IPL 2022, RCB vs KKR: ಕೆಕೆಆರ್ ವಿರುದ್ಧ ಆರ್‌ಸಿಬಿಗೆ ರೋಚಕ ಗೆಲುವು

ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ರೋಚಕ ಗೆಲುವು ಸಾಧಿಸಿತು.

Written by - Zee Kannada News Desk | Last Updated : Mar 31, 2022, 12:27 AM IST
  • ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ರೋಚಕ ಗೆಲುವು ಸಾಧಿಸಿದ ಆರ್ ಸಿಬಿ
  • ಆರ್ ಸಿಬಿ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿ ಹೋದ ಶ್ರೇಯಸ್ ಅಯ್ಯರ್ ಪಡೆ
  • ಕೊನೆವರೆಗೂ ಹೋರಾಟ ನಡೆಸಿ ಕೆಕೆಆರ್ ವಿರುದ್ಧ ಗೆಲುವು ಸಾಧಿಸಿದ ಆರ್ ಸಿಬಿ
IPL 2022, RCB vs KKR: ಕೆಕೆಆರ್ ವಿರುದ್ಧ ಆರ್‌ಸಿಬಿಗೆ ರೋಚಕ ಗೆಲುವು title=
ಕೆಕೆಆರ್ ವಿರುದ್ಧ ಆರ್‌ಸಿಬಿಗೆ ಗೆಲುವು

ನವದೆಹಲಿ: ಬುಧವಾರ ರಾತ್ರಿ ನಡೆದ ಐಪಿಎಲ್‌ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ರೋಚಕ ಗೆಲುವು ಸಾಧಿಸಿತು. ಟಾಸ್ ಗೆದ್ದ ಆರ್‌ಸಿಬಿ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಶ್ರೇಯಸ್ ಅಯ್ಯರ್ ನೇತೃತ್ವದ ಕೆಕೆಆರ್ ತಂಡವು ರನ್ ಗಳಿಸಲು ತಿಣುಕಾಡಿತು.

ಆರ್‌ಸಿಬಿ ಬೌಲರ್ ಗಳ ಕರಾರುವಾಕ್ಕು ಬೌಲಿಂಗ್ ದಾಳಿಗೆ ತತ್ತರಿಸಿ ಹೋದ ಕೆಕೆಆರ್ 18.5 ಓವರ್ ಗಳಲ್ಲಿ ಕೇವಲ 128 ರನ್‍ಗಳಿಗೆ ಆಲೌಟ್ ಆಯಿತು. ಸುಲಭ ಗೆಲುವಿನ ಗುರಿ ಬೆನ್ನತ್ತಿದ ಆರ್‌ಸಿಬಿ ಆರಂಭದಲ್ಲಿಯೇ ಆಘಾತ ಅನುಭಿಸಿತು. ಬಳಿಕ ಚೇತರಿಸಿಕೊಂಡು ಆಡಿ ಗುರಿ ಮುಟ್ಟುವವರೆಗೂ ಹೋರಾಟ ನಡೆಸಿ ಗೆಲುವಿನ ನಗೆ ಬೀರಿತು.

ಅಂತಿಮ ಹಂತದವರೆಗೂ ಜಿದ್ದಾಜಿದ್ದಿನ ಹಣಾಹಣಿ

ಉಭಯ ತಂಡಗಳ ನಡುವೆ ಗೆಲುವಿಗಾಗಿ ಅಂತಿಮ ಹಂತದವರೆಗೂ ಜಿದ್ದಾಜಿದ್ದಿನ ಹಣಾಹಣಿ ನಡೆಯಿತು. ಆದರೆ ಮೇಲುಗೈ ಸಾಧಿಸಿದ ಆರ್‌ಸಿಬಿ 15ನೇ ಆವೃತ್ತಿಯ ಐಪಿಎಲ್ ಟೂರ್ನಿಯ ತನ್ನ 2ನೇ ಪಂದ್ಯದಲ್ಲಿ ಕೆಕೆಆರ್ ವಿರುದ್ಧ 3 ವಿಕೆಟ್‌ಗಳಿಂದ ಗೆಲುವು ಸಾಧಿಸಿತು.

