ನವದೆಹಲಿ: ಯೂಗೊವ್ ನಡೆಸಿದ ಇತ್ತೀಚಿನ ಸಮೀಕ್ಷೆಯ ಪ್ರಕಾರ, ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಭಾರತದ ಅತ್ಯಂತ ಮೆಚ್ಚುಗೆ ಪಡೆದ ಕ್ರೀಡಾಪಟು ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ವಿಶೇಷ ವೆಂದರೆ ಅವರು ಭಾರತದ ನಾಯಕ ವಿರಾಟ್ ಕೊಹ್ಲಿ ಅವರನ್ನು ಸಹಿತ ಹಿಂದಿಕ್ಕಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯ ನಂತರ ಧೋನಿ ಒಟ್ಟಾರೆ ಎರಡನೇ ಸ್ಥಾನದಲ್ಲಿದ್ದಾರೆ. ಧೋನಿ ಶೇ 8.58 ರ ಮೆಚ್ಚುಗೆಯ ಸ್ಕೋರ್ ಗಳಿಸಿದರೆ, ಮೋದಿ ಶೇ 15.66 ರಷ್ಟು ಮೆಚ್ಚುಗೆಯ ಅಂಕಗಳನ್ನು ಗಳಿಸಿದ್ದಾರೆ. ಇವರ ನಂತರದ ಸ್ಥಾನವನ್ನು ಭಾರತೀಯ ಕೈಗಾರಿಕೋದ್ಯಮಿ ರತನ್ ಟಾಟಾ ಶೇ 8.02. ಅಂಕ ಪಡೆಯುವ ಮೂಲಕ ಮೂರನೇ ಸ್ಥಾನದಲ್ಲಿದ್ದಾರೆ.
ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಶೇಕಡಾ 7.36 ಕ್ಕೆ ನಾಲ್ಕನೇ ಸ್ಥಾನದಲ್ಲಿದ್ದರೆ, ಅಮೆರಿಕದ ಉದ್ಯಮಿ ಬಿಲ್ ಗೇಟ್ಸ್ ಐದನೇ ಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ ಏಳನೇ ಸ್ಥಾನದಲ್ಲಿರೆ, ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರು 6 ನೇ ಸ್ಥಾನದಲ್ಲಿದ್ದಾರೆ. ಇತರ ಕ್ರೀಡಾ ವ್ಯಕ್ತಿಗಳಲ್ಲಿ, ಬಾರ್ಸಿಲೋನಾ ತಾಲಿಸ್ಮನ್ ಲಿಯೋನೆಲ್ ಮೆಸ್ಸಿಗಿಂತ ಜುವೆಂಟಸ್ ಫಾರ್ವರ್ಡ್ ಕ್ರಿಸ್ಟಿಯಾನೊ ರೊನಾಲ್ಡೊ ಹೆಚ್ಚು ಮೆಚ್ಚುಗೆ ಪಡೆದಿದ್ದಾರೆ.
ಭಾರತದ ಬಾಕ್ಸರ್ ಮೇರಿ ಕೋಮ್ ಭಾರತದಲ್ಲಿ ಹೆಚ್ಚು ಮೆಚ್ಚುಗೆ ಪಡೆದ ಮಹಿಳೆಯಾಗಿದ್ದು, ಶೇಕಡಾ 10.36 ರಷ್ಟು ಮೆಚ್ಚುಗೆ ಗಳಿಸಿದ್ದಾರೆ. ಮಹಿಳಾ ವಿಭಾಗದಲ್ಲಿ ಅಗ್ರ -25 ರಲ್ಲಿ ಸ್ಥಾನ ಪಡೆದ ಏಕೈಕ ಕ್ರೀಡಾಪಟುವಾಗಿದ್ದಾರೆ.