ ಎಲ್ಲಾ ಮೂರು ಪಂದ್ಯಾವಳಿಗಳನ್ನು ನಾವು ನೋಡಬಹುದು ಎಂದರು.
ಟಿ 20 ವಿಶ್ವಕಪ್ ಅನ್ನು ಪ್ರೇಕ್ಷಕರಿಲ್ಲದೆ ಆಡಲಾಗುವುದು ಎಂದು ತಾನು ಭಾವಿಸಿರಲಿಲ್ಲ ಮತ್ತು ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ಉಂಟಾದ ಪ್ರಯಾಣದ ನಿರ್ಬಂಧದಿಂದಾಗಿ 16 ದೇಶಗಳ ತಂಡಗಳು ಆಸ್ಟ್ರೇಲಿಯಾವನ್ನು ತಲುಪಲು ಸಾಧ್ಯವಿಲ್ಲ ಎಂದು ಮೆಕಲಮ್ ಹೇಳಿದ್ದಾರೆ. ಐಪಿಎಲ್ ಆಡದಿದ್ದರೆ ಯಾವುದೇ ಆಟಗಾರ ಅಥವಾ ಸಹಾಯಕ ಸಿಬ್ಬಂದಿಗೆ ಪಾವತಿಸಲಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಏತನ್ಮಧ್ಯೆ ಕೋವಿಡ್ -19 ನಿಂದ ಉಂಟಾಗುವ ಆರ್ಥಿಕ ಪರಿಣಾಮ ಮತ್ತು ಟಿ 20 ವಿಶ್ವಕಪ್ ಸೇರಿದಂತೆ ಎಲ್ಲಾ ಐಸಿಸಿ ಜಾಗತಿಕ ಸ್ಪರ್ಧೆಗಳ ಯೋಜನೆ ಕುರಿತು ಚರ್ಚಿಸಲು ಐಸಿಸಿ ಮುಖ್ಯ ಕಾರ್ಯಕಾರಿ ಸಮಿತಿ ಗುರುವಾರ ಕಾನ್ಫರೆನ್ಸ್ ಕರೆಯ ಮೂಲಕ ಸಭೆ ಸೇರಲಿದೆ.