128 ರನ್ ಗಳಿಗೆ ಕೆಕೆಆರ್ ಸರ್ವಪತನ!

ಕೆಕೆಆರ್ ನೀಡಿದ ಸಾಧಾರಣ ಮೊತ್ತದ ಗುರಿ ತಲುಪಲು ಆರ್‌ಸಿಬಿ ಕೊನೆಯ ಓವರ್‌ವರೆಗೂ ಹೋರಾಟ ನಡೆಸಿ ಟೂರ್ನಿಯಲ್ಲಿ ಮೊದಲ ಗೆಲುವಿನ ಸಂಭ್ರಮ ಕಂಡಿತು. ಡಾ. ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಸ್ಪಿನ್ನರ್ ವನಿಂದು ಹಸರಂಗ (20ಕ್ಕೆ 4), ವೇಗಿಗಳಾದ ಆಕಾಶ್ ದೀಪ್ (45ಕ್ಕೆ 3) ಮತ್ತು ಹರ್ಷಲ್ ಪಟೇಲ್ (11ಕ್ಕೆ 2) ಮಾರಕ ದಾಳಿಗೆ ಕೆಕೆಆರ್ ನಲುಗಿತು. ನಲುಗಿದ ಕೆಕೆಆರ್, 18.5 ಓವರ್‌ಗಳಲ್ಲಿ 128 ರನ್‌ಗಳಿಗೆ ಸರ್ವಪತನ ಕಂಡಿತು. ಕೆಕೆಆರ್ ಪರ ಬ್ಯಾಟಿಂಗ್ ನಲ್ಲಿ ಆಂಡ್ರೂ ರೆಸಲ್(25), ಉಮೇಶ್ ಯಾದವ್(18), ಸ್ಯಾಮ್ ಬಿಲ್ಲಿಂಗ್(14), ಶ್ರೇಯಸ್ ಅಯ್ಯರ್(13), ಸುನೀಲ್ ನಾರಾಯಣ್(12), ವೆಂಕಟೇಶ್ ಅಯ್ಯರ್ 10 ಮತ್ತು ನಿತೀಶ್ ರಾಣಾ(10) ರನ್ ಗಳಿಸಿದರು.

ಗೆಲುವಿನ ಗುರಿ ಬೆನ್ನತ್ತಿದ ಆರ್‌ಸಿಬಿ 19.2 ಓವರ್‌ಗಳಲ್ಲಿ 7 ವಿಕೆಟ್‌ಗೆ 132 ರನ್‌ ಗಳಿಸಿ ಜಯದ ನಗೆ ಬೀರಿತು. ಆರ್‌ಸಿಬಿ ಪರ ಶೆರ್ಫಾನೆ ರುದರ್ ಫೋರ್ಡ್​ (28), ಶಾಬಾಜ್ ಅಹಮದ್ (27), ಡೇವಿಡ್ ವಿಲ್ಲಿ(18), ವಿರಾಟ್ ಕೊಹ್ಲಿ(12), ದಿನೇಶ್ ಕಾರ್ತಿಕ್ ಔಟಾಗದೆ 14 ಮತ್ತು ಹರ್ಷಲ್ ಪಟೇಲ್ ಔಟಾಗದೆ 10 ರನ್ ಗಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ಕೆಕೆಆರ್ ಪರ ಬೌಲಿಂಗ್ ನಲ್ಲಿ ಟಿಮ್ ಸೌಥಿ 20ಕ್ಕೆ 3, ಉಮೇಶ್ ಯಾದವ್ 16ಕ್ಕೆ 2, ಸುನೀಲ್ ನಾರಾಯಣ್ 12ಕ್ಕೆ 1 ವಿಕೆಟ್ ಪಡೆದು ಮಿಂಚಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